ಡಿವಿಜಿಸುದ್ದಿ.ಕಾಂ, ದಾವಣಗೆರೆ: ಬಜಾಜ್ ಫೈನಾನ್ಸ್ ನಿಂದ ನಕಲಿ ಲೋನ್ ಸೃಷ್ಟಿಸಿ ಗ್ರಾಹಕರಿಗೆ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ದೂರು ದಾಖಲಿಸಿ 2 ವರ್ಷಗಳಾದರೂ ಪೊಲೀಸರು ಕ್ರಮಕೈಗೊಳ್ಳುತ್ತಿಲ್ಲ ಎಂದು ವಕೀಲ ಬಿ.ಎಂ.ಸಿದ್ದಲಿಂಗಸ್ವಾಮಿ ಆರೋಪಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಹರಿಹರದ ಬಜಾಜ್ ಫೈನಾನ್ಸ್ ನ ಸಿಬ್ಬಂದಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವ ಗ್ರಾಹಕರಿಗೆ ಸಾಲ ನೀಡುವುದಾಗಿ ಅಮಾಯಕ ಗುರುತು, ವಿಳಾಸ ಹಾಗೂ ಬ್ಯಾಂಕ್ ದಾಖಲೆ ದುರ್ಬಳಕೆ ಮಾಡಿಕೊಂಡು ಸಾಲ ಸೃಷ್ಟಿಸಿದ್ದಾರೆ. ಅವರ ಬ್ಯಾಂಕ್ ಖಾತೆಗಳಿಂದ ಹಣ ಕಡಿತ ಮಾಡಿಕೊಳ್ಳುತ್ತಿದ್ದಾರೆ. ಇದಲ್ಲದೆ ಸುಳ್ಳು ಸಾಲದ ವಸೂಲಾತಿಗಾಗಿ ಗ್ರಾಹಕರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದರು.
ಈ ಬಗ್ಗೆ ಸ್ಥಳೀಯ ಪೊಲೀಸರು ದೂರು ದಾಖಲಿಸಲು ನಿರಾಕರಿಸುತ್ತಿದ್ದಾರೆ. ಅನ್ಯಾಯಕ್ಕೊಳಗಾದವರು ಬಜಾಜ್ ಫೈನಾನ್ಸ್ ನ ಎಂ.ಡಿ ಸಂಜೀವ್ ಬಜಾಜ್ ಮತ್ತು ಐಸಿಐಸಿಐ ಬ್ಯಾಂಕ್ ನ ಮಾಜಿ ಎಂ.ಡಿ, ಸಿಇಒ ಚಂದಾ ಕೊಚ್ಚರ್ ಸೇರಿದಂತೆ ಹಲವಾರ ವಿರುದ್ಧ 2017 ರಲ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ಖಾಸಗಿ ಪ್ರಕರಣ ದಾಖಲಿಸಲಾಗಿತ್ತು. ನ್ಯಾಯಾಲಯ ತನಿಖೆಗೆ ಆದೇಶ ಮಾಡಿ 2 ವರ್ಷ ಕಳೆದರು ಪೊಲೀಸರು ಅಂತಿಮ ವರದಿ ಸಲ್ಲಿಸಿಲ್ಲ. ತನಿಖೆಯ ಬಗ್ಗೆ ದೂರುದಾರರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಗ್ರಾಹಕರು ಪ್ರತಿ ತಿಂಗಳು ನ್ಯಾಯಾಲಯಕ್ಕೆ ಅಲೆದಾಡುತ್ತಾ ಸಂಕಷ್ಟ ಅನುಭವಿಸುತ್ತಿದ್ದಾರೆ. ನೂರಾರು ಗ್ರಾಹಕರಿಗೆ ಲಕ್ಷಾಂತರ ರೂ ವಂಚನೆಯಾಗಿದೆ. ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕಾಗಿತ್ತು. ಆದರೆ ನ್ಯಾಯಾಲಯದ ಆದೇಶವಿದ್ದರೂ ಸಹ ಆರೋಪಿಗಳನ್ನು ಬಂಧಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಂಚನೆಗೊಳಗಾದ ಗೃಹಿಣಿ ಮೀನಾಕ್ಷಿ ಮಾತನಾಡಿ, ಯುಪಿಎಸ್ ಖರೀದಿಸಲು ಫೈನಾನ್ಸ್ ನಲ್ಲಿ ಬಡ್ಡಿರಹಿತ ಸಾಲ ಮಾಡಿ ಕೊಡುತ್ತೇವೆಂದು ನಂಬಿಸಿ ನನ್ನ ಖಾತೆಯಿಂದ ಹಣ ಕಡಿತಗೊಳ್ಳುವಂತೆ ಮಾಡಿದ್ದಾರೆ. ಈ ಬಗ್ಗೆ ಕ್ರಿಮಿನಲ್ ದೂರು ದಾಖಲಿಸಿದ್ದೇನೆ. ಇದೀಗ ಖಾತೆ ಬ್ಲಾಕ್ ಮಾಡಿಸಿದ್ದರಿಂದ ಅನಿಲ ಸಬ್ಸಿಡಿಯ ಹಣ ಸಹ ಸಿಗದಂತಾಗಿದೆ ಎಂದರು.
ಶಿಕ್ಷಕಿ ವಿಜಯ ಮಾತನಾಡಿ, ಬಜಾಜ್ ಫೈನಾನ್ಸ್ ಅಧಿಕಾರಿ ಕುಮಾರಸ್ವಾಮಿ 2016 ಮಾರ್ಚ್ ನಲ್ಲಿ ಶಿಕ್ಷಕರುಗಳಿಗೆ, ಗೃಹೋಪಯೋಗಿ ಸರಕುಗಳಿಗೆ ಶೂನ್ಯ ಬಡ್ಡಿದರದ ಸಾಲ ನೀಡುವುದಾಗಿ ಹೇಳಿದ್ದರು. ಅದರಂತೆ ನನ್ನ ಮಗನಿಗೆ ಅಗತ್ಯವಿರುವ ಲ್ಯಾಪ್ ಟಾಪ್ ತೆಗೆದುಕೊಂಡೆವು. 12 ತಿಂಗಳ ಕಂತು ತಲಾ 2718 ರೂ ನನ್ನ ಖಾತೆಯಿಂದ ಕಡಿತಗೊಂಡಿತ್ತು. ಆದರೆ ಸಾಲ ಮುಗಿದ ನಂತರವು ನನ್ನ ಖಾತೆಯಿಂದ ಹಣ ಕಡಿತವಾಗುತ್ತಿತ್ತು. ಕಂಪನಿಯ ವಸೂಲಾತಿ ಏಜೆಂಟರು ಪದೇ ಪದೇ ಕರೆ ಮಾಡಿ ಸಾಲಮರುಪಾವತಿಗೆ ಕಿರುಕುಳ ನೀಡುತ್ತಿದ್ದರು. ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದೇನೆ ನನಗೆ ನ್ಯಾಯ ಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಕೀಲ ಇನಾಯತ್ ವುಲ್ಲಾ, ಜಿ.ಹೆಚ್.ಭಾಗೀರಥಿ, ನಟರಾಜ್, ನವೀನ್ ಇದ್ದರು.



