ಡಿವಿಜಿ ಸುದ್ದಿ, ಹರಪನಹಳ್ಳಿ: ಬಳ್ಳಾರಿ ಜಿಲ್ಲಾ ಕೇಂದ್ರದ ಅಧಿಕಾರಿಗಳ ಅರಸೀಕೆರೆ ಹೋಬಳಿ ನಿರ್ಲಕ್ಷ್ಯದಿಂದ ಬೇಸರವಾಗಿದ್ದು, ಈ ಬಗ್ಗೆ ಜನರ ಅಭಿಪ್ರಾಯ ಪಡೆದು ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವ ಚಿಂತನೆ ನಡೆದಿದೆ ಎಂದು ಶಾಸಕ ಎಸ್.ವಿ.ರಾಮಚಂದ್ರಪ್ಪ ತಿಳಿಸಿದರು.
ಸಮೀಪದ ಅರಸೀಕೆರೆ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಲ್ಯಾಣ ಕರ್ನಾಟಕ ಅನುದಾನದಡಿಯಲ್ಲಿ ಅಂಗನವಾಡಿ ಕೇಂದ್ರ, ರಸ್ತೆ ಅಭಿವೃದ್ದಿ, ಶಾಲೆ ಕೊಠಡಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಬಳ್ಳಾರಿ ಜಿಲ್ಲೆಗೆ ಹರಪನಹಳ್ಳಿ ತಾಲೂಕು ಸೇರಿಸಿ ಪರಿತಪ್ಪಿಸುತ್ತಿದ್ದೇವೆ. ಯಾವುದೇ ಅಭಿವೃದ್ದಿ ಕೆಲಸಗಳು ಆಗುತ್ತಿಲ್ಲ. ಬಳ್ಳಾರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಜಗಳೂರು ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಅರಸೀಕೆರೆ ಹೋಬಳಿಯ ಯಾವುದೇ ಕೆಲಸ ಕಾರ್ಯ ಮಾಡುತ್ತಿಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ದಿ ಅನುದಾನದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಹೀಗಾಗಿ ಅಭಿವೃದ್ದಿ ಕೆಲಸಗಳು ಕುಂಠಿತಗೊಂಡಿವೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಜಯನಗರ ಜಿಲ್ಲೆ ಪ್ರಸ್ತಾನೆ ಸರ್ಕಾರದ ಮುಂದಿದೆ. ಬಳ್ಳಾರಿ ಜಿಲ್ಲೆ ವಿಭಜನೆ ಆದಲ್ಲಿ ಅರಸೀಕೆರೆ ಹೋಬಳಿ ಹರಪನಹಳ್ಳಿ ತಾಲೂಕಿನಲ್ಲಿ ಉಳಿಯಬೇಕಾ ಅಥವಾ ಬೇಡವಾ ಎನ್ನುವ ಕುರಿತು ಜನರ ಅಭಿಪ್ರಾಯ ಸಂಗ್ರಹಿಸುವೆ. ಕಲ್ಯಾಣ ಕರ್ನಾಟಕ ಸೌಲಭ್ಯಕ್ಕಾಗಿ ಹರಪನಹಳ್ಳಿ ತಾಲೂಕಿನಲ್ಲಿಯೇ ಉಳಿಯುವ ಪರಿಸ್ಥಿತಿ ಎದುರಾದರೆ ಹರಪನಹಳ್ಳಿ ತಾಲೂಕನ್ನು ಜಿಲ್ಲೆ ಮಾಡಿ ಎಂದು ಮುಖ್ಯಮಂತ್ರಿಗಳ ಬಳಿ ಕೇಳುತ್ತೇನೆ. ಹರಪನಹಳ್ಳಿ ಜಿಲ್ಲೆ ಆಗಲು ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷ 10 ಸ್ಥಾನಗಳನ್ನು ಗೆಲುವು ಸಾಧಿಸಲಿದ್ದು, ಸರ್ಕಾರಕ್ಕೆ ಯಾವುದೇ ತೊಂದರೆ ಆಗಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಶೀರ್ವಾದದಿಂದ ಹೆಚ್ಚಿನ ಅನುದಾನ ತಂದು ತಮ್ಮ ಸೇವೆ ಮಾಡುತ್ತೇನೆ ಎಂದ ಅವರು ಹೊಸಕೋಟೆ ಗ್ರಾಮದಲ್ಲಿ ಮುಂದಿನ ದಿನಗಳಲ್ಲಿ ಸಿಸಿ ರಸ್ತೆ, ಪ್ರೌಢ ಶಾಲೆ ನಿರ್ಮಾಣಕ್ಕೆ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಹೊಸಕೋಟೆ, ಯು.ಕಲ್ಲಹಳ್ಳಿ, ನೆರೆಬೊಮ್ಮನಹಳ್ಳಿ, ದಿದ್ದಿಗಿ ತಾಂಡ ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರ ಕಟ್ಟಡ ಶಂಕುಸ್ಥಾಪನೆ, ಹೊಸಕೋಟೆ, ಕೆರೆಗುಡಿಹಳ್ಳಿ ಕಬ್ಬಳಿ ಮಾರ್ಗದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚಟ್ನಿಹಳ್ಳಿ ರಾಜಪ್ಪ, ವೈ.ಡಿ. ಅಣ್ಣಪ್ಪ, ಗ್ರಾ.ಪಂ ಸದಸ್ಯ ಬಾಲೇನಹಳ್ಳಿ ಕೆಂಚನಗೌಡ, ಮಾಧ್ಯಮ ಸಂಚಾಲಕ ಫಣಿಯಾಪುರ ಲಿಂಗರಾಜ್, ಮುಖಂಡರಾದ ಗುಡಿಹಳ್ಳಿ ವಿರೇಶ್, ಕಬ್ಬಳ್ಳಿ ರಮೇಶ್, ಪಿ.ಕೊಟ್ರೇಶ್, ಎಸ್.ಪರಮೇಶ್, ಪರಶುರಾಮ, ವಿಶ್ವನಾಥ್, ವಿಜಯಲಕ್ಷ್ಮಿ, ಸಿ.ಶಿವಪ್ಪ, ಮಂಜುನಾಥ್, ಕಬ್ಬಳ್ಳಿ ಪರಸಪ್ಪ, ಜಿ.ಪಂ ಉಪ ವಿಭಾಗ ಎಇಇ ಸತೀಶ ಪಾಟೀಲ್, ಇಂಜಿನಿಯರ್ ಬಸವರಾಜ್ ಅವರು ಇದ್ದರು.



