ಡಿವಿಜಿ ಸುದ್ದಿ, ಹರಪನಹಳ್ಳಿ: ರಾಜ್ಯದ ನಾಲ್ಕು ದಿಕ್ಕುಗಳಲ್ಲಿ ಅನ್ಯ ಭಾಷೆಗಳ ಪ್ರಭಾವವಿದೆ. ಆದರೆ ಮಧ್ಯ ಕರ್ನಾಟಕದಲ್ಲಿ ಮಾತ್ರ ಯಾವುದೇ ಅನ್ಯಭಾಷೆಗಳ ಪ್ರಭಾವವಿಲ್ಲದ ಗಟ್ಟಿತನದ ಶುದ್ದ ಕನ್ನಡ ಮೈಳೆಯಿಸಿದೆ ಎಂದು ಚಲನಚಿತ್ರ ನಿರ್ದೇಶಕ, ಕಾಮಿಡಿ ಕಿಲಾಡಿ ಶೋ ಖ್ಯಾತಿಯ ಕಲಾವಿದ ಗೋವಿಂದೇಗೌಡ ತಿಳಿಸಿದರು.
ಪಟ್ಟಣದ ಉಜ್ಜಯಿನಿ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆಯ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹಾಸ್ಯ ಸಾಹಿತ್ಯವನ್ನು ಉತ್ತುಂಗಕ್ಕೇರಿಸಿದ ಕೀರ್ತಿ ಹರಪನಹಳ್ಳಿಯ ಸಾಹಿತಿ ಬೀಚಿ ಅವರಿಗೆ ಸಲ್ಲುತ್ತದೆ. ಇಲ್ಲಿಯ ಜನರು ಶುದ್ದ ಕನ್ನಡ ಭಾಷೆಯನ್ನು ಬಳಸುವುದನ್ನು ಕಾಣಬಹುದು. ದಕ್ಷಿಣ ಕರ್ನಾಟಕ ಕಲಾವಿದರ ನಡುವೆ ಮಧ್ಯ ಕರ್ನಾಟಕದ ಪ್ರತಿಭೆ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಈ ಭಾಗದಲ್ಲಿ ಕಲಾವಿದರ ಸಂಖ್ಯೆ ಹೆಚ್ವಾಗಬೇಕಿದೆ ಎಂದರು.
ರಾಜ್ಯದ ಹಲವಾರು ಜಿಲ್ಲೆಗಳನ್ನು ಹೋಲಿಕೆ ಮಾಡಿಕೊಂಡಲ್ಲಿ ಮಧ್ಯ ಕರ್ನಾಟಕದ ಕಲಾವಿದರಿಗೆ ಪ್ರೋತ್ಸಾಹಕ್ಕೆ ವೇದಿಕೆ ಕಡಿಮೆ ಎನ್ನಬಹುದು. ನಮ್ಮ ವೇದಿಕೆಯನ್ನು ನಾವೇ ಸೃಷ್ಟಿ ಮಾಡಿಕೊಳ್ಳಬೇಕು. ಕನ್ನಡ ಮನೆ ಮನಗಳಲ್ಲಿ ದಿನನಿತ್ಯ ಬೆಳಗಬೇಕು. ಕೇವಲ ಭಾಷಣಕ್ಕೆ ಕನ್ನಡ ಸೀಮಿತವಾಗದೇ ಅದು ಜೀವಂತಿಕೆಯಾಗಬೇಕು ಎಂದ ಅವರು ಜೀವನದಲ್ಲಿ ಯಾವುದಕ್ಕೂ ಹಿಂಜರಿಯದೇ ಸಿಕ್ಕ ಅವಕಾಶಗಳನ್ನು ಬಳಕೆ ಮಾಡಿಕೊಳ್ಳಬೇಕು. ನೆಗಟಿವ್ ಆಗಿರುವುದನ್ನು ಪಾಸಿಟಿವ್ ಆಗಿ ಬಳಸಿಕೊಂಡಲ್ಲಿ ಉನ್ನತ ಸ್ಥಾನ ಖಂಡಿತ. ಅಸಾಧ್ಯವಾದನ್ನು ಸಾಧಿಸಬಲ್ಲ, ಶಕ್ತಿ ಇರುವ ಏಕೈಕ ವ್ಯಕ್ತಿ ಅಂದ್ರೆ ಅದು ನೀವೇ ಎಂದು ತಿಳಿಸಿದರು.
ಚಲನಚಿತ್ರ ನಟಿ ಮೂಡಗೆರೆ ದಿವ್ಯಾ ಮಾತನಾಡಿ, ಮಂಗಳೂರು ಭಾಗದಲ್ಲಿ ಭಾಷೆಯನ್ನು ಅರ್ಧಕ್ಕೆ ಕಟ್ ಮಾಡಿ ಮಾತನಾಡುವುದರಿಂದ ಸ್ಪಷ್ಟ ಉಚ್ಚರಣೆ ಬರುವುದಿಲ್ಲ. ಕರ್ನಾಟಕದಲ್ಲಿದ್ದುಕೊಂಡು ಕನ್ನಡ ಭಾಷೆ ಮಾತನಾಡದಿರುವುದು ನಾಚಿಕೆಗೇಡಿನ ವಿಷಯ. ಜೀವನದಲ್ಲಿ ಪ್ರತಿಯೊಬ್ಬರೂ ನೆಗೆಟಿವ್ ಅಂಶವನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳಬೇಕು. ಗೆಲುವು ಒಂದೊಂದು ಹಂತವನ್ನು ಮೇಲಕ್ಕೆ ಏರಿಸುತ್ತದೆ. ನಾವು ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳದೇ ಜೀವನ ನಡೆಸಬೇಕು ಎಂದರು.
ಇದೇ ವೇಳೆ ಗೋವಿಂದೇಗೌಡ ಮತ್ತು ದಿವ್ಯಾ ದಂಪತಿಗಳಿಂದ ಹಾಸ್ಯ ಸರದೌತಣ ನೀಡಿದರು. ಪ್ರಾಚಾರ್ಯ ಎಲ್.ಕೃಷ್ಣಸಿಂಗ್, ಉಪನ್ಯಾಸಕ ಹೆಚ್.ಮಲ್ಲಿಕಾರ್ಜುನ ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎನ್.ಕುಮಾರ್ ಪುಣಬಗಟ್ಟಿ, ಕಾರ್ಯದರ್ಶಿ ತಳವಾರ ಚಂದ್ರಪ್ಪ, ಉಪಾಧ್ಯಕ್ಷ ಟಿ.ಬಿ.ರಾಜು, ಉಪನ್ಯಾಸಕರಾದ ಎ.ಸಿ.ಚಿಕಮಠ್, ಆರ್.ಸಿ.ಬದ್ರಿಶೆಟ್ಟಿ, ಕೆ.ಚನ್ನಬಸಪ್ಪ, ಇಟ್ಟಿಗುಡಿ ಅಶೋಕ್, ಮಲ್ಲಿಕಾರ್ಜುನ, ಎಂ.ಚಿಕ್ಕಪ್ರಸಾದ್, ರಾಜು ಲಂಬಾಣಿ, ಪ್ರವೀಣ್ ಕುಮಾರ್, ಆತ್ಮನಾಂದ, ನೃತ್ಯ ಸಂಯೋಜಕ ಚನ್ನವೀರಯ್ಯಸ್ವಾಮಿ, ಹೆಚ್.ಮಂಜು, ಚಿಕ್ಕಳ್ಳಿ ನಾಗರಾಜ್ ಇತರರಿದ್ದರು.