ಡಿವಿಜಿಸುದ್ದಿ, ದಾವಣಗೆರೆ: ಪ್ರವಾಹ ಪೀಡಿತ ಮತ್ತು ಬರ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಹಾರ ಘೋಷಿಸದ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಎಚ್ಚರಿಸುವ ಸಲುವಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಅ.12 ರಿಂದ 14 ರವರೆಗೆ ತಲಕಾವೇರಿಯಿಂದ ಬೆಂಗಳೂರಿಗೆ ವಾಹನ ಜಾಥಾ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಚಾಮರಸಮಾಲಿ ಪಾಟೀಲ್ , ಅ.12 ರಂದು ಬೆಳಗ್ಗೆ ೮ಕ್ಕೆ ತಲಕಾವೇರಿಯಿಂದ ವಾಹನ ಜಾಥಾ ಹೊರಡಲಿದೆ. ಅಂದು ರಾತ್ರಿ ಮೈಸೂರಿನಲ್ಲಿ ವಾಸ್ತವ್ಯ ಮಾಡಲಾಗುವುದು. ಅ.13 ರಂದು ಬೆಳಗ್ಗೆ 11 ಕ್ಕೆ ಮೈಸೂರಿನ ಟೌನ್‌ಹಾಲ್‌ನಲ್ಲಿ ಸಭೆ ನಡೆಯಲಿದೆ. ಸಂಜೆ 6 ಕ್ಕೆ ಚನ್ನಪಟ್ಟಣದಲ್ಲಿ ತಂಗಲಿದ್ದು, ಅ 14 ರಂದು ಬೆಳಗ್ಗೆ ೮.೩೦ಕ್ಕೆ ಹೊರಟು ಮಧ್ಯಾಹ್ನ ೧ಕ್ಕೆ ಬೆಂಗಳೂರು ತಲುಪಲಿದೆ.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಹಿಂದೆಂದೂ ಕಂಡರಿಯದಂತಹ ಭೀಕರ ಪ್ರವಾಹ ಉಂಟಾಗಿದೆ ಅಕಾಲಿಕ ಮಳೆಯಿಂದಾಗಿ ರಾಜ್ಯ ನಲುಗಿದೆ. 22 ಜಿಲ್ಲೆಗಳ 103 ತಾಲ್ಲೂಕುಗಳು ಪ್ರವಾಹಕ್ಕೆ ತುತ್ತಾಗಿವೆ. ಉತ್ತರ ಕರ್ನಾಟ, ಹೈದರಾಬಾದ್ ಕರ್ನಾಟಕದಲ್ಲಿ ಲಕ್ಷಾಂತರ ಎಕರೆಯಲ್ಲಿ ಬೆಳೆದಿದ್ದ ಬೆಳೆನಾಶವಾಗಿದೆ. ಆದರೆ, ಕೇಂದ್ರಸರ್ಕಾರ ಪ್ರವಾಹ ಪೀಡಿತ ಮತ್ತು ಅತಿವೃಷ್ಟಿ ಪ್ರದೇಶಕ್ಕೆ ಇದುವರೆಗೂ ನೆರವು ಘೋಷಿಸದಿರುವುದು ನಮ್ಮ ದುರಂತ ಎಂದರು.
ಒಂದೆಡೆ ಪ್ರವಾಹ ಮತ್ತೊಂದೆಡೆ ಬರಗಾಲದಿಂದ ರಾಜ್ಯದ ಜನರು ತತ್ತರಿಸಿದ್ದಾರೆ. ಕೊಡಗು, ಬೆಳಗಾವಿ ಪುನರ್ ನಿರ್ಮಾಣಕ್ಕಾಗಿ ಪ್ಯಾಕೇಜ್ ಘೋಷಿಸಬೇಕು, ತೆಂಗು, ಅಡಿಕೆ, ಕಾಳುಮೆಣಸು ಬೆಳೆಗಾರರಿಗೆ ನಷ್ಟ ತುಂಬಿಕೊಡಬೇಕು. ಮನೆ-ಮಠ ಕಳೆದು ಕೊಂಡವರಿಗೆ ಪರ್ಯಾಯ ವ್ಯವಸ್ಥೆ ದೊರಕಿಸಬೇಕು. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಹಕ್ಕೊತ್ತಾಯ ಮಾಡಲಾಗುವುದು ಈ ಜಾಥಾಕ್ಕೆ ರಾಜ್ಯದ ಜಿಲ್ಲೆಯಿಂದ ರೈತರು ಭಾಗಿಯಾಗಬೇಕು ಎಂದು ಕರೆ ನೀಡಿದರು.
ರಾಷ್ಟ್ರೀಯ ವಿಪತ್ತು ಘೋಷಿಸಲಿ
ಪ್ರವಾಹದಿಂದಾಗಿ ಜನರ ಜೀವನ ಬೀದಿಗೆ ಬಿದ್ದಿದೆ. ರಾಜ್ಯದಲ್ಲಿ ಒಂದುಕಡೆ ಭೀಕರ ಪ್ರವಾಹ ಹಾಗೂ ಮತ್ತೊಂದು ಕಡೆ ಬರ ಆವರಿಸಿದೆ. ಆದರೆ ಪ್ರಧಾನಿಯವರು ರಾಜ್ಯದ ಜನರ ಕಷ್ಟಕ್ಕೆ ಸ್ಪಂದನೆ ನೀಡುತ್ತಿಲ್ಲ. ರಾಜ್ಯದ ಪರಿಸ್ಥಿತಿ ಬಗ್ಗೆ ಗಂಭೀರವಾಗಿ ಪರಿಗಣಿಸಿಲ್ಲ. ರಾಜ್ಯದ ಸಂಸದರು ಪ್ರಧಾನಿಯವರ ಬಳಿ ಧೈರ್ಯವಾಗಿ ಮಾತನಾಡಲು ಹೆದರುತ್ತಿದ್ದಾರೆ. ಕೂಡಲೇ ರಾಜ್ಯವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಜನರ ನೆರವಿಗೆ ಧಾವಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಮಲೇನ್ನೂರು ಶಂಕರಪ್ಪ, ಎಂ.ರಾಮು, ಬಲ್ಲೂರು ರವಿಕುಮಾರ್, ರವಿಕಿರಣ್, ಸುಬ್ರಾಯ, ಚಿಕ್ಕನಹಳ್ಳಿ ರೇವಣಸಿದ್ದಪ್ಪ, ಹೊನ್ನೂರು ಕುಮಾರ್ ಮತ್ತಿತರರಿದ್ದರು.