ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯ ಹೂ ಬೆಳೆಯುವ ರೈತರು ಹಾಗೂ ನಗರದ ವಿವಿಧ ಪ್ರದೇಶಗಳಲ್ಲಿ ಹೂ ಸಗಟು ವ್ಯಾಪಾರ ಮಾಡುವ ಸಗಟು ಮಾರಾಟಗಾರರ ಹಿತದೃಷ್ಠಿಯಿಂದ ತೋಟಗಾರಿಕೆ ಇಲಾಖೆ ಭರತ್ ಕಾಲೋನಿಯಲ್ಲಿ ನಿರ್ಮಿಸಲಾಗಿರುವ ಪುಷ್ಪ ಹರಾಜು ಕೇಂದ್ರದಲ್ಲಿ ಪುಷ್ಪ ಖರೀದಿ ನಡೆಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲಾಡಳಿತ ಭವನದಲ್ಲಿ ನಡೆದ ಪುಷ್ಪ ವ್ಯಾಪಾರಿಗಳ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತೋಟಗಾರಿಕೆ ಇಲಾಖೆ ವತಿಯಿಂದ 2.5 ಕೋಟಿ ವೆಚ್ಚದಲ್ಲಿ ಸುಮಾರು 2.5 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಿಲಾಗಿರುವ ಸುಸಜ್ಜಿತ ಪುಷ್ಪ ಮಾರುಕಟ್ಟೆ ಆರಂಭಗೊಂಡಿದ್ದು, ಡಿ.03 ರಂದು ಖುದ್ದು ಭೇಟಿ ನೀಡಿ ವೀಕ್ಷಿಸಿದ್ದೇನೆ. ಈ ಕೇಂದ್ರದಲ್ಲಿರುವ 25 ಸುಸಜ್ಜಿತ ಮಳಿಗೆಗಳನ್ನು ಬಳಸಿಕೊಂಡು ಎಲ್ಲಾ ಹೂವಿನ ವ್ಯಾಪಾರಿಗಳು ಹಾಗೂ ಹೂ ಬೆಳೆಯುವ ರೈತರು ಜನವರಿ 15 ರೊಳಗಾಗಿ ಈ ಹರಾಜು ಕೇಂದ್ರದಲ್ಲಿ ತಮ್ಮ ವ್ಯಾಪಾರ ವಹಿವಾಟು ನಡೆಸಬೇಕೆಂದರು.
ಸಭೆಯಲ್ಲಿ ದಾವಣಗೆರೆ ಎಪಿಎಂಸಿ ಅಧ್ಯಕ್ಷರು, ಕಾರ್ಯದರ್ಶಿಗಳು, ಹೂ ಮಾರಾಟಗಾರರ ಸಂಘದ ಪ್ರತಿನಿಧಿಗಳು, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಲಕ್ಷ್ಮಿಕಾಂತ್, ಪುಷ್ಪ ಹರಾಜು ಕೇಂದ್ರದ ಜಯಸಿಂಹ ಇತರರು ಉಪಸ್ಥಿತರಿದ್ದರು.



