ಡಿವಿಜಿ ಸುದ್ದಿ, ನೆಲಮಂಗಲ: ತರಕಾರಿ ಬೆಲೆ ಕುಸಿತಗೊಂಡರೆ ರೈತರು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ರೈತ ತನ್ನ ಎಲೆಕೋಸು ಬೆಲೆ ಕುಸಿತದಿಂದ ಕಂಗೆಟ್ಟಿದ್ದರೂ, ಬೆಳೆದ 300 ಚೀಲ ಎಲೆಕೋಸನ್ನು ಮಠ-ಮಂದಿರಗಳಿಗೆ ದಾನ ಮಾಡಿ ಮಾನವೀಯತೆ ಮೆರದಿದ್ದಾನೆ.

ರೈತ ದೇಶದ ಬೆನ್ನೇಲುಬು ಎನ್ನುತ್ತಾರೆ. ಆದರೆ, ಅದೇ ರೈತನ ಬೆನ್ನೇಲುಬು ಮುರಿದರೆ ಯಾರು ಕೂಡ ನೋಡಲ್ಲ. ಎಲೆಕೋಸಿನ ಬೆಲೆ ಕುಸಿತದಿಂದ ಕಂಗೆಟ್ಟಿದ್ದ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಕೆರೆಕತ್ತಿಗನೂರಿನ ರೈತ ಬಾಬು ಮತ್ತು ವಾಸು ತಮ್ಮ ಜಮೀನಲ್ಲಿ ಬೆಳೆದ 300 ಚೀಲ ಎಲೆಕೋಸನ್ನು ಉಚಿತವಾಗಿ ಮಠ-ಮಂದಿರಗಳಿಗೆ ನೀಡುವ ಮೂಲಕ ಮಾದರಿ ರೈತರಾಗಿದ್ದಾರೆ.
30 ರಿಂದ 40 ಸಾವಿರ ಖರ್ಚು ಮಾಡಿ ಬೆಳೆದ ಎಲೆಕೋಸಿಗೆ ಬೆಲೆಯಿಲ್ಲಾದಂತಾಗಿದೆ. ಎಲೆಕೋಸಿಗೆ ಮಾರುಕಟ್ಟೆಯಲ್ಲಿ ಚೀಲಕ್ಕೆ 70 ರಿಂದ 80 ರೂಪಾಯಿ ಕುಸಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಈ ರೈತರ ತುಮಕೂರಿನ ಸಿದ್ದಗಂಗಾ ಮಠ, ಆದಿಚುಂಚನಗಿರಿ ಮಠ, ಯಡಿಯೂರು, ಧರ್ಮಸ್ಥಳಕ್ಕೆ ಎಲೆಕೋಸನ್ನು ರವಾನೆ ಮಾಡಿದ್ದಾರೆ. ಎಲೆಕೋಸನ್ನು ಕಟಾವು ಮಾಡಲು ಗ್ರಾಮದ 40 ಮಂದಿ ರೈತರು ಕೂಲಿಯಿಲ್ಲದೇ ಉಚಿತವಾಗಿ ಕೆಲಸ ನಿರ್ವಹಿಸಿದ್ದಾರೆ. ಇನ್ನು ಸ್ಥಳೀಯ ಲಾರಿ ಮಾಲೀಕರೊಬ್ಬರು ಈ ಎಲೆಕೋಸನ್ನು ಸಾಗಿಸುವ ಹೊಣೆ ಹೊತ್ತುಕೊಂಡು ಮಠ-ಮಂದಿರಗಳಿಗೆ ರವಾನೆ ಮಾಡಿದ್ದಾರೆ.
ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೆ ರೈತನ ಬದುಕು ದುಸ್ತಾರವಾಗುತ್ತದೆ. ಬೆಳೆದ ತರಕಾರಿಗಳಿಗೂ ಬೆಂಬಲ ಘೋಷಿಸಿ ಎಂದು ಎಲೆಕೋಸು ಬೆಳೆದ ಬಾಬು ಒತ್ತಾಯಿಸಿದ್ದಾರೆ. ಕೃಷಿ ಇಲಾಖೆ ಆಯಾ ಕಾಲಕ್ಕೆ ತಕ್ಕ ಬೆಳೆ ಬೆಳೆಯಲು ಸೂಕ್ತ ಮಾರ್ಗದರ್ಶನ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.



