ಡಿವಿಜಿ ಸುದ್ದಿ, ದಾವಣಗೆರೆ : ಕೇಂದ್ರ ಸರ್ಕಾರ ಡಿ.1 ರಿಂದ ಜಾರಿಗೆ ತರಲಿರುವ ಡಿಜಿಟಲ್ ಟೋಲ್ ವ್ಯವಸ್ಥೆಯ ಫಾಸ್ಟ್ ಟ್ಯಾಗ್ ಸೇವೆ ವಿರೋಧಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿ ನೂತನ ಫಾಸ್ಟ್ ಟ್ಯಾಗ್ ಸೇವೆ ಹಿಂಪಡೆಯಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಡಿ. 1ರಿಂದ ಜಾರಿಗೆ ಬರಲಿರುವ ಡಿಜಿಟಲ್ ವ್ಯವಸ್ಥೆಯ ಟೋಲ್ ಸೇವೆಯಿಂದ ಸಾವಿರಾರು ಜನ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಇದಲ್ಲದೆ ಸ್ಥಳೀಯರಿಗೆ ಮತ್ತು ರೈತರಿಗೆ ತೀವ್ರ ತೊಂದರೆಯಾಗುತ್ತದೆ. ಇಂತಹ ಸೇವೆಯನ್ನು ಜಾರಿಗೆ ತರುವ ಮೊದಲು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವುದರ ಕಡೆ ಗಮನಹರಿಸಬೇಕು. ಇದರ ಜೊತೆಗೆ ಎಲ್ಲಾ ಕಡೆ ಸರ್ವೀಸ್ ರಸ್ತೆ ನಿರ್ಮಾಣ ಮಾಡುವವರೆಗೂ ಈ ನೂತನ ಸೇವೆ ತಡೆ ಹಿಡಿಯಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದರೆ ಸರಿಯಾದ ಅಂಬುಲೆನ್ಸ್ ವ್ಯವಸ್ಥೆ ಇಲ್ಲ. ಇನ್ನು ಪ್ರಥಮ ಚಿಕಿತ್ಸಾ ವ್ಯವಸ್ಥೆ ಕೂಡ ಇಲ್ಲ. ಇಂತಹ ಮೂಲ ಸೌಕರ್ಯ ಕಡೆ ಗಮನ ಕೇಂದ್ರಿಕರಿಸದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಖಾಸಗಿ ಕಂಪನಿಗಳ ಲಾಭಕ್ಕಾಗಿ ಇಂತಹ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಈ ನೂತನ ನೀತಿ ಜಾರಿಯಾದರೆ ವಾಹನ ಚಾಲಕರು ಪ್ರತಿ ಸಲ ಹೋದಾಗಲೂ ಟೋಲ್ ಕಟ್ಟುವ ವ್ಯವಸ್ಥೆ ಜಾರಿಗೆ ಬಂದತಾಗುತ್ತದೆ.ಇದರಿಂದ ವಾಹನ ಮಾಲೀಕರಿಗೆ ತೊಂದರೆಯಾಗುತ್ತದೆ ಎಂದು ಸಂಘದ ರಾಜ್ಯಾಧ್ಯಕ್ಷ ಹುಚ್ಚವನಹಳ್ಳಿ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಫಾಸ್ಟ್ ಟ್ಯಾಗ್ ಸೇವೆಯು ಕೇಂದ್ರ ಸಚಿವ ನಿತಿನ್ ಗಡ್ಕರಿ ಒಡೆತನದ ಐಆರ್ ಬಿ ಕಂಪನಿಯ ಮಾಲೀಕತ್ವದಲ್ಲಿ ನಡೆಯತ್ತಿದ್ದು, ಖಾಸಗಿ ಬ್ಯಾಂಕ್ ಗಳ ಜೊತೆ ಒಪ್ಪಂದ ಮಾಡಿದ್ದಾರೆ . ಈ ಮೂಲಕ ಕನಿಷ್ಟ ನೂರು ರೂಪಾಯಿ ಠೇವಣಿ ಮೂಲಕ ಕೋಟ್ಯಂತರ ರೂಪಾಯಿ ಸಂಗ್ರಹಿಸುವ ಹುನ್ನಾರ ನಡೆಯುತ್ತಿದೆ . ಹೀಗಾಗಿ ಈ ಹಿಂದೆ ಇದ್ದ ಕಾನೂನನ್ನೇ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿಅರಸನಾಳ್ ಸಿದ್ದಪ್ಪ, ಗುಮ್ಮನೂರು ಬಸವರಾಜ್, ಕೋಲ್ಕುಂಟೆ ಬಸವರಾಜ್, ಕುಕ್ಕವಾಡ ಪರಮೇಶ, ಪರಶುರಾಮ್, ಪ್ರಕಾಶ್,ಚಿರಂಜೀವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



