ಡಿವಿಜಿಸುದ್ದಿ.ಕಾಂ, ದಾವಣಗೆರೆ: ನೆರೆ ಪರಿಹಾರವಾಗಿ ಕೇಂದ್ರ ಸರ್ಕಾರ ಕೇವಲ 1,200 ಕೋಟಿ ಬಿಡುಗಡೆ ಮಾಡಿ ಮೂಗಿಗೆ ತುಪ್ಪ ಸವರಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವ್ಯಂಗ್ಯವಾಡಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರ ಸೂಕ್ತ ನೆರೆ ಪರಿಹಾರ ಒದಗಿಸುವಲ್ಲಿ ವಿಫಲವಾಗಿವೆ. 38 ಸಾವಿರ ಕೋಟಿ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಅವರೇ ಹೇಳಿದ್ದಾರೆ. ಆದ್ರೆ, ಕೇಂದ್ರ ಸರ್ಕಾರ ಕೇವಲ 1,200 ಕೋಟಿ ಕೊಡುವ ಮೂಲಕ ಮೂಗಿಗೆ ತುಪ್ಪ ಸವರಿದೆ ಎಂದರು.
ವಿರೋಧ ಪಕ್ಷಗಳ ಹೋರಾಟದ ಫಲವಾಗಿ ಪರಿಹಾರ ನಿಧಿ ಬಂದಿದೆ. ಮುಂದಿನ ದಿನಗಳಲ್ಲಿ ಸದನದ ಹೊರೆಗೂ ಮತ್ತು ಒಳಗೂ ಕಾಂಗ್ರೆಸ್ ಪಕ್ಷ ನೆರೆ ಪರಿಹಾರ ವಿಚಾರವಾಗಿ ಹೋರಾಟ ಮಾಡಲಿದೆ.ಹಿಂಬಾಗಿಲಿನಿಂದ ಅಧಿಕಾರ ಹಿಡಿದ ಬಿಜೆಪಿ ಕಾಂಗ್ರೆಸ್ ಪಕ್ಷದ ಶಾಸಕರಿಗೆ ಕೊಟ್ಟ ಅನುದಾನವನ್ನು ವಾಪಸ್ಸು ಪಡೆದು ಬಿಜೆಪಿ ಶಾಸಕರಿಗೆ ಕೊಡುತ್ತಿದ್ದಾರೆ. ರಾಜ್ಯದಲ್ಲಿ ಎಲ್ಲೆಲ್ಲಿ ಕಾಂಗ್ರೆಸ್ ಶಾಸಕರಿದ್ದಾರೋ ಅಲ್ಲಿ ಅನುದಾನ ಕಡಿತ ಮಾಡಲಾಗಿದೆ. ನನ್ನ ಕ್ಷೇತ್ರದಲ್ಲಿ 50 ಕೋಟಿ ಅನುದಾನ ಸ್ಥಗಿತಗೊಳಿಸಿದ್ದಾರೆ .ಅನರ್ಹ ಶಾಸಕರ ಕ್ಷೇತ್ರಕ್ಕೆ ಹೆಚ್ಚಿನ ಹಣ ಸಿಎಂ ಕೊಟ್ಟಿದ್ದಾರೆ ಎಂದ ಖಂಡ್ರೆ ಆರೋಪಿಸಿದರು.
ವಿರೋಧ ಪಕ್ಷದ ನಾಯಕರ ಯಾರು ಆಗಬೇಕು ಎನ್ನುವುದನ್ನು ಹೈಕಮಾಂಡ್ ನಿರ್ಧರಿಸಲಿದೆ. ಎಲ್ಲರನ್ನೂ ಗಣನೆಗೆ ತೆಗೆದುಕೊಂಡು ಪಕ್ಷದ ನಾಯಕರನ್ನು ಆಯ್ಕೆ ಮಾಡುತ್ತಾರೆ. ಸಿದ್ದರಾಮಯ್ಯ ಪ್ರಭಾವಿ ನಾಯಕ ಎನ್ನುವ ಮೂಲಕ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದರು.



