ಡಿವಿಜಿ ಸುದ್ದಿ, ಬೆಂಗಳೂರು: ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಹಾಗೂ ಕಾವಲ್ ಭೈರಸಂದ್ರದಲ್ಲಿ ನಡೆದ ಗಲಭೆ ಸಂಬಂಧ ರಾತ್ರಿಯಿಡಿ ಕಾರ್ಯಾಚರಣೆ ನಡೆಸಿದ ಬೆಂಗಳೂರು ಪೊಲೀಸರು, 110 ಮಂದಿಯನ್ನು ಬಂಧಿಸಿದ್ದಾರೆ.
ಗಲಭೆ ಸೃಷ್ಟಿಸಿ ವಾಹನಗಳಿಗೆ ಬೆಂಕಿ ಹಚ್ಚಿ, ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಬೆಳಿಗ್ಗೆ 10 ಗಂಟೆಯವರಗೆ ಒಟ್ಟು 110 ಆರೋಪಿಗಳನ್ನು ಬಂಧಿಸಲಾಗಿದೆ. ಗಲಭೆ ಸಂಬಂಧ 110 ಮಂದಿಯನ್ನು ಬಂಧಿಸಲಾಗಿದೆ. ಹಲವರು ತಲೆಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ್ದಾನೆ ಎನ್ನಲಾದ ಆರೋಪಿ ನವೀನ್‌ನನ್ನು ಪೊಲೀಸರು ಮಂಗಳವಾರ ತಡರಾತ್ರಿಯೇ ಬಂಧಿಸಿದ್ದಾರೆ.ಬಂಧಿತ ಆರೋಪಿ ನವೀನ್, ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಮೂರ್ತಿ ಅವರ ಸಹೋದರಿಯ ಮಗನೆಂದು ಗೊತ್ತಾಗಿದೆ.
ಮಂಗಳವಾರ ಬೆಳಿಗ್ಗೆಯೇ ಆರೋಪಿ ತನ್ನ ಫೇಸ್‌ಬುಕ್ ಖಾತೆಯಲ್ಲಿ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ್ದ. ಅದನ್ನು ನೋಡಿದ್ದ ಜನ, ಠಾಣೆಗೆ ದೂರು ನೀಡಲು ಹೋಗಿದ್ದರು. ಕೆಲವರು, ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೂ ತೆರಳಿದ್ದರು. ಎರಡು ಕಡೆಯೂ ಕೆಲ ಕಿಡಿಗೇಡಿಗಳು, ಮನೆ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿದ್ದರು.




