ಭ್ರಷ್ಟಾಚಾರಕ್ಕೆ ಹಲವು ಆಯಾಮಗಳಿವೆ. ನೇರವಾಗಿ ಲಂಚ ತೆಗೆದುಕೊಳ್ಳುವ ಭ್ರಷ್ಟಾಚಾರಕ್ಕಿಂತ ತಂತ್ರಗಾರಿಕೆಯ ಕಡತ ಭ್ರಷ್ಟಾಚಾರಗಳು ಅತ್ಯಂತ ಅಪಾಯಕಾರಿ. ಅಂತಹ ಭ್ರಷ್ಟಾಚಾರದ ವಾಸನೆ ಸಚಿವ ಸುರೇಶ್ ಕುಮಾರ್ ಕಡತದಿಂದ ಬರುತ್ತಿದೆ.
ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆ ಶಾಲಾ ಕಾಲೇಜುಗಳು ರಜೆ ಘೋಷಿಸಿ, ಕೆಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿತ್ತು. ಅದರಲ್ಲಿ ಮೊದಲನೆಯದ್ದು, ಯಾವುದೇ ಶಾಲೆಗಳು ಫೀಸ್ ಸಂಗ್ರಹ ಮಾಡಬಾರದು ಎನ್ನುವುದಾಗಿತ್ತು. ಲಾಕ್ ಡೌನ್ ನಿಂದ ಕೆಲಸ ಬಿಟ್ಟು ಮನೆಯಲ್ಲಿರುವ ಪೋಷಕರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಕೈಗೊಂಡ ಉತ್ತಮ ನಿರ್ಧಾರ ಇದಾಗಿತ್ತು. ಇದಾದ ಬಳಿಕ ಖಾಸಗಿ ಶಾಲಾ ಮಾಫಿಯಾ ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಸರ್ಕಾರಕ್ಕೆ ಒತ್ತಡ ಹಾಕಿದ್ದರು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಈ ಲಾಭಿಗೆ ಮಣಿಯದೆ ಜನರ ಹಿತ ಕಾಯ್ದಿದ್ದರು.
ಇದೀಗ ಖಾಸಗಿ ಶಿಕ್ಷಣ ಸಂಸ್ಥೆಯ ಲಾಬಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೆ ಎಡತಾಕಿ ಕೆಲಸ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ಮುಂದೆ ಖಾಸಗಿ ಶಾಲೆಗಳ ಶುಲ್ಕ ವಸೂಲಿ ದರ್ಬಾರ್ ಪ್ರಾರಂಭವಾಗಲಿದೆ.
ಗುರುವಾರ ಎಪ್ರಿಲ್ 23 ರಂದು ಸುರೇಶ್ ಕುಮಾರ್ ರವರು ಸ್ವತಃ ಸಹಿ ಹಾಕಿ ಆದೇಶವೊಂದನ್ನು ಮಾಡಿದ್ದಾರೆ. ಇವತ್ತಿನಿಂದ ಖಾಸಗಿ ಶಾಲೆಗಳು ಶುಲ್ಕ ವಸೂಲಿ ಮಾಡಬಹುದು ಎಂಬುದು ಸುರೇಶ್ ಕುಮಾರ್ ಆದೇಶದ ಸಾರಾಂಶ. ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳು ಸಭೆ ನಡೆಸಿ, ಗೈಡ್ ಲೈನ್ಸ್ ರೂಪಿಸಿ ಅಧಿಕಾರಿಗಳೇ ಹೊರಡಿಸಬೇಕಾದ ಆದೇಶವನ್ನು ಸುರೇಶ್ ಕುಮಾರ್ ಯಾಕೆ ಹೊರಡಿಸಿದ್ರು ? ಜನ ಕೆಲಸವಿಲ್ಲದೆ, ಆದಾಯವಿಲ್ಲದೆ ಮನೆಯಲ್ಲಿದ್ದಾರೆ. ಅವರು ಶಾಲಾ ಫೀಸ್ ಕಟ್ಟುವುದೆಲ್ಲಿಂದ ? ಶುಲ್ಕ ಕಟ್ಟಲು ಬಲವಂತ ಮಾಡಬಾರದು ಎಂದು ಆದೇಶದಲ್ಲಿ ಹೇಳಿದ್ದರೂ ಸ್ವ ಇಚ್ಚೆಯೋ, ಬಲವಂತವೊ ಎಂಬುದರ ಪರಿಶೀಲನೆಗೆ ನೋಡಲ್ ಅಧಿಕಾರಿಗಳ ನೇಮಕವಾಗಿದೆಯೇ ? ಇಲ್ಲ ! ತನ್ನ ಮಗನಿಗೋ ಮಗಳಿಗೋ ಫೀಸ್ ಕಟ್ಟದೇ ಇದ್ದರೆ ಮುಂದಿನ ಭವಿಷ್ಯಕ್ಕೆ ತೊಂದರೆಯಾಗುತ್ತದೆ ಎಂಬ ಆತಂಕದಲ್ಲಿ ಲಕ್ಷಗಟ್ಟಲೆ ಹಣವನ್ನು ಬಡ್ಡಿಗೆ ತಗೊಂಡು ಹೊಂದಿಸಿ ಶುಲ್ಕ ಕಟ್ಟುವುದು ಬಲವಂತದ ವ್ಯಾಪ್ತಿಯಲ್ಲಿ ಬರುತ್ತದೋ, ಸ್ವ ಇಚ್ಚೆಯ ವ್ಯಾಪ್ತಿಯಲ್ಲಿ ಬರುತ್ತದೋ ? ಇವೆಲ್ಲದರ ಪ್ರಜ್ಞೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೆ ಇಲ್ಲ ಎಂದರೆ ಮೂರ್ಖತನವಾಗುತ್ತದೆ.
ಈ ಅಪಾಯಗಳ ಅರಿವಿದ್ದೇ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಲಾಭ ಮಾಡುವ ಕಡತಕ್ಕೆ ಸಹಿ ಹಾಕಿದ್ದಾರೆ. ಇದರ ಹಿಂದೆ 500 ಕೋಟಿ ರೂಗಳ ವಹಿವಾಟು ನಡೆದಿದೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಸಜ್ಜನ, ಪ್ರಾಮಾಣಿಕ ಸಚಿವ ಸುರೇಶ್ ಕುಮಾರ್ ರವರು ಅವರ ಸಹಿ ಇರುವ ಆದೇಶದ ಬಗ್ಗೆ ಎದ್ದಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡದಿದ್ದರೆ ಅನುಮಾನಗಳು ಹಾಗೇ ಉಳಿದು ಬಿಡುತ್ತವೆ.

-ಇಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಲೇಖಕರ ಅಭಿಪ್ರಾಯವಾಗಿದ್ದು, ಕಾರಣಾಂತರಗಳಿಂದ ಲೇಖಕರ ಹೆಸರು ಬಹಿರಂಗಪಡಿಸಿಲ್ಲ.