ಡಿವಿಜಿ ಸುದ್ದಿ.ಕಾಂ, ದಾವಣಗೆರೆ: ಜನ ಸಾಮಾನ್ಯರು ಸರ್ಕಾರಿ ಸೌಲಭ್ಯಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬರುವ ಅವಶ್ಯಕತೆ ಇಲ್ಲ. ಆಯಾ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಿ ಸಾರ್ವಜನಿಕರ ಸಮಸ್ಯೆ ಬಗೆಹರಿಸಿ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಕಚೇರಿಯಲ್ಲಿ ಇಂದು ಏರ್ಪಡಿಸಲಾಗಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿ ಮಾತನಾಡಿದ ಅವರು, ಪಿಂಚಣಿಗಾಗಿ ಹಿರಿಯ ನಾಗರಿಕರು ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಬರುವ ಅಗತ್ಯವಿಲ್ಲ. 15 ದಿನದ ಒಳಗೆ ಪಿಂಚಣಿದಾರ ಎಲ್ಲ ತಾಂತ್ರಿಕ ದೋಷ ಸರಿಪಡಿಸುವಂತೆ ಸೂಚಿಸಿದರು.
ಸಾರ್ವಜನಿಕ ಸಮಸ್ಯೆ ಕೇಳಬೇಕಾದ ಇಲಾಖೆ ಅಧಿಕಾರಿಗಳು ಗೈರಾಗಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡಿ ಎಂದರು. ಇಂದಿನ ಸಭೆಯಲ್ಲಿ ಮಹಾಪಾಲಿಕೆಗೆ ಸಂಬಂಧಿಸಿದ ಅರ್ಜಿಗಳೇ ಹೆಚ್ಚು ಸ್ವೀಕೃತವಾಗಿದ್ದು, ಇನ್ನು ಮುಂದೆ ಪ್ರತಿ ವಾರ ಪಾಲಿಕೆ ಮತ್ತು ಸ್ಮಾರ್ಟ್‍ಸಿಟಿ ಸಹಯೋಗದಲ್ಲಿ ಸಾರ್ವಜನಿಕ ಸಭೆ ನಡೆಸುವಂತೆ ಸೂಚನೆ ನೀಡಿದರು.
ಅ. 2 ಗಾಂಧಿ ಜಯಂತಿಯಿಂದ ಅ.31 ರವರೆಗೆ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ನಗರ ಸ್ವಚ್ಛತೆ ಕಾರ್ಯದಲ್ಲಿ ತೊಡಗಿಕೊಳ್ಳುವ ಯೋಜನೆ ರೂಪಿಸಲಾಗಿದ್ದು, ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಒಂದೊಂದು ವಾರ್ಡ್‍ಗಳನ್ನು ನಿಯೋಜಿಸಲಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಪಟ್ಟಿ ಪ್ರಕಾರ ತಮ್ಮ ಕಚೇರಿ ಸಿಬ್ಬಂದಿ ಹಾಗೂ ಆಯಾ ವಾರ್ಡ್‍ಗಳ ಪೌರಕಾರ್ಮಿಕರ ಸಹಾಯದೊಂದಿಗೆ ಸ್ವಚ್ಚತೆ ಯನ್ನು ಕೈಗೊಳ್ಳಬೇಕು. ವಾರ್ಡಿನ ಅತ್ಯಂತ ಕೊಳಕು-ಗಲೀಜು ಇರುವ ಪ್ರದೇಶವನ್ನು ಆಯ್ದುಕೊಂಡು ಶ್ರಮ ವಹಿಸಿ ಸ್ವಚ್ಚತೆ ಕೈಗೊಳ್ಳಬೇಕು. ಪ್ಲಾಸ್ಟಿಕ್ ನಿಷೇಧದ ಕುರಿತು ಅರಿವು ಮೂಡಿಸಬೇಕು. ಪ್ಲಾಸ್ಟಿಕ್ ಬಳಸಲಾದ ಬೊಕ್ಕೆ ನೀಡುವಂತಿಲ್ಲ ಎಂದರು.
ಅವೈಜ್ಞಾನಿಕ ಹಂಪ್ಸ್
ನಗರದ ಎಂ.ಸಿಸಿ ಬಿ ಬ್ಲಾಕ್‍ನಲ್ಲಿರುವ ಬಾಯ್ಸ್ ಹಾಸ್ಟೆಲ್ ಬಳಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ಹಂಪ್ಸ್ ಗಳಿಂದ ಅಪಘಾತ ಸೇರಿದಂತೆ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಇದನ್ನು ಸರಿಪಡಿಸಬೇಕೆಂದು ಸಮಾಜ ಕಾರ್ಯಕರ್ತ ಶ್ರೀಕಾಂತ್ ಮನವಿ ಮಾಡಿದರು. ಪಾಲಿಕೆ ಆಯುಕ್ತರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು
ವಿಜಯ ನಗರ ವಾರ್ಡ್ ನಲ್ಲಿ ಸಾರ್ವಜನಿಕರಿಗೆ ಅಗತ್ಯವಾದ ಮೂಲಭೂತ ಸೌಲಭ್ಯ ಒಳಚರಂಡಿ, ಯು.ಜಿ.ಡಿ, ರಸ್ತೆ ದೀಪಗಳ ಸೌಲಭ್ಯ ಇಲ್ಲದೇ ಇರುವುದರಿಂದ ಇಲ್ಲಿನ ನಿವಾಸಿಗಳು ಜೀವನ ನಿರ್ವಹಿಸಲು ತೊಂದರೆಯಾಗುತ್ತಿದೆ. ಆದ ಕಾರಣ ಶೀಘ್ರದಲ್ಲಿ ಈ ಎಲ್ಲಾ ಮುಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ವಿಜಯನಗರ ನಿವಾಸಿ ಮಲ್ಲಿಕಾರ್ಜುನ ಇಂಗಳೇಶ್ವರ ಮನವಿ ಮಾಡಿದರು.
ಖಾತೆ ವರ್ಗಾವಣೆ ವಿಳಂಬ
ರೈತ ಮುಖಂಡರಾದ ಆನಗೋಡು ಭೀಮಣ್ಣ, ಮಾಯಕೊಂಡದ ಲಿಂಗಪ್ಪ, ಚಿನ್ನಸಮುದ್ರ ಭೀಮನಾಯ್ಕ ಹಾಗೂ ಬಲ್ಲೂರು ರವಿಕುಮಾರ್ ಮಾತನಾಡಿ, ತಾಲ್ಲೂಕು ಕಚೇರಿಗಳಲ್ಲಿ ಐ.ಹೆಚ್.ಸಿ ಖಾತೆ ಹಾಗೂ ಇತರೆ ಖಾತೆ ವರ್ಗಾವಣೆ ವಿಳಂಬವಾಗುತ್ತಿದೆ. ಭೂಮಾಪನ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರು ಮತ್ತು ಉಪನಿರ್ದೇಶಕರ ಕಚೇರಿಗಳಲ್ಲಿ ಮೇಲ್ಮನವಿಗಳ ವಿಚಾರಣೆ ಮತ್ತು ವಿಲೇವಾರಿ ಸುಮಾರು 3 ವರ್ಷಗಳಿಂದ ಬಾಕಿ ಉಳಿದುಕೊಂಡಿದ್ದು, ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ರೈತರ ಸಾಲ ಮನ್ನಾ ವಿಷಯದಲ್ಲಿ ಬ್ಯಾಂಕುಗಳು ದ್ವಂದ್ವ ನೀತಿಯನ್ನು ಅನುಸರಿಸುತ್ತಿದ್ದು ಹೊಸ ಸಾಲವನ್ನು ಸಕಾಲಕ್ಕೆ ನೀಡುತ್ತಿಲ್ಲ.
ಕರೆ ಒತ್ತುವರಿ
ಗ್ರಾಮ ಪಂಚಾಯತಿ ಕಾರ್ಯಾಲಯಗಳಲ್ಲಿ ಪಿಡಿಒಗಳು ನಿಯಮಾನುಸಾರ ಕೆಲಸ ಮಾಡದೆ, ಕಾನೂನುಬಾಹಿರ ದಾಖಲೆ ಸೃಷ್ಟಿಸಿ ಅಮಾಯಕರಿಗೆ ತೊಂದರೆ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಕರೆಗಳು ಒತ್ತುವರಿಯಾಗುತ್ತಿದ್ದು, ಸಂಬಂಧಿಸಿದ ಇಲಾಖೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಭೂಸ್ವಾಧೀನವಾದ ಜಮೀನುಗಳು ಮರುಮಾರಾಟವಾಗುತ್ತಿವೆ. ಸಂಬಂಧಪಟ್ಟ ನೀರಾವರಿ ಇಲಾಖೆಗಳು ಕಾನೂನು ಕ್ರಮ ಕೈಗೊಳ್ಳದೇ ಅಕ್ರಮ ಒತ್ತುವರಿದಾರರಿಗೆ ಸಹಕರಿಸುತ್ತಾ ವಿಳಂಬ ನೀತಿ ಅನುಸರಿಸುತ್ತಿದ್ದಾರೆ.
ಈ ಎಲ್ಲ ವಿಚಾರಗಳ ಕುರಿತು ಜಿಲ್ಲಾಧಿಕಾರಿಗಳು ರೈತರು ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ರೈತ ಮುಖಂಡರನ್ನು ಕರೆದು ಸಮಸ್ಯೆಗಳ ಬಗ್ಗೆ ಸಮರ್ಪಕ ಚರ್ಚೆ ನಡೆಸಿ, ಸರ್ಕಾರ ಮತ್ತು ಸಾರ್ವಜನಿಕರ ಮಧ್ಯೆ ಸಾಮರಸ್ಯ ಮೂಡಿಸಲು ಅನುವು ಮಾಡಿಕೊಡಬೇಕು. ಹಿಂದೆ ಜಿಲ್ಲಾಧಿಕಾರಿಗಳು ಈ ರೀತಿ ಸಭೆ ಕರೆಯುತ್ತಿದ್ದರು. ಈ ನಡುವೆ ನಿಂತು ಹೋಗಿದೆ. ಅದಕ್ಕಾಗಿ ರೈತರ ಸಭೆ ಕರೆಯಬೇಕೆಂದು ಮನವಿ ಮಾಡಿದರು. ಜಿಲ್ಲಾಧಿಕಾರಿಗಳು ಈ ಮನವಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಭೆಯಲ್ಲಿ ಜಿ.ಪಂ ಸಿಇಓ ಪದ್ಮ ಬಸವಂತಪ್ಪ, ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ, ಉಪವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ರವೀಂದ್ರ ಮಲ್ಲಾಪುರ, ಕೆಎಸ್‍ಆರ್‍ಟಿಸಿ ವಿಭಾಗೀಯ ಆಯುಕ್ತ ಸಿದ್ದೇಶ್, ಡಿಹೆಚ್ಒ ಡಾ.ರಾಘವೇಂದ್ರ, ಜಿಲ್ಲಾಸ್ಪತ್ರೆ ಅಧೀಕ್ಷಕ ಡಾ.ನಾಗರಾಜ್ ಹಾಜರಿದ್ದರು.