ಡಿವಿಜಿ ಸುದ್ದಿ, ದಾವಣಗೆರೆ :ಮಕ್ಕಳು ಸಮಾಜದ ಆಸ್ತಿ, ಈ ಆಸ್ತಿಗಳನ್ನು ಪೋಷಿಸಿ, ಕಾಪಾಡಬೇಕಾಗಿರುವುದು ಎಲ್ಲರ ಕರ್ತವ್ಯ. ಮಕ್ಕಳನ್ನು ದುಡಿಮೆಗೆ ಕಳುಹಿಸುವುದನ್ನು ತಡೆದು ಶಿಕ್ಷಣ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಬಾಲ ಕಾರ್ಮಿಕರ ಯೋಜನಾ ಕಾರ್ಯಕಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 14 ವರ್ಷದೊಳಗಿನ ಮಕ್ಕಳು ಕೂಲಿ ಕೆಲಸದಲ್ಲಿ ತೊಡಗಿಕೊಂಡಿರುವುದು ಶಿಕ್ಷಾರ್ಹ ಅಪರಾಧವಾಗಿದೆ. 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಕಳುಹಿಸುವ ಬದಲು, ಆಟ-ಪಾಠದಲ್ಲಿ ತೊಡಗಿಕೊಂಡು ಉತ್ತಮ ಶಿಕ್ಷಣ ಪಡೆದುಕೊಳ್ಳಿಲಿ ಎಂದರು.
ಶಾಲೆಯ ಅವಧಿಯಲ್ಲಿ ದುರ್ಗಪಡೆ ಮತ್ತು ಸಿವಿಲ್ ಪೊಲೀಸ್‍ರು ಶಾಲೆಯ ಸುತ್ತ ಮುತ್ತ ಸಂಚರಿಸಿಅನೈತಿಕತೆ ತೋರುವರ ವಿರುದ್ದ ಕ್ರಮ ಕೈಗೊಳ್ಳಬೇಕು. ಮಕ್ಕಳು ಮಾದಕ ವ್ಯಸನಿಗಳಿಗೆ ಬಲಿಯಾಗುತ್ತೀರುವುದು ಅತ್ಯಂತ ಗಂಭೀರ ವಿಷಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಹಿಂದೂ ಮತ್ತು ಮುಸ್ಲಿಂ ಧಾರ್ಮಿಕ ಗುರುಗಳ ಸಭೆ ಕರೆದು ಮಕ್ಕಳಿಗೆ ಹೆಚ್ಚಿನ ಜಾಗೃತಿಯನ್ನು ಮೂಡಿಸುವ ಕಾರ್ಯಮಾಡಲಾಗುವುದು ಎಂದು ತಿಳಿಸಿದರು.
ನಗರದಲ್ಲಿ ಮಂಡಕ್ಕಿ ಮತ್ತು ಅವಲಕ್ಕಿ ಭಟ್ಟಿ, ಗ್ಯಾರೇಜ್ ಸೇರಿದಂತೆ ಅನೇಕ ಕಡೆ ಮಕ್ಕಳು ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ನಗರದಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಎಷ್ಟಿದೆ ಎಂದು ತಿಳಿದುಕೊಳ್ಳಬೇಕು. ಇದಕ್ಕಾಗಿ ಸಂಬಂಧಸಿದ ಇಲಾಖೆಯವರು ಸಮೀಕ್ಷೆ ಮತ್ತು ದಿಢೀರ್ ದಾಳಿ ನಡೆಸಿ, ಪರಿಶೀಲನೆ ನಡೆಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಆನಂದ್, ಸಹಾಯಕ ಕಾರ್ಮಿಕ ಆಯುಕ್ತ ಜಾಹೀರ್ ಭಾಷಾ, ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯ್‍ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಹೆಚ್.ಎಸ್. ರಾಘವೇಂದ್ರ, ಜಿಲ್ಲಾ ಮಂಡಕ್ಕಿ ಭಟ್ಟಿ ಸಂಘದ ಅಧ್ಯಕ್ಚರು ಮತ್ತು ಸದಸ್ಯರುಗಳು, ಎನ್.ಜಿ.ಓ. ಸಂಸ್ಥೆಯವರು ಭಾಗವಹಿಸಿದ್ದರು.



