ಡಿವಿಜಿ ಸುದ್ದಿ, ದಾವಣಗೆರೆ: ಬೆಂಗಳೂರಿನ ಕೆಜಿ ಹಳ್ಳಿ ಮತ್ತು ಡಿಜಿ ಹಳ್ಳಿಯಲ್ಲಿ ನಡೆದ ಘಟನೆ ಹಿಂದೆ ಪಿಎಫ್ ಐ ಮತ್ತು ಎಸ್ ಡಿಪಿಐ ಕೈವಾಡವಿದ್ದು, ಸಂಘಟನೆಯನ್ನು ನಿಷೇಧಿಸಬೇಕೆಂದು ವಿಶ್ವ ಹಿಂದೂ ಪರಿಷತ್ ನಗರಾಧ್ಯಕ್ಷ ರವೀಂದ್ರ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಘಟನೆ ಮೇಲೆ ದೇಶದ್ರೋಹ ಹಾಗೂ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಕೋಮುಗಲಭೆ, ಸಾರ್ವಜನಿಕ ಸ್ವತ್ತು ಹಾನಿ, ಮಾಧ್ಯಮ, ಪೋಲಿಸ್ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಸ್ಥಳೀಯ ಶಾಸಕ ಅಖಂಡ ಶ್ರೀನಿವಾಸ್ ಅವರ ಮೇಲೆಯೂ ಹಲ್ಲೆಗೆ ಯತ್ನಿಸಲಾಗಿದೆ ಎಂದರು.
ಈ ಘಟನೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆಗೆ ಆಗ್ರಹಿಸುವುದನ್ನು ಬಿಟ್ಟು ಕಾಂಗ್ರೆಸ್ ಸಮರ್ಥಿಸಿಕೊಳ್ಳುತ್ತಿರುವುದು ದುರಂತ. ಹಿಂದೂಗಳನ್ನು ಈ ವಿಚಾರದಲ್ಲಿ ಎಳೆದು ತರಲಾಗುತ್ತಿದೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಹವಣಿಸುತ್ತಿದ್ದಾರೆ. ಇಂತಹ ಸಂಘಟನೆಗಳನ್ನು ಬ್ಯಾನ್ ಮಾಡಬೇಕಿದೆ ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಬಸವರಾಜ್ ಗುಬ್ಬಿ, ಎಸ್ ರಾಘವೇಂದ್ರ, ಎನ್ ಮಲ್ಲೇಶ್, ಎಸ್ ಓಜಿ ಹನುಮಂತಪ್ಪ ಉಪಸ್ಥಿತರಿದ್ದರು.



