ಡಿವಿಜಿ ಸುದ್ದಿ, ದಾವಣಗೆರೆ: ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಕಡಿಮೆ ಬೆಲೆಗೆ ತರಕಾರಿಯನ್ನು ಮನೆ ಬಾಗಿಲಿಗೆ ಪೂರೈಕೆ ಮಾಡುವ ಕಾರ್ಯಕ್ಕೆ ಮೇಯರ್ ಅಜಯ್‍ಕುಮಾರ್ ಚಾಲನೆ ನೀಡಿದರು.
ಮಹಾನಗರ ಪಾಲಿಕೆ ಆವರಣದಲ್ಲಿ ಸೋಮವಾರ ಸಂಜೆ ಜಿಲ್ಲಾ ಹಾಪ್‍ಕಾಮ್ಸ್ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಲಾದ ಮನೆ ಬಾಗಿಲಿಗೆ ತರಕಾರಿ ತಲುಪಿಸುವ ತರಕಾರಿ ಮಾರಾಟ ಮಾಡುವ ವಾಹನಗಳಿಗೆ ಚಾಲನೆ ನೀಡಿದರು.
ನಗರದಲ್ಲಿ ಕೊರೋನಾ ವೈರಸ್‍ನಿಂದಾಗಿ ಲಾಕ್‍ಡೌನ್ ಇದ್ದುದರಿಂದ ತರಕಾರಿ ಮಾರುವವರು ಇದನ್ನೇ ಬಂಡವಾಳವಾಗಿಸಿಕೊಂಡು ಅಧಿಕ ಬೆಲೆಗೆ ತರಕಾರಿಗಳನ್ನು ಮಾರಾಟ ಮಾಡುತ್ತಿರುವ ಕುರಿತು ದೂರು ಬರುತ್ತಿರುವುದರಿಂದ ಕಡಿಮೆ ಬೆಲೆಗೆ ನಗರದ ಎಲ್ಲ ವಾರ್ಡುಗಳಿಗೆ ವಾಹನ ಮೂಲಕ ತೆರಳಿ ಸಾಮಾಜಿಕ ಅಂತರ ಕಾಯ್ದುಕೊಂಡು ತರಕಾರಿ ವಿತರಿಸುವ ಬಗ್ಗೆ ಆಲೋಚಿಸಿ, ಇಂದು ತರಕಾರಿ ಮಾರಾಟ ಮಾಡುವ ವಾಹನಗಳಿಗೆ ಚಾಲನೆ ನೀಡಲಾಗಿದೆ. ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ನುಕು-ನುಗ್ಗಲಿಲ್ಲದೇ ಕಡಿಮೆ ಬೆಲೆಗೆ ತರಕಾರಿಯನ್ನು ಕೊಂಡುಕೊಳ್ಳುವಂತೆ ತಿಳಿಸಿದರು.
ಈಗಾಗಲೇ 250 ಕ್ಕೂ ಅಧಿಕ ತಳ್ಳುಗಾಡಿಗಳ ಮೂಲಕ ತರಕಾರಿ ಮಾರಾಟ ಮಾಡಲಾಗುತ್ತಿದೆ. ಆದರೆ ಅವರು ನಗರದ ಹೊರವಲಯ, ದೂರದ ವಾರ್ಡುಗಳಿಗೆ ತೆರಳಿ ಮಾರಾಟ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ನಗರದ ಎಲ್ಲ ವಾರ್ಡುಗಳ ಜನರಿಗೂ ಸಹ ತರಕಾರಿ ದೊರಕಿಸುವ ಉದ್ದೇಶದಿಂದ ತರಕಾರಿ ಮಾರಾಟ ವಾಹನಗಳನ್ನು ಬಿಡಲಾಗಿದೆ ಎಂದರು.
ದಾವಣಗೆರೆ ಜಿಲ್ಲಾ ಹಾಪ್‍ಕಾಮ್ಸ್ ಸಂಸ್ಥಾಪಕರಾದ ಜೆ .ಆರ್ . ಶಣ್ಮುಕಪ್ಪ ಅವರು ಮಾತನಾಡಿ, 2 ತರಕಾರಿ ಮಾರಾಟ ಮಾಡುವ ವಾಹನಗಳಿಗೆ ಚಾಲನೆ ನೀಡಲಾಗಿದೆ. ನಾಳೆ 5 ವಾಹನಗಳು ಲಭ್ಯವಾಗಲಿವೆ. ನಂತರದಲ್ಲಿ 25 ವಾಹನಗಳು ಈ ಸೇವೆಗೆ ನಗರದ ಪ್ರತಿ ವಾರ್ಡುಗಳಿಗೂ ತರಕಾರಿ ಮಾರಾಟಕ್ಕೆ ಲಭ್ಯವಾಗಲಿವೆ ಎಂದು ಅವರು ಹೇಳಿದರು.
ನಂತರದ ದಿನಗಳಲ್ಲಿ ದಿನಸಿ ಸಾಮಗ್ರಿಗಳನ್ನು ಸಹ ಕಡಿಮೆ ಬೆಲೆಗೆ ಮನೆ ಬಾಗಿಲಿಗೆ ತಲುಪಿಸುವ ಬಗ್ಗೆ ಚಿಂತನೆ ಇದೆ. ಈ ಮೂಲಕ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಬಹುದಾಗಿದೆ ಎಂದರು.
ಹಾಪ್ ಕಾಮ್ಸ್ ಮ್ಯಾನೇಜಿಂಗ್ ಡೈರೆಕ್ಷರ್ ಮಂಜಾನಾಯ್ಕ್ ಮಾತನಾಡಿ, ರೈತರು ಬೆಳೆದ ತರಕಾರಿ ಸೊಪ್ಪು ಹಾಗೂ ಹಣ್ಣುಗಳನ್ನು ಮಾರುಕಟ್ಟೆ ಬೆಲೆಗೆ ಖರೀದಿಸಿ, ತರಕಾರಿ ಮಾರಾಟ ಮಾಡುವ ವಾಹನಗಳ ಮೂಲಕ ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸಲು ಕ್ರಮ ವಹಿಸಲಾಗುವುದು ಎಂದರು. ರೈತರು ತಾವು ಬೆಳೆದ ತರಕಾರಿ ಹಣ್ಣುಗಳನ್ನು ಹಾಪ್‍ಕಾಮ್ಸ್‍ಗೆ ಮಾರಾಟ ಮಾಡಬಹುದಾಗಿದ್ದು, ದೂರವಾಣಿ ಸಂಖ್ಯೆ 9902752350 (ಮಂಜಾನಾಯ್ಕ್) ಹಾಗೂ 9886291143 (ವರುಣ, ಕಾರ್ಯದರ್ಶಿ) ಇವರನ್ನು ಸಂಪರ್ಕಿಸಬಹುದಾಗಿದೆ.ಮಹಾನಗರ ಪಾಲಿಕೆ ಸದಸ್ಯರಾದ ಕೆ ಚಮನ್‍ಸಾಬ, ವಿನಾಯಕ್ ಪೈಲ್ವಾನ್, ಪಾಲಿಕೆ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಪರಿಸರ ಅಭಿಯಂತರ ಸುನೀಲ್, ಆರೋಗ್ಯ ಅಧಿಕಾರಿ ಸಂತೋಷ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ ಹಾಜರಿದ್ದರು.