ಡಿವಿಜಿ ಸುದ್ದಿ, ಹರಿಹರ: ವಾಲ್ಮೀಕಿ ಸಮಾಜಕ್ಕೆ ಸಿಗಬೇಕಾದ 7.5 ಮೀಸಲಾತಿ ಕುರಿತು ಸರ್ಕಾರಕ್ಕೆ ನೀಡಬೇಕಾದ ನಾಗಮೋಹನ್ ದಾಸ್ ವರದಿ ವಿಳಂಬವಾಗಿದೆ. ಹೀಗಾಗಿ ಘೋಷಣೆ ತಡವಾಗಿದ್ದು, ವಾಲ್ಮೀಕಿ ಜಾತ್ರೆ ಸಮಾರಂಭದಲ್ಲಿ ಸಿಎಂ ಸಮಾಜಕ್ಕೆ ಸಲ್ಲಬೇಕಾದ ಶೇ. 7.5 ಮೀಸಲಾತಿ ಘೋಷಣೆ ಮಾಡುವ ಭರವಸೆ ಇದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.
ಹರಿಹರ ತಾಲ್ಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಾತ್ರೆಯ ಪೂರ್ವಬಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೀಸಲಾತಿ ಹೋರಾಟದಲ್ಲಿ ಯಾವುದೇ ನಿರ್ಧಾರಕ್ಕೆ ಬದ್ದರಾಗಿರಬೇಕು ಎನ್ನುವುದು ಸ್ವಾಮೀಜಿಗಳ ಆದೇಶವಾಗಿದೆ. ಅವರ ಮಾತಿಗೆ ನಾವು ಸದಾ ಬದ್ದರಾಗಿರುತ್ತೇವೆ. ಇದಲ್ಲದೆ ನಮ್ಮ ಸಮಾಜ ಶಾಸಕರು, ಮುಖಂಡರು ನನ್ನ ಮೇಲೆ ಸಾಕಷ್ಟು ಒತ್ತಡ ತಂದಿದ್ದಾರೆ ಎಂದರು.
ಜ10 ರೊಳಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಸಮಾಜದ ಶಾಸಕರು ಒಪ್ಪಿದ್ದಾರೆ. ನಮ್ಮ ಸಮಾಜದ ಶಾಸಕರು ಹಾಗೂ ಗುರುಗಳ ಸಮ್ಮುಖದಲ್ಲಿ ತೆರಳುತ್ತೇವೆ. ಮುಖ್ಯಮಂತ್ರಿಗಳು ಜಾತ್ರೆಯಲ್ಲಿ ಮೀಸಲಾತಿ ಘೋಷಣೆ ಮಾಡುವ ಭರವಸೆ ಇದೆ ಎಂದು ತಿಳಿಸಿದರು.

ಮೀಸಲಾತಿ ಹೆಚ್ಚಸದಿದ್ದರೆ ಮುಂದಿನ ನಿರ್ಧಾರ ಕಠೋರ
ಶ್ರೀ ವಾಲ್ಮೀಕಿ ಮಠದ ಪೀಠಾಧಿಪತಿ ಪ್ರಸನ್ನಾನಂದಪುರಿ ಶ್ರೀಗಳು ಮಾತನಾಡಿ, ರಾಜ್ಯದಲ್ಲಿ ವಾಲ್ಮೀಕಿ ಜಾತ್ರೆಯ ಪ್ರಯುಕ್ತ ಸಮಾಜವು ಸಂಘಟನೆಯಾಗುತ್ತಿದೆ. ಮಠದ ಆವರಣದಲ್ಲಿ ಎರಡನೇ ವರ್ಷದ ವಾಲ್ಮೀಕಿ ಜಾತ್ರೆಯನ್ನು ಮಾಡಲು ನಿರ್ಧರಿಸಿದ್ದು, ಸಚಿವ ಶ್ರೀರಾಮುಲು ಅಧ್ಯಕ್ಷತೆಯಲ್ಲಿ ವಾಲ್ಮೀಕಿ ಜಾತ್ರೆ ನಡೆಯಲಿದೆ. ಮುಖ್ಯಮಂತ್ರಿ ಗಳ ಬಗ್ಗೆ ಅಪಾರವಾದ ನಂಬಿಕೆ ಇದೆ. ವಾಲ್ಮೀಕಿ ಜಾತ್ರೆಯಲ್ಲಿ ಮೀಸಲಾತಿ ಬೇಡಿಕೆಯನ್ನು ಈಡೇರಿಸಬೇಕು ಎಂದರು.
ಮೀಸಲಾತಿ ಬಿಡುಗಡೆ ಮಾಡಲಿಲ್ಲ ಎಂದರೆ ಸಮಾಜದ ಎಲ್ಲಾ ಪಕ್ಷಗಳ ಶಾಸಕರ, ಸಚಿವರ ಸಭೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ. ಮುಂದಿನ ನಿರ್ಧಾರ ಅತ್ಯಂತ ಕಠೋರವಾಗಿರುತ್ತೆ ಎಂದು ರಾಜ್ಯ ಸರ್ಕಾರಕ್ಕೆ ಖಡಕ್ ಸಂದೇಶವನ್ನು ನೀಡಿದರು.
ಶಾಸಕ ಶಿವನಗೌಡ ಪಾಟೀಲ್, ಮಠದಲ್ಲಿ ನಡೆದ ಆಂತರಿಕ ಸಭೆಯಲ್ಲಿ ಮೀಸಲಾತಿ ಬಗ್ಗೆ ಚರ್ಚಿಸಿದ್ದೇವೆ. ಇದುವರೆಗು ಮೀಸಲಾತಿ ನೀಡದಿರುವುದು ಸಾಕಷ್ಟು ಬೇಸರವಿದೆ. ರಾಮುಲು ಅವರಿಗೆ ಮೀಸಲಾತಿ ವಿಚಾರವಾಗಿ ಪಕ್ಷಾತೀತವಾಗಿ ಬೆಂಬಲ ನೀಡಿದ್ದೇವೆ. ಸರ್ಕಾರದ ಜೊತೆ ಮಾತನಾಡಿ ಮೀಸಲಾತಿ ಬೇಡಿಕೆಯನ್ನು ಈಡೇಸುವಂತೆ ಮನವಿ ಮಾಡಿಕೊಂಡಿದ್ದೇವೆ ಎಂದರು.
ಸಂಸದ ದೇವೇಂದ್ರಪ್ಪ, ಶಾಸಕರಾದ ಸೋಮಲಿಂಗಪ್ಪ, ಕಂಪ್ಲಿ ಗಣೇಶ್, ಪ್ರತಾಪ್ ಗೌಡ ಪಾಟೀಲ್, ರಘುಮೂರ್ತಿ, ಬಸವರಾಜ್ ದದ್ದಲ್, ಎಸ್.ವಿ ರಾಮಚಂದ್ರಪ್ಪ, ಸಮಾಜದ ಮುಖಂಡರಾದ ಕಳ್ಳೇರ್ ಮಂಜಣ್ಣ ಹಾಗೂ ಮತ್ತಿತರರಿದ್ದರು.



