ಡಿವಿಜಿ ಸುದ್ದಿ, ದಾವಣಗೆರೆ: ಹಣ್ಣು ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಸಹಜವಾಗಿ ಮಾಗಿದ ಮಾವಿನ ಹಣ್ಣು ಅಂದ್ರೆ ಎಲ್ಲರಿಗೂ ಇಷ್ಟ. ಸಹಜವಾಗಿ ಮಾಗಿದ ಮಾವಿನ ಹಣ್ಣಿನ ಮೇಳವನ್ನು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ ಆವರಣದಲ್ಲಿ ಇತ್ತಿಚೆಗೆ ಆಯೋಜಿಸಲಾಗಿತ್ತು.
ಪ್ರತೀ ಶನಿವಾರ ಮೂರು ವಾರ ಜರುಗಿದ ಮೇಳದಲ್ಲಿ ಮಾವು ಬೆಳೆದ ಬೆಳೆಗಾರರು ರಾಸಾಯನಿಕಗಳನ್ನು ಬಳಸದೆ ಸುರಕ್ಷಿತವಾಗಿ ಮಾಗಿಸಿದ ಹಣ್ಣುಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿದರು. ಗ್ರಾಹಕರು ಅಪೇಕ್ಷೆಪಡುವ ರುಚಿಕರ ಆಪೂಸು ತಳಿ ಹೆಚ್ಚು ಮಾರಾಟವಾಗಿವೆ.
ಮೇಳದಲ್ಲಿ ಉಚ್ಚವ್ವನಹಳ್ಳಿಯ ದೇವನಗರಿ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ಲಿಮಿಟೆಡ್, ಕಂಚಿಕೆರೆಯ ಉತ್ಸವಾಂಭ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ಲಿಮಿಟೆಡ್, ಯುವ ರೈತರಾದ ದೊಡ್ಡಬ್ಬಿಗೆರೆಯ ತಿಪ್ಪೆಸ್ವಾಮಿ ಮತ್ತು ಲಿಂಗದಹಳ್ಳಿ ಗ್ರಾಮದ ಶ್ರೀ ಕಾರ್ತಿಕ್ ಪಾಟೀಲ್ ಭಾಗವಹಿಸಿದ್ದರು.