ಡಿವಿಜಿ ಸುದ್ದಿ, ದಾವಣಗೆರೆ: ರಾಜ್ಯದ ಬೊಕ್ಕಸಕ್ಕೆ ಆದಾಯ ತಂದುಕೊಡುವ ಇಲಾಖೆಗಳಲ್ಲಿ ಸಬ್ ರಿಜಿಸ್ಟರ್ ಕಚೇರಿ ಕೂಡ ಒಂದು. ಇಂತಹ ಇಲಾಖೆಯಲ್ಲಿ ಸಾರ್ವಜನಿಕರಿಗೆ ಕನಿಷ್ಟ ಸೌಕರ್ಯ ಕಲ್ಪಿಸಲು ಕೂಡ ಸರ್ಕಾರ ಮೀನಾಮೇಷ ಎಣಿಸುತ್ತಿದೆ.
ದಾವಣಗೆರೆಯ ಸಬ್ ರಿಜಿಸ್ಟರ್ ಕಚೇರಿ ಮುಂದೆ ಮಳೆ ಬಂದರೆ ಸಾಕು, ನೀರು ನಿಂತು ಕೆಸರಿನ ಗದ್ದೆಯಂತಾಗುತ್ತದೆ. ಇದರಿಂದ ಸಾರ್ವಜನಿಕರು ಓಡಾಟಕ್ಕೂ ಸಾಧ್ಯವಾಗದಂತ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಉಪನೋಂದಣಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆ ಸಹ ಮಾಡಿಲ್ಲ. ಇದರಿಂದ ಜನ ಪ್ರತಿ ದಿನ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.
ಒಂದು ಲಕ್ಷ ರೂಪಾಯಿ ಮೊತ್ತದ ರಿಜಿಸ್ಟ್ರೇಷನ್ ಗೆ 5.6% ಸ್ಟ್ಯಾಂಪ್ ಡ್ಯೂಟಿ, 1% ರಿಜಿಸ್ಟ್ರೇಷನ್ ಫೀಸ್ ಹಾಗೂ ಸ್ಕ್ಯಾನಿಂಗ್ ಮುಂತಾದವು ಎಂದು 1 ಲಕ್ಷ ಮೊತ್ತದ ಆಸ್ತಿ ನೋಂದಣಿಗೆ 7000 ರೂ ಸರ್ಕಾರಕ್ಕೆ ಆದಾಯ ಬರುತ್ತದೆ. ಸಾರ್ವಜನಿಕರು ತಮ್ಮ ಆಸ್ತಿಯ ಇಸಿ ಪಡೆಯಲು ಮೊದಲ ಒಂದು ವರ್ಷಕ್ಕೆ 35 ರೂ ನಂತರದ ಪ್ರತಿ ವರ್ಷಕ್ಕೆ 10 ರೂ ನಿಗದಿ ಮಾಡಿದೆ. ಆದರೆ, ಅಧಿಕಾರಿಗಳು ಅದಕ್ಕೆ ರಸೀದಿ ನೀಡದೆ ಮನಸೋ ಇಚ್ಛೆ ಸಾರ್ವಜನಿಕರಿಂದ ಸುಲಿಗೆ ಮಾಡುತ್ತಿದ್ದಾರೆ.
ಸರ್ಕಾರದ ನಿಗದಿ ಪ್ರಕಾರ 13 ವರ್ಷದ ಇಸಿ ಪಡೆಯಲು 155 ರೂ ಆಗುತ್ತದೆ ಆದರೆ ನೌಕರರು 180 ರೂ ಪಡೆಯುತ್ತಾರೆ. ಸರ್ಕಾರದ ನಿಗದಿಗಿಂತ ಒಬ್ಬ ನಾಗರಿಕರಿಂದ 35 ರೂ ಹೆಚ್ಚಿಗೆ ಪಡೆಯುತ್ತಾರೆ. ಪ್ರತಿದಿನ ಸರಾಸರಿ 100 ಅರ್ಜಿ ಎಂದರೂ, 3500 ರೂ ಹೆಚ್ಚಿನ ಹಣ ಪಡೆಯುತ್ತಿದ್ದಾರೆ. ಅದು ರಸೀದಿ ನೀಡಿದರೆ ಮಾತ್ರ ಇಲ್ಲದಿದ್ದರೆ ಪೂರ್ಣ ಹಣ ಅವರ ಜೇಬಿಗೆ ಇಳಿಯುತ್ತಿದೆ. ಜಿಲ್ಲಾಡಳಿತ ಈ ಕೂಡಲೇ ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂಬುದು ಸಾರ್ವಜನಿಕ ಆಗ್ರಹವಾಗಿದೆ.
-ವರದಿ: ಕೆ.ಎಲ್. ಹರೀಶ್, ಬಸಾಪುರ