ಡಿವಿಜಿ ಸುದ್ದಿ, ದಾವಣಗೆರೆ: ಕೊರೊನಾ ವೈರಸ್ ಲಾಕ್‍ಡೌನ್ ಸಡಿಲ ಹಿನ್ನೆಲೆ ಮೇ 23 ರ ನಂತರ ದಾವಣಗೆರೆ ಜಿಲ್ಲೆಯಲ್ಲಿರುವ ಗಣಿ, ಕಲ್ಲು ಮರಳು ಗಣಿಗಾರಿಕೆ ಹಾಗೂ ಕ್ರಷರ್ ಘಟಕ ಕಾರ್ಯ ಚಟುವಟಿಕೆ ಆರಂಭಕ್ಕೆ ಷರತ್ತುಬದ್ಧ ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ಕೋವಿಡ್-19 ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಮಾನ್ಯ ಭಾರತ ಸರ್ಕಾರ ಜಾರಿಗೊಳಿಸಿದ ಎಲ್ಲಾ ವಿಧಾನಗಳನ್ನು ಕಾರ್ಮಿಕರು ಅಳವಡಿಸಿಕೊಂಡು ಸುರಕ್ಷತೆ ಕಾಪಾಡಿಕೊಳ್ಳುವುದು. ಕಾರ್ಮಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು.ಶೌಚಾಲಯ, ವಾಟರ್ ಪಂಪ್ ಮುಂತಾದ ಕಡೆ ಕಡ್ಡಾಯವಾಗಿ ಸೋಪ್ ಮತ್ತು ಸ್ಯಾನಿಟೈಸರ್ ಬಳಸುವುದು. ಸ್ಥಳೀಯರನ್ನು ಮಾತ್ರ ಬಳಸಿಕೊಳ್ಳವುದು. ಹೊರ ಪ್ರದೇಶದಿಂದ ಕಾರ್ಮಿಕರನ್ನು ಕರೆತರುವಂತಿಲ್ಲ. ಕಾರ್ಮಿಕರು ಮಾಸ್ಕ್ ಮತ್ತು ಗ್ಲೌಸ್ ಧರಿಸುವುದು. ಗಣಿಗಾರಿಕೆ/ಕ್ರಷರ್ ಪ್ರದೇಶಗಳಲ್ಲಿ 05 ಕ್ಕಿಂತ ಹೆಚ್ಚಿನ ಜನರು ಸೇರುವಂತಿಲ್ಲ. 60 ವರ್ಷ ಮೇಲ್ಪಟ್ಟ, ದೃಷ್ಟಿಹೀನ, ಅಂಗವೈಕಲ್ಯ ಹೊಂದಿರುವ ಹಾಗೂ 14 ವರ್ಷದ ಒಳಪಟ್ಟ ಮಕ್ಕಳನ್ನು ಹಾಗೂ ಅನಾರೋಗ್ಯ ಪೀಡಿತರನ್ನು ನಿರ್ಬಂಧಿಸಬೇಕು.
ಕಾರ್ಮಿಕರಿಗೆ ಕಡ್ಡಾಯವಾಗಿ ಆರೋಗ್ಯ ವಿಮೆಯನ್ನು ಮಾಡಿಸುವುದು. ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸುವುದು. ಕಾರ್ಮಿಕರಿಗೆ ಕೊರೊನಾ ವೈರಸ್ ಬಗ್ಗೆ ಜಾಗೃತಿಯನ್ನು ಮೂಡಿಸುವುದು. ಬೆಳಿಗ್ಗೆ 06 ರಿಂದ ಸಂಜೆ 06 ರವರೆಗೆ ಮಾತ್ರ ಕೆಲಸ ನಿರ್ವಹಿಸುವುದು. ಶೀತ, ಕೆಮ್ಮು, ಜ್ವರ ರೋಗದ ಲಕ್ಷಣಗಳು ಕಂಡು ಬಂದರೆ ಜಿಲ್ಲಾ ಕಂಟ್ರೋಲ್ ರೂಂ ಸಂಖ್ಯೆ: 1077 ಗೆ ಹಾಗೂ ಸ್ಥಳೀಯ ಆರೋಗ್ಯಾಧಿಕಾರಿಗಳಿಗೆ ಮಾಹಿತಿಯನ್ನು ನೀಡುವುದು. ಈ ಸೂಚನೆಗಳನ್ನು ಉಲ್ಲಂಘಿಸಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005 ಸೆಕ್ಷನ್ 58 ಹಾಗೂ ಐ.ಪಿ.ಸಿ ಸೆಕ್ಷನ್ 188 ಅಡಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



