ಡಿವಿಜಿ ಸುದ್ದಿ, ದಾವಣಗೆರೆ: ಸಂವಿಧಾನ ನಮ್ಮ ದೇಶದ ಪವಿತ್ರ ಗ್ರಂಥವಾಗಿದೆ. ಎಲ್ಲಾ ಕಾನೂನುಗಳು ಸಂವಿಧಾನದ ತಳಹದಿಯ ಮೇಲೆ ರಚನೆಯಾಗಿವೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು.ಎನ್.ಬಡಿಗೇರ್ ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಸೀತಮ್ಮ ಕಾಲೇಜು ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ‘ಸಂವಿಧಾನ ಓದು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ದೇಶವು ವಿವಿಧ ಧರ್ಮ ಮತ್ತು ಜಾತಿಗಳನ್ನು ಹೊಂದಿದ್ದರೂ ಪ್ರತಿಯೊಬ್ಬ ನಾಗರಿಕರೂ ಸಂವಿಧಾನವನ್ನು ಅನುಸರಿಸಬೇಕು. ಹೆಣ್ಣುಮಕ್ಕಳು ಸುಶಿಕ್ಷಿತರಾಗಿ, ಉದ್ಯೋಗಸ್ಥರಾದರೆ ಈ ಸಮಾಜದಲ್ಲಿ ನಡೆಯುವ ಶೋಷಣೆಯಿಂದ ಮುಕ್ತಿ ಪಡೆಯಬಹುದು ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ ಮಂಜುನಾಥ್ ಮಾತನಾಡಿ, ನಮ್ಮ ದೇಶದಲ್ಲಿರುವ ವಿವಿಧ ಜಾತಿ ಮತ್ತು ಧರ್ಮಗಳಿಗೆ ಅನುಕೂಲವಾಗುವಂತೆ ನಮ್ಮ ಸಂವಿಧಾನವಿದೆ. ನಮ್ಮನ್ನು ನಾವು ಮುನ್ನಡೆಸಲು ಇರುವ ಕಾನೂನುಗಳೇ ಸಂವಿಧಾನ. ಕಾಲಕ್ಕೆ ತಕ್ಕಂತೆ ಸಂವಿಧಾನದಲ್ಲಿ ಅನೇಕ ತಿದ್ದುಪಡಿಗಳನ್ನು ತರಲಾಗಿದೆ. ಇಂತಹ ತಿದ್ದುಪಡಿಗಳಿಂದ ನಮ್ಮ ಸಂವಿಧಾನ ಮತ್ತಷ್ಟು ಬಲಿಷ್ಟವಾಗಿದೆ ಎಂದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಅರುಣ್‍ಕುಮಾರ್ ಎಲ್.ಹೆಚ್ ಮಾತನಾಡಿ, ಭಾರತದ ಸಂವಿಧಾನವು ಇಡೀ ಪ್ರಪಂಚದಲ್ಲಿಯೇ ಅತೀ ದೊಡ್ಡ ಲಿಖಿತ ಸಂವಿಧಾನವಾಗಿದೆ. ಸಂವಿಧಾನ ಜಾರಿಗೆ ಬಂದು 70 ವರ್ಷ ಕಳೆಯುತ್ತ ಬಂದಿದೆ. ಆದರೆ ಸಂವಿಧಾನವನ್ನು ಅರ್ಥೈಸುವ ಕಾರ್ಯ ನಡೆದಿಲ್ಲ. ಸಂವಿಧಾನ ತಿಳಿದವರು ಸಹ ಸಂವಿಧಾನವನ್ನು ಪಾಲಿಸುತ್ತಿಲ್ಲ. ಸಂವಿಧಾನವನ್ನು ಓದಿ ಸರಿಯಾಗಿ ಅರ್ಥೈಸುವ ಕಾರ್ಯವಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೀತಮ್ಮ ಕಾಲೇಜಿನ ಉಪ ಪ್ರಾಂಶುಪಾಲ ಮಂಜಪ್ಪ ಎ.ಆರ್ ವಹಿಸಿದ್ದರು. ವಕೀಲರಾದ ಆಂಜನೇಯ ಗುರೂಜಿ, ಕವಿತ ಎಸ್.ಜಿ, ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಪ್ಯಾನಲ್ ವಕೀಲರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



