ಡಿವಿಜಿ ಸುದ್ದಿ, ದಾವಣಗೆರೆ: ಹೊನ್ನಾಳಿ, ನ್ಯಾಮತಿ ತಾಲ್ಲೂಕಿನಲ್ಲಿ ಬಡವರಿಗೆ ಆಹಾರ ಕಿಟ್ ವಿತರಣೆ ಸಂಬಂಧ ಹೊನ್ನಾಳಿ ಮಾಜಿ, ಹಾಲಿ ಶಾಸಕರ ನಡುವೆ ಜಿದ್ದಾಜಿದ್ದಿ ಮುಂದುವರಿದಿದೆ. ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಸ್ವಂತ ಖರ್ಚಿನಲ್ಲಿ ಇಲ್ಲಿವರೆಗೆ ಒಂದು ಆಹಾರ ಕಿಟ್ ಕೂಡ ಹಂಚಿಕೆ ಮಾಡಿಲ್ಲ. ಸಂಘ, ಸಂಸ್ಥೆ, ದಾನಿಗಳು ಕೊಟ್ಟಿದ್ದನ್ನು ತಾವು ಕೊಟ್ಟಿದ್ದು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಹೊನ್ನಾಳಿ ಮಾಜಿ ಶಾಸಕ ಶಾಂತನಗೌಡ ಆರೋಪಿಸಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೇಣುಕಾಚಾರ್ಯ ಅವರು ಪ್ರಚಾರಕ್ಕಾಗಿ 10 ಸಾವಿರ ಆಹಾರ ಕಿಟ್ ಕೊಟ್ಟಿದ್ದೇನೆ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ, ನಿಮಗೆ ಯಾಕೆ ಲೆಕ್ಕ ಕೊಡಬೇಕು..? ನೀವೇನು ಎಂಪಿ ನಾ..? ಎಂಎಲ್ ಎ ನಾ ಎಂದು ಏಕ ವಚನದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಮೂರು ಶಾಸಕ, ಒಮ್ಮೆ ಮಂತ್ರಿಯಾದವರು ಈ ರೀತಿ ಮಾತನಾಡುವುದು ಸರಿನಾ ಎಂದು ಪ್ರಶ್ನೆ ಮಾಡಿದರು.

ನ್ಯಾಮತಿ, ಹೊನ್ನಾಳಿಯಲ್ಲಿ 10 ರಿಂದ 15 ಸಾವಿರ ಆಹಾರ ಕಿಟ್ ಹಾಗೂ ಪ್ರತಿ ದಿನದ 2 ಸಾವಿರ ಜನರಿಗೆ ಊಟ ಹಾಕುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ವಾಸ್ತವದಲ್ಲಿ 500 ಜನಕ್ಕೂ ಊಟ ಹಾಕಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಬನ್ನಿ ಎಷ್ಟು ಹಂಚಿಕೆ ಮಾಡಿದ್ದೇವೆ ಎಂದು ಸವಾಲು ಹಾಕಿದ್ದರು. ನಾವು ಕೂಡ ಸವಾಲು ಸ್ವೀಕರಿಸಿ, ಹೋದರೆ ಫಲಾಯನವಾದ ಮಾಡಿದರು ಎಂದರು.
ಈ ಬಗ್ಗೆ ತಾಲ್ಲೂಕಿನಲ್ಲಿ ಎಷ್ಟು ಆಹಾರ ಕಿಟ್ ವಿತರಣೆ ಆಗಿದೆ ಎಂಬುದರ ಕುರಿತು ತಹಶೀಲ್ದಾರ್ ಅವರಿಂದ ಮಾಹಿತಿ ಕೇಳಲಾಯಿತು. ಅವರು ಕೊಟ್ಟ ಮಾಹಿತಿ ಪ್ರಕಾರ ಶಾಸಕರು ಇದುವರೆಗೂ ಸರ್ಕಾರದಿಂದ ಹಾಗೂ ಸ್ವಂತಕ್ಕೆ ಒಂದು ಆಹಾರ ಕಿಟ್ ವಿತರಣೆ ಮಾಡಿಲ್ಲ. ತಾಲ್ಲೂಕಿನ ದಾನಿಗಳು ನೀಡಿದ್ದನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಹೀಗಾಗಿ ದಾನಿಗಳು ನೀಡಿದ್ದನ್ನು ನಮ್ಮದು ಎಂದು ಬಿಂಬಿಸಿಕೊಂಡು ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಟೀಕಿಸಿದರು.
ಭತ್ತ, ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವ ಸವಾಲು
ಇನ್ನು ಜಿಲ್ಲೆಯಲ್ಲಿ ಭತ್ತ, ಮೆಕ್ಕೆಜೋಳ ಬೆಲೆ ಕುಸಿದು ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದ್ದರೂ, ಏನು ಕ್ರಮ ಕೈಗೊಳ್ಳುತ್ತಿಲ್. ಜಿಲ್ಲೆಯಲ್ಲಿ ಈ ಕೂಡಲೇ ಭತ್ತ, ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಖರೀದಿ ಕೇಂದ್ರ ತೆರೆಯಲು ಮುಖ್ಯಮಂತ್ರಿಗಳ ಅನುಮತಿ ತಂದರೆ, ರೇಣುಕಾಚಾರ್ಯ ಅವರು ಸಿಎಂ ರಾಜಕೀಯ ಕಾರ್ಯದರ್ಶಿ ಆಗಿದ್ದಕ್ಕೂ ಸಾರ್ಥಕವಾಗುತ್ತಿದೆ ಸವಾಲು ಹಾಕಿದರು.