ಡಿವಿಜಿ ಸುದ್ದಿ, ದಾವಣಗೆರೆ : ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಫಲಾನುಭವಿಯ ಎಲ್ಲಾ ರೈತರಿಗೆ ಫೆ. 24 ರೊಳಗೆ ಕಿಸಾನ್ ಕ್ರೆಡಿಟ್ ಕಾರ್ಡ್ ತಲುಪಿಸುವ ಗುರಿ ಹೊಂದಲಾಗಿದ್ದು, ಎಲ್ಲಾ ಬ್ಯಾಂಕ್ ಗಳಲ್ಲಿ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ಪಡೆದುಕೊಳ್ಳಬಹುದೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ಕುರಿತು ಮಾಹಿತಿ ನೀಡಿದ ಅವರು, ದೇಶದ ಎಲ್ಲಾ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡಿನ (ಬೆಳೆಸಾಲ) ಸೌಲಭ್ಯ ತಲುಪಿಸುವ ಉದ್ದೇಶದಿಂದ 2019 ರ ಫೆಬ್ರವರಿಯಲ್ಲಿ ಭಾರತ ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ಅಭಿಯಾನವನ್ನು ಜಾರಿಗೆ ತಂದಿರುತ್ತದೆ. ಆದರೆ ಅನೇಕ ರೈತರು ಈ ಸೌಲಭ್ಯವನ್ನು ಪಡೆಯದ ಕಾರಣ ಫೆ.24 ರೊಳಗೆ ಈ ಸೌಲಭ್ಯವನ್ನು ಒದಗಿಸಲು ಇಂದಿನಿಂದಲೇ ಅಭಿಯಾನ ಕೈಗೊಳ್ಳಲಾಗಿದೆ. ಫೆ.24 ರಂದು ಪಿ.ಎಂ.ಕಿಸಾನ್ ಯೋಜನೆಯ ವರ್ಷಾಚರಣೆಯಾಗಿದ್ದು, ಆ ದಿನಾಂಕದೊಳಗೆ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದರು.
ದಾವಣಗೆರೆ ಜಿಲ್ಲೆಯಲ್ಲಿ ಪಿ.ಎಂ.ಕಿಸಾನ್ ಯೋಜನೆಯಡಿ ಒಟ್ಟು 1,41,278 ಫಲಾನುಭವಿಗಳಿದ್ದು ಇವರೆಲ್ಲರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ತಲುಪಿಸುವ ಅಭಿಯಾನ ಇದಾಗಿದೆ. ರೈತರು ಹತ್ತಿರದ ಬ್ಯಾಂಕ್ ಶಾಖೆಗಳಲ್ಲಿ ಅವಶ್ಯಕ ದಾಖಲೆಗಳನ್ನು ಒದಗಿಸಿ ಪಡೆದುಕೊಳ್ಳಬೇಕು. ಈಗಾಗಲೇ ಎಲ್ಲ ಬ್ಯಾಂಕ್‍ಗಳಿಗೆ ಈ ಸೌಲಭ್ಯ ಒದಗಿಸುವಂತೆ ನಿರ್ದೇಶನ ನೀಡಲಾಗಿದೆ. ಲೀಡ್ ಬ್ಯಾಂಕ್, ಗ್ರಾಮೀಣ ಬ್ಯಾಂಕ್ ಹಾಗೂ ನಬಾರ್ಡ್ ಬ್ಯಾಂಕ್‍ಗಳ ಮ್ಯಾನೇಜರ್‍ಗಳ ಮಾರ್ಗದರ್ಶನದಲ್ಲಿ ಈ ಕಾರ್ಯ ಯಶಸ್ವಿಯಾಗಿ ನಡೆಯಲಿದೆ ಎಂದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಸುಶೃತ ಡಿ.ಶಾಸ್ತ್ರಿ ಮಾತನಾಡಿ ಕಿಸಾನ್ ಕ್ರೆಡಿಟ್ ಕಾರ್ಡ್‍ನಡಿ ಜಿಲ್ಲೆಯಲ್ಲಿ 1,47,447 ರೈತರಿಗೆ ರೂ. 116.64 ಕೋಟಿ ಸಾಲ ಸೌಲಭ್ಯ ನೀಡಲಾಗಿದೆ. ಆದರೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೋಂದಣಿಯಾಗಿರುವ 1,42,278 ರೈತರ ಪೈಕಿ ಬಹುತೇಕ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ಪಡೆದಿಲ್ಲ. ಆದ್ದರಿಂದ ಈ ಅಭಿಯಾನದಲ್ಲಿ ಮೊದಲನೆಯದಾಗಿ ಕಿಸಾನ್ ಯೋಜನೆಯಡಿ ನೊಂದಾಯಿತರಾದ 1,42,278 ರೈತರಿಗೆ ಕ್ರೆಡಿಟ್ ಕಾರ್ಡ್ ಸೌಲಭ್ಯ ಪಡೆಯಬೇಕು ಎಂದರು.
ನಬಾರ್ಡ್ ಬ್ಯಾಂಕಿನ ಎಡಿಎಂ ವಿ.ರವೀಂದ್ರ ಮಾತನಾಡಿ, ಈವರೆಗೆ ದೇಶದಲ್ಲಿ ಈ ಯೋಜನೆಯಡಿ 9.22 ಕೋಟಿ ಕುಟುಂಬಗಳು ಹೆಸರು ನೋಂದಾಯಿಸಿ ದೇಶಾದ್ಯಂತ 6.67 ಕೋಟಿ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ಪಡೆದಿದ್ದಾರೆ. ದೇಶಾದ್ಯಂತ 2.47 ಕೋಟಿ ರೈತರು ಈವರೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ಹೊಂದಿಲ್ಲ. ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆಯಲ್ಲಿ ಹೆಸರು ನೋಂದಾಯಿಸಲ್ಪಟ್ಟು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯದೇ ಇರುವವರು ಫೆ.24 ರೊಳಗೆ ಜಿಲ್ಲೆಯ ಎಲ್ಲಾ ಬ್ಯಾಂಕಿನ ಶಾಖಾ ವ್ಯವಸ್ಥಾಪಕರು ಪಿ.ಎಂ.ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ನಿಯಮಾನುಸಾರ ಆದ್ಯತೆ ಮೇರೆಗೆ ಬೆಳೆಸಾಲ (ಕೆಸಿಸಿ) ವಿತರಿಸಲು ಕೇಂದ್ರ ಸರ್ಕಾರದ ನಿರ್ದೇಶನದಂತೆ ಫೆ.24 ರೊಳಗೆ ಕ್ರೆಡಿಟ್ ಕಾರ್ಡ್ ನೀಡಲು ಸೂಚಿಸಲಾಗಿದೆ.
ನಮ್ಮ ಜಿಲ್ಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್, ಗ್ರಾಮೀಣ ಬ್ಯಾಂಕುಗಳು ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳಿಂದ 2019 ರ ಡಿಸೆಂಬರ್ 31 ರವರೆಗೆ ಬೆಳೆ ಸಾಲ ಚಾಲ್ತಿಯಲ್ಲಿರುವ 1,26,012 ರೈತರಿದ್ದು ಇಲ್ಲಿಯವರೆಗೆ 1,41,278 ರೈತರು ಮಾತ್ರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಸಹಾಯಧನಕ್ಕೆ ಅರ್ಜಿ ಸಲ್ಲಿಸಿರುತ್ತಾರೆ. ಉಳಿದ ರೈತರು ಇದರ ಪ್ರಯೋಜನ ಪಡೆಯಬೇಕೆಂದು ಹಾಗೂ ಈ ರೈತರು ಕಿಸಾನ್ ಕಾರ್ಡ್ ಸೌಲಭ್ಯ ಪಡೆಯಬೇಕೆಂದರು