ಡಿವಿಜಿ ಸುದ್ದಿ, ದಾವಣಗೆರೆ: ರಾಷ್ಟ್ರಾದ್ಯಂತ ಪ್ರತಿ ಮೂರು ತಿಂಗಳಿಗೆ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು ಇಲ್ಲಿ ರಾಜೀ ಸಂಧಾನ ಮೂಲಕ ಎಲ್ಲಾ ಪ್ರಕರಣ ಶ್ರೀಘ್ರ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ವೈ.ಬಸಾಪುರ್ ತಿಳಿಸಿದರು.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ರಾಷ್ಟ್ರಾದ್ಯಂತ ತ್ರೈಮಾಸಿಕವಾಗಿ ಆಯೋಜಿಸಲಾಗಿರುವ ರಾಷ್ಟ್ರೀಯ ಲೋಕ ಅದಾಲತ್ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಕಳೆದ ಸಾಲಿನಲ್ಲಿ ಲೋಕ ಅದಾಲತ್ ಪ್ರತಿ ತಿಂಗಳು ನಡೆಯುತ್ತಿತ್ತು. 2020 ನೇ ಸಾಲಿನಲ್ಲಿ ಪ್ರತಿ ಮೂರು ತಿಂಗಳಿಗೆ ಒಮ್ಮೆ ರಾಷ್ಟ್ರಾದ್ಯಂತ ನಡೆಯುವುದು. ಫೆಬ್ರವರಿ 8, ಏಪ್ರಿಲ್ 11, ಜುಲೈ 11, ಸೆಪ್ಟೆಂಬರ್ 12 ಮತ್ತು ಡಿಸೆಂಬರ್ 12 ಸೇರಿದಂತೆ ಒಟ್ಟು ಐದು ಬಾರಿ ಲೋಕ ಅದಾಲತ್ ನಡೆಯಲಿದೆ.
ರಾಜೀ ಆಗುವುದರಿಂದ ಕಕ್ಷಿದಾರ ಹಾಗೂ ನ್ಯಾಯಾಲಯದ ಸಮಯ ಉಳಿತಾಯ ಆಗುತ್ತದೆ. ಕಕ್ಷಿದಾರರಿಗೆ ಹಣವೂ ಉಳಿತಾಯ ಆಗುತ್ತದೆ. ಈ ಪ್ರಕರಣದಲ್ಲಿ ಅಪೀಲು ಹೋಗಲು ಅವಕಾಶವಿರುವುದಿಲ್ಲ. ಜೊತೆಗೆ ಇಬ್ಬರ ನಡುವೆ ಇದ್ದ ದ್ವೇಷ ದೂರವಾಗಿ ಸಾಮರಸ್ಯ ಸಾಧ್ಯವಾಗುತ್ತದೆ ಎಂದರು.
ಎರಡನೇ ಶನಿವಾರವಾರ ಬೇರೆ ಯಾವುದೇ ಕಲಾಪಗಳು ನಡೆಯದೇ ಸಂಪೂರ್ಣವಾಗಿ ಲೋಕ ಅದಾಲತ್ ಪ್ರಕರಣಗಳ ರಾಜೀ ಸಂಧಾನ ನಡೆಯಲಿದೆ. ಜಿಲ್ಲಾ ಮಟ್ಟದಲ್ಲಿ ನ್ಯಾಯಾಧೀಶರು ವಕೀಲರ ಸಹಕಾರದೊಂದಿಗೆ ಕಲಾಪ ನಡೆಸುವರು. ಇದೇ ರೀತಿ ತಾಲ್ಲೂಕು ಮಟ್ಟದಲ್ಲೂ ಅದಾಲತ್ ನಡೆಯಲಿದ್ದು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಒಂದು ಸಾವಿರ ಪ್ರಕರಣ ಇತ್ಯರ್ಥದ ಗುರಿ : ಫೆ.8 ರಂದು ನಡೆಯುವ ಲೋಕ ಅದಾಲತ್‍ನಲ್ಲಿ ರಾಜೀಯಾಗುವ 1 ಸಾವಿರ ಪ್ರಕರಣ ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ. 2019 ರ ಡಿಸೆಂಬರ್ ಅಂತ್ಯದವರೆಗೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಒಟ್ಟು 30,419 ಪ್ರಕರಣಗಳು ಬಾಕಿ ಇವೆ. ಈ ಪೈಕಿ 15,891 ಸಿವಿಲ್ ಮತ್ತು 14,528 ಕ್ರಿಮಿನಲ್ ಪ್ರಕರಣಗಳಿವೆ.
ಕಳೆದ ಡಿಸೆಂಬರ್‍ನಲ್ಲಿ ನಡೆದ ಲೋಕ ಅದಾಲತ್‍ಗೆ ಒಟ್ಟು 3,490 ರಾಜೀ ಆಗಬಲ್ಲ ಪ್ರಕರಣ ಗುರುತಿಸಿ ರೆಫರ್ ಮಾಡಲಾಗಿತ್ತು. ಇದರಲ್ಲಿ 678 ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಪಡಿಸಲಾಗಿದೆ. ಹಾಗೂ ಕಕ್ಷಿದಾರರಿಗೆ 7.34 ಕೋಟಿಯಷ್ಟು ಪರಿಹಾರ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್ ,ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರ್ಯದರ್ಶಿ ಪ್ರಭು ಎನ್.ಬಡಿಗೇರ್, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್.ಅರುಣ್‍ಕುಮಾರ್ ಭಾಗವಹಿಸಿದ್ದರು.



