Connect with us

Dvgsuddi Kannada | online news portal | Kannada news online

ದಾವಣಗೆರೆ: ಪಶು ಸಂಗೋಪನೆ ಇಲಾಖೆ ಯೋಜನೆಗಳು  ಜನರಿಗೆ ತಲುಪುವಂತಾಗಬೇಕು; ಸಚಿವ ಪ್ರಭು.ಬಿ.ಚವ್ಹಾಣ್

ದಾವಣಗೆರೆ

ದಾವಣಗೆರೆ: ಪಶು ಸಂಗೋಪನೆ ಇಲಾಖೆ ಯೋಜನೆಗಳು  ಜನರಿಗೆ ತಲುಪುವಂತಾಗಬೇಕು; ಸಚಿವ ಪ್ರಭು.ಬಿ.ಚವ್ಹಾಣ್

ಡಿವಿಜಿ ಸುದ್ದಿ, ದಾವಣಗೆರೆ:   ಸರ್ಕಾರದ ಪ್ರತಿ ಯೋಜನೆಯು ಎಲ್ಲ ಅರ್ಹರಿಗೆ ತಲುಪಿಸುವ ಕೆಲಸ ಮಾಡಬೇಕು ಮತ್ತು ಗ್ರಾಮೀಣ ಜನರಿಂದ ಒಂದೂ ದೂರು ಬಾರದಂತೆ ಪಶುಸಂಗೋಪನೆ ಅಧಿಕಾರಿಗಳು ಕೆಲಸ ಮಾಡಬೇಕೆಂದು ಪಶು ಸಂಗೋಪನಾ ಸಚಿವ ಪ್ರಭು.ಬಿ ಚವ್ಹಾಣ್‍ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಪಶುಸಂಗೋಪನೆ ಮತ್ತು ವಕ್ಫ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಗೋಮಾತಾ ಮೇರಿ ಮಾತಾ : ಗೋಮಾತೆ ನನ್ನ ಮಾತೆ. ಗೋವನ್ನು ರಕ್ಷಿಸುವ ಕೆಲಸ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಗೊಶಾಲೆಗಳನ್ನು ಉತ್ತಮವಾಗಿ ನಿರ್ವಹಿಸಿಕೊಂಡು ಹೋಗಬೇಕು. ಸರ್ಕಾರ ಗೋಶಾಲೆಗಳಿಗೆ ಅನುದಾನ ನೀಡುತ್ತಿದ್ದು, ಅಗತ್ಯ ಸೌಲಭ್ಯ ಬೇಕಿದ್ದಲ್ಲಿ ಅಧಿಕಾರಿಗಳು ಕೇಳಬೇಕು. ಗೋವುಗಳು ಕಸಾಯಿಖಾನೆಗಳಿಗೆ ಹೋಗದಂತೆ ರಕ್ಷಿಸುವಲ್ಲಿ ಕ್ರಮ ವಹಿಸಬೇಕೆಂದರು.

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರತಿ ತಾಲ್ಲೂಕುಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ಮಾಡಬೇಕು. ನಾನೂ ಅನೇಕ ಕಡೆ ದಿಢೀರ್ ಭೇಟಿ ನೀಡಿ ಪರಿಶೀಲಿಸುತ್ತೇನೆ. ಲೋಪ ಕಂಡು ಬಂದರೆ ಅಧಿಕಾರಿ/ನೌಕರರನ್ನು ವಜಾಗೊಳಿಸಲು ಹಿಂಜರಿಯುವುದಿಲ್ಲ. ಅದೇ ರೀತಿಯಲ್ಲಿ ಉಪನಿರ್ದೇಶಕರು ತಾಲ್ಲೂಕುಗಳ ಭೇಟಿ ನೀಡಿ ಕ್ರಮ ವಹಿಸಬೇಕು. ಹಾಗೂ ತಾಲ್ಲೂಕು ಸಹಾಯಕ ನಿರ್ದೇಶಕರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಭೇಟಿ ನೀಡಬೇಕು ಎಂದು ಸೂಚಿಸಿದರು.

ಪಶುವೈದ್ಯರು ಆಸ್ಪತ್ರೆಗಳಿಗೆ/ಹಳ್ಳಿಗಳಿಗೆ ಬರುತ್ತಿಲ್ಲವೆಂದು ಗ್ರಾಮಸ್ಥರಿಂದ ನನಗೇ ಖುದ್ದು ಅನೇಕ ಕರೆಗಳು ಬಂದಿವೆ. ಈ ರೀತಿ ಮುಂದೆ ಆಗದಂತೆ ಕ್ರಮ ಕೈಗೊಳ್ಳಬೇಕು. ವೈದ್ಯರ ಮತ್ತು ಸಿಬ್ಬಂದಿಗಳ ಕೊರತೆಯನ್ನು ನೀಗಿಸಲು ಆದಷ್ಟು ಬೇಗ ನೇಮಕಾತಿ ಮಾಡಿಕೊಳ್ಳಲಾಗುವುದು.

ಪಶುಭಾಗ್ಯ, ಅಮೃತ್, ಪಶು ಸಂಜೀವಿನಿ, ಕುರಿ ಮತ್ತು ಉಣ್ಣೆ ಯೋಜನೆ ಸೇರಿದಂತೆ ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸಬೇಕು. ಜನರಲ್ಲಿ ಈ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಸರ್ಕಾರದ ಹಂತದಲ್ಲಿ ಏನಾದರೂ ಸೌಲಭ್ಯ, ಸೌಕರ್ಯಗಳು ಬೇಕಿದ್ದಲ್ಲಿ ಅಥವಾ ಕೆಲಸಗಳು ಆಗಬೇಕಿದ್ದಲ್ಲಿ ಅಧಿಕಾರಿಗಳು ನೇರವಾಗಿ ನನಗೆ ಕರೆ ಮಾಡಿ ತಿಳಿಸಿ ಕೆಲಸ ಮಾಡಿಸಿಕೊಳ್ಳುವ ಮೂಲಕ ಜನರಿಗೆ ಸಹಕಾರಿಯಾಗಬೇಕು. ಹಾಗೂ ಉಪ ನಿರ್ದೇಶಕರು ಸೇರಿದಂತೆ ಅಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳಿಗೆ ತಾವು ಪ್ರತಿದಿನ ಕೈಗೊಂಡ ಕ್ಷೇತ್ರ ಭೇಟಿ ಇತರೆ ಕಾರ್ಯ ಚಟುವಟಿಕೆ ಬಗ್ಗೆ ವಾಟ್ಸಾಪ್ ಮೂಲಕ ಫೋಟೊ ಹಾಕಬೇಕು ಎಂದ ಅವರು ಪಶು ಆಸ್ಪತ್ರೆಯ ಸುತ್ತಮುತ್ತ ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ಸಸಿಗಳನ್ನು ನೆಟ್ಟು ನೀರು ಹಾಕಬೇಕು ಎಂದರು.

ಪಶುಪಾಲನಾ ಮತ್ತು ಪಶುವೈದ್ಯಸೇವಾ ಇಲಾಖೆಯ ಉಪನಿರ್ದೇಶಕ ಡಾ.ಭಾಸ್ಕರ್ ನಾಯಕ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 04 ಗೋಶಾಲೆಗಳಿದ್ದು ಸರ್ಕಾರದಿಂದ ಸಹಾಯಧನ ಪಡೆಯುತ್ತಿದೆ. ಲಾಕ್‍ಡೌನ್ ವೇಳೆ 30 ದಿನಗಳ ಕಾಲ ಸುಮಾರು 50 ಸಾವಿರ ಲೀಟರ್ ಹಾಲನ್ನು ಬಡವರಿಗೆ, ವಲಸೆ ಕಾರ್ಮಿಕರಿಗೆ ಉಚಿತವಾಗಿ ಕೆಎಂಎಫ್ ವತಿಯಿಂದ ನೀಡಲಾಗಿದೆ. ಇಲಾಖೆ ವತಿಯಿಂದ ರೂ.3 ಲಕ್ಷ ಮೊತ್ತದ 300 ಆಹಾರದ ಕಿಟ್‍ಗಳನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಬರದ ವೇಳೆಯೂ ಉತ್ತಮ ಹಾಲಿನ ಉತ್ಪಾದನೆಯಾಗುತ್ತಿದ್ದು ಸುಮಾರು 6 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಔಷಧಿಗಳ ಮತ್ತು ಮೇವು ಕೊರತೆ ಇಲ್ಲ.

ಡಿ ದರ್ಜೆಯ ಒಟ್ಟು 237 ಮಂಜೂರಾದ ಹುದ್ದೆಗಳ ಪೈಕಿ 63 ಮಾತ್ರ ಭರ್ತಿ ಇದ್ದು 174 ಹುದ್ದೆಗಳು ಖಾಲಿ ಇವೆ. ಈ ಪೈಕಿ 86 ಹುದ್ದೆಗಳು ಹೊರಗುತ್ತಿಗೆ ಮೇರೆಗೆ ಕಾರ್ಯ ನಿರ್ವಹಿಸುತ್ತಿದ್ದು 20 ಸಂಸ್ಥೆಗಳಲ್ಲಿ ಒಬ್ಬ ಡಿ ಗ್ರೂಪ್ ಸಿಬ್ಬಂದಿ ಕೂಡ ಇಲ್ಲದೇ ದೈನಂದಿನ ಕೆಲಸಗಳಿಗೆ ತೊಂದರೆ ಉಂಟಾಗಿದೆ ಎಂದರು.

2018-19 ನೇ ಸಾಲಿನಲ್ಲಿ ಉಚಿತ ಜಾನುವಾರು ವಿಮೆ ಯೋಜನೆಯಡಿ ಒಟ್ಟು 90.27 ಲಕ್ಷ ಅನುದಾನದಲ್ಲಿ ಪ.ಜಾ ಮತ್ತು ಪ.ಪಂ ವರ್ಗದ ಒಟ್ಟು 2763 ಫಲಾನುಭವಿಗಳ 3009 ರಾಸುಗಳಿಗೆ ವಿಮೆ ಮಾಡಿಸಲಾಗಿದೆ. 2019-20 ನೇ ಸಾಲಿನಲ್ಲಿ ಒಟ್ಟು 9.69 ಲಕ್ಷ ಅನುದಾನದಲ್ಲಿ ಈವರೆಗೆ 686 ಫಲಾನುಭವಿಗಳ 851 ರಾಸುಗಳಿಗೆ ವಿಮೆ ಮಾಡಿಸಲಾಗಿದೆ. 2019-20 ನೇ ಸಾಲಿನ ಪಶುಭಾಗ್ಯ ಯೋಜನೆಯಡಿ ಒಟ್ಟು 289 ಫಲಾನುಭವಿಗಳಿಗೆ ರೂ.71.065 ಲಕ್ಷ ಆರ್ಥಿಕ ಸಹಾಯ ಒದಗಿಸಲಾಗಿದ್ದು ಶೇ.100 ಪ್ರಗತಿ ಸಾಧಿಸಲಾಗಿದೆ.

ಕುರಿ ಮತ್ತು ಮೇಕೆ ಮರಣ ಪರಿಹಾರಕ್ಕೆ ಸಂಬಂಧಿಸಿದಂತೆ 2017-18 ಮತ್ತು 2018-2019 ಕ್ಕೆ ಸಂಬಂಧಿಸಿದಂತೆ ರೈತರಿಗೆ ಎಕ್ಸ್‍ಗ್ರೇಷಿಯಾ ಪರಿಹಾರ ಮೊತ್ತ ಕೊಡುವುದು ಬಾಕಿ ಇದ್ದು, ರೈತರು ಒತ್ತಾಯಿಸುತ್ತಿದ್ದಾರೆಂದರು.

ಜಿಲ್ಲೆಯಲ್ಲಿ 38 ಪೌಲ್ಟ್ರಿ ಫಾರ್ಮ್‍ಗಳು ಮತ್ತು 300 ಬಾಯ್ಲರ್‍ಗಳಿದ್ದು 28 ಲಕ್ಷ ಕೋಳಿಗಳಿವೆ. 24 ಲಕ್ಷ ಮೊಟ್ಟೆ ಉತ್ಪಾದನೆಯಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಚಿವರು ಪ್ರತಿಕ್ರಿಯಿಸಿ, ಎಲ್ಲ ಯೋಜನೆಗಳು ಜನರಿಗೆ ತಲುಪಬೇಕು. ಸಮಸ್ಯೆಗಳಿದ್ದಲ್ಲಿ ನನ್ನ ಬಳಿ ಹೇಳಿ ಪರಿಹರಿಸಿಕೊಳ್ಳಬೇಕು. ಜನರಿಂದ ಯಾವುದೇ ದೂರುಗಳು ಬಾರದಂತೆ ಅಧಿಕಾರಿ/ವೈದ್ಯರು ಕರ್ತವ್ಯ ನಿರ್ವಹಿಸಬೇಕು. ನಿಯೋಜನೆ ಮೇಲೆ ಅನ್ಯ ಇಲಾಖೆಗಳಿಗೆ ತೆರಳಿರುವವರನ್ನು ಮಾತೃ ಇಲಾಖೆಗೆ ಕರಿಯಿಸಬೇಕು. ಪಶು ವೈದ್ಯರ ಹುದ್ದೆ ಖಾಲಿ ಇರುವೆಡೆ ಇನ್‍ಟನ್ರ್ಸ್‍ಗಳನ್ನು ನಿಯೋಜಿಸಬೇಕು. ಇಲಾಖೆಯಡಿ ಬರುವ ವಿಜ್ಞಾನಿಗಳಿಂದ ಉತ್ತಮ ಸೇವೆ ಪಡೆಯಬೇಕು ಎಂದರು.

ಸಭೆಗೂ ಮುನ್ನ ಸಚಿವರು ಪಶುಪಾಲನಾ ಇಲಾಖೆಯ ಕಚೇರಿಯನ್ನು ಮತ್ತು ಪಶವೈದ್ಯಾಲಯ ವೀಕ್ಷಿಸಿದರು. ಪಶುಪಾಲನಾ ಇಲಾಖೆ ಆವರಣದಲ್ಲಿ ಸಸಿ ನೆಟ್ಟು, ನೀರು ಹಾಕಿದರು.ಸಭೆಯಲ್ಲಿ ಕುರಿ ಮತ್ತು ಉಣ್ಣೆ ಯೋಜನಾಧಿಕಾರಿ ಡಾ.ಚಂದ್ರಶೇಖರ್ ಸುಂಕದ್, ತಾಲ್ಲೂಕು ಪಶುಪಾಲನಾ ಇಲಾಖೆಯ ಅಧಿಕಾರಿಗಳಾದ ಡಾ. ವೀರೇಶ್, ಡಾ.ದೇವೇಂದ್ರಪ್ಪ, ಡಾ.ಲಿಂಗರಾಜ್, ವಿಜ್ಞಾನಿ ಡಾ.ನಾಗರಾಜ್, ಡಾ.ಶಿವಕುಮಾರ್, ಡಾ.ಸತೀಶ್, ವಕ್ಫ್ ಇನ್ಸ್‍ಪೆಕ್ಟರ್, ಇತರೆ ಅಧಿಕಾರಿಗಳು ಇದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top