ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲಾಡಳಿತ, ಮಹಾನಗರಪಾಲಿಕೆ ವತಿಯಿಂದ ಕೊರೊನಾ ಸೋಂಕು ತಡೆಗಟ್ಟುವ ಹಿನ್ನೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಇಂದು ಜಿಲ್ಲೆಯಲ್ಲಿ ಮಾಸ್ಕ್ ದಿನಾಚರಣೆ ಅಭಿಯಾನ ಆಯೋಜಿಸಲಾಗಿತ್ತು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಕೊರೊನಾ ನಿಯಂತ್ರಣಕ್ಕಾಗಿ ಉತ್ತಮ ಸಂದೇಶ ರವಾನೆ ಮಾಡುವ ಕೆಲಸ ಇದಾಗಿದೆ. ಮಹಾನಗರಪಾಲಿಕೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗೃತಿ ಅಭಿಯಾನ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಸಾರ್ವಜನಿಕರು ತಮ್ಮನ್ನು ತಾವು ರಕ್ಷಣೆ ಮಾಡಿಕೊಂಡು ಮಾಸ್ಕ್ ದಿನಾಚರಣೆಗೆ ಎಲ್ಲರೂ ಕೈ ಜೋಡಿಸಬೇಕು ಎಂದರು.
ಜನರು ಆರ್ಥಿಕ ಚಟುವಟಿಕೆಯಲ್ಲಿ ತೊಡಗಬೇಕು. ಆರ್ಥಿಕ ಚಟುವಟಿಕೆ, ವ್ಯಾಪಾರ, ವ್ಯವಹಾರ ಯಾವುದೂ ನಿಲ್ಲಬಾರದು. ಅದರೊಂದಿಗೆ ತಮ್ಮನ್ನು ತಾವು ರಕ್ಷಣೆ ಮಾಡಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಂಡು ಮುಂದುವರಿಯಬೇಕು. ಮಾಸ್ಕ್ ಹಾಕಿಕೊಳ್ಳದಿರುವವರಿಗೆ ನಗರ ವ್ಯಾಪ್ತಿಯಲ್ಲಿ ರೂ. 200 ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ. 100 ದಂಡ ಹಾಕಲಾಗುವುದು.
ಮೇಯರ್ ಈ ಜಾಗೃತಿಗೆ ಇಂದು ಚಾಲನೆ ನೀಡಿದ್ದಾರೆ. ಮೇಯರ್, ಎಸ್‍ಪಿ ಸೇರಿದಂತೆ ಎಲ್ಲ ಕಾರ್ಪೂರೇಟರ್ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಎಲ್ಲ ಕಾರ್ಪೂರೇಟರ್ ತಮ್ಮ ತಮ್ಮ ವಾರ್ಡ್‍ಗಳಲ್ಲಿ ಜಾಗೃತಿ ಮೂಡಿಸಿ ಜನರಿಗೆ ಮಾಸ್ಕ್‍ನ ಮಹತ್ವ ತಿಳಿಸಿಕೊಡಬೇಕು ಎಂದು ಮನವಿ ಮಾಡಿದರು.
ಮಾಸ್ಕ್ ಇಲ್ಲದೆ ಯಾರೊಬ್ಬರೂ ಹೊರಗೆ ಬರಬಾರದು. ಇವತ್ತು ಮಾಸ್ಕ್ ಹಾಕಿಕೊಳ್ಳದೇ ಬಂದ ಕಾನ್‍ಸ್ಟೇಬಲ್ ಅವರಿಗೂ ಕೂಡ ದಂಡ ಹಾಕಲಾಗಿದೆ. ನಗರದ ಪ್ರದೇಶದಲ್ಲಿ ಮಾತ್ರವಲ್ಲದೆ ಎಲ್ಲ ಗ್ರಾಮೀಣ ಭಾಗದಲ್ಲಿಯೂ ಕೂಡ ಮಾಸ್ಕ್ ದಿನಾಚರಣೆ ನಡೆಯುತ್ತಿದೆ. ಎಲ್ಲಾ ಗ್ರಾಮ ಪಂಚಾಯಿತಿ ಪಿಡಿಓ ಸೇರಿದಂತೆ ಟಾಸ್ಕ್‍ಫೋರ್ಸ್ ಅವರು ಈ ಕೆಲಸ ಕೈಗೊಂಡಿದ್ದಾರೆ ಎಂದರು.

ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ, ಸರ್ಕಾರದ ಸೂಚನೆ ಇದ್ದರೂ ಕೂಡ ಸಾರ್ವಜನಿಕರು ಎಚ್ಚರಿಕೆ ವಹಿಸದಿರುವುದು ವಿಷಾದದ ಸಂಗತಿಯಾಗಿದೆ. ಯಾಕೆಂದರೆ ಕೊರೊನಾ ಕುರಿತು ಮಾಧ್ಯಮ ಗಳಲ್ಲಿ ಸಾಕಷ್ಟು ಮಾಹಿತಿ ಇದ್ದರು ಸಹ ತುಂಬಾ ಅಜಾಗರೂಕತ ವರ್ತನೆ ತೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಲಿಕೆ ವತಿಯಿಂದ ಮೇಯರ್, ಡಿಸಿ ಹಾಗೂ ಕಾರ್ಪೂರೇಟರ್‍ಗಳು ಎಲ್ಲರೂ ಸೇರಿ ಮಾಸ್ಕ್ ದಿನಾಚರಣೆಗೆ ಚಾಲನೆ ನೀಡಲಾಗಿದೆ ಎಂದರು.
ಮಾಸ್ಕ್ ಹಾಕದ ಪೊಲೀಸ್ ಹಾಗೂ ಸಾರ್ವಜನಿಕರಿಗೂ ಸೇರಿದಂತೆ 5 ಪ್ರಕರಣಗಳಿಗೆ ದಂಡ ಹಾಕಲಾಗಿದೆ. ಈ ಕುರಿತು ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದಲ್ಲಿ ದಂಡ ಹಾಕಲಾಗುವುದು. ನಮ್ಮ ಉದ್ದೇಶ ಹಾಗೂ ಕಾಳಜಿ ಜನರ ಸುರಕ್ಷತೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಮಾಸ್ಕ್ ಹಾಕಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರು ಅಜಾಗರೂಕತೆ ವಹಿಸಿದರೆ ಕ್ರಿಮಿನಲ್ ಕೇಸ್ ದಾಖಲಿಸುವುದರೊಂದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಾಸ್ಕ್ ಧರಿಸದ ಕಾನ್‍ಸ್ಟೇಬಲ್‍ಗೆ ದಂಡ
ಬಡಾವಣೆ ಪೊಲೀಸ್ ಠಾಣೆಯ ಕಾನ್‍ಸ್ಟೇಬಲ್ ಒಬ್ಬರು ಕರ್ತವ್ಯ ಮೇಲಿದ್ದಾಗ ಮಾಸ್ಕ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಬರುವಾಗ ಅವರನ್ನು ಸ್ವತಃ ಜಿಲ್ಲಾಧಿಕಾರಿ ಮತ್ತು ಎಸ್‍ಪಿ ಅವರು ಹಳೇ ಬಸ್‍ನಿಲ್ದಾಣದ ಸಮೀಪ ತಡೆ ಹಿಡಿದು ನಿಲ್ಲಿಸಿ ಮಾಸ್ಕ್ ನೀಡಿ, ರೂ. 200 ದಂಡ ವಿಧಿಸಿದರು.ಈ ವೇಳೆ ಎಸ್‍ಪಿ ಕಾನೂನು ಕಾಪಾಡುವವರೇ ಕಾನೂನು ಉಲ್ಲಂಘಿಸುವುದು ಸರಿಯಲ್ಲ ಎಂದು ಪೊಲೀಸ್ ಕಾನ್‍ಸ್ಟೇಬಲ್‍ಗೆ ಎಚ್ಚರಿಸಿದರು.
ಅಭಿಯಾನದಲ್ಲಿ ಜಿಲ್ಲಾಧಿಕಾರಿಗಳು, ಎಸ್‍ಪಿ ಹಾಗೂ ಮಹಾನಗರಪಾಲಿಕೆಯ ಸದಸ್ಯರು ಕಾಲ್ನಡಿಗೆಯಲ್ಲಿ ಜಾಥಾ ಕೈಗೊಂಡು ನಗರದ ಅಶೋಕ್ ರಸ್ತೆ ಹಾಗೂ ಹಳೇ ಬಸ್ಟ್ಯಾಂಡ್ ಹಾಗೂ ಪಿಬಿ ರಸ್ತೆಗಳಲ್ಲ್ಲಿ ಮಾಸ್ಕ್ ಇಲ್ಲದೇ ಸಂಚರಿಸುತ್ತಿದ್ದ ಸಾರ್ವಜನಿಕರಿಗೆ ಮಾಸ್ಕ್ ವಿತರಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.
ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಮಹಾನಗರಪಾಲಿಕೆ ಎಲ್ಲ ಸದಸ್ಯರು ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಗೂ ಇತರ ಇಲಾಖಾ ಅಧಿಕಾರಿಗಳು ಹಾಜರಿದ್ದರು.