ಡಿವಿಜಿ ಸುದ್ದಿ, ದಾವಣಗೆರೆ : ನಗರದಲ್ಲಿ ಸ್ವಚ್ಛತೆ ಕಾಪಡಲು ಪೌರಕಾರ್ಮಿಕರು ಸರಿಯಾಗಿ ಕೆಲಸ ನಿರ್ವಹಿಸಬೇಕು. ಈ ಬಗ್ಗೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಕಾರ್ಯ ವಹಿಸಬೇಕು ಎಂದು ಮಹಾ ನಗರ ಪಾಲಿಕೆ ಮಹಾಪೌರ ಬಿ.ಜಿ.ಅಜಯ್ ಕುಮಾರ್ ಸೂಚನೆ ನೀಡಿದರು.
ಮಹಾನಗರಪಾಲಿಕೆಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 45 ವಾರ್ಡ್‍ಗಳಲ್ಲೂ ಸಹ ಬೆಳಿಗ್ಗೆ 6 ರಿಂದ 11 ರವೆರೆಗೆ ಹಾಗೂ ಮಧ್ಯಾಹ್ನ 2 ರಿಂದ 5 ರವರೆಗೆ ಪೌರ ಕಾರ್ಮಿಕರು ಕೆಲಸ ನಿರ್ವಹಿಸಲು ಆದೇಶ ಹೊರಡಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
ವಜಾ ಶತಸಿದ್ಧ: ಪೌರಕಾರ್ಮಿಕರು ಕೆಲಸಕ್ಕೆ ಬಾರದೆ ಸಂಬಳ ತೆಗೆದುಕೊಳ್ಳುತ್ತಿರುವ ಹಾಗೂ ಧಮ್ಕಿ ಹಾಕಿ ಹಾಜರಿ ಹಾಕಿಸಿಕೊಳ್ಳುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ತರಹದ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಕಂಡು ಬಂದರೆ ವಜಾ ಮಾಡುವುದು ಶತಸಿದ್ಧ. ಈ ಹಿನ್ನೆಲೆಯಲ್ಲಿ ನಗರವನ್ನು ಸ್ವಚ್ಛವಾಗಿಡಲು ಪೌರ ಕಾರ್ಮಿಕರಿಗೆ ಸಮಯ ನಿಗದಿ ಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಮೈಸೂರಿನಂತೆ ದಾವಣಗೆರೆ ನರವನ್ನು ನಂಬರ್ ಒನ್ ಸ್ವಚ್ಛ ನಗರವಾಗಿಸಲು ಎಲ್ಲರೂ ಸಹಕರಿಸಬೇಕ. ಮುಂದಿನ ದಿನಗಳಲ್ಲಿ ನಗರದ ಸ್ವಚ್ಛತೆಯ ಸಲುವಾಗಿ ವಿಶೇಷ ಸಭೆ ನಡೆಸೋಣ ಎಂದು ತಿಳಿಸಿದರು.
ಮಳಿಗೆ ಮರು ಹರಾಜಿಗೆ ಸೂಚನೆ: ಸರ್ಕಾರದ ನಿಯಮದಂತೆ ಅವಧಿ ಮುಗಿದಿರುವ ಮಳಿಗೆಗಳನ್ನು ಹಾಗು ಸುಸ್ಥಿತಿಯಲ್ಲಿರುವ ಮತ್ತು ದುರಸ್ತಿಯಲ್ಲಿರುವ ಮಳಿಗೆಗಳನ್ನು ಅಭಿವೃದ್ಧಿಗೊಳಿಸಿ ಮರು ಹರಾಜು ಮಾಡಲು ಸೂಚಿಸಿದರು.
ಪಾಲಿಕೆಯ ವಿರೋಧ ಪಕ್ಷದ ನಾಯಕ ಎ.ನಾಗರಾಜ ಮಾತನಾಡಿ, ಭೌಗೋಳಿಕವಾಗಿ ಹೆಚ್ಚುವರಿ ಪೌರಕಾರ್ಮಿಕರ ಹುದ್ದೆ ತುಂಬಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಈಗಾಗಲೇ 317 ಖಾಯಂ ಹಾಗೂ 200 ಗುತ್ತಿಗೆ ಪೌರ ಕಾರ್ಮಿಕರಿದ್ದಾರೆ. ಮೊದಲು ಇವರಿಂದ ಸರಿಯಾಗಿ ಕೆಲಸ ಮಾಡಿಸಿ ಬಳಿಕ ತೀರ್ಮಾನ ಕೈಗೊಂಡು ಹೊಸದಾಗಿ ಪ್ರಸ್ತಾವನೆ ಸಲ್ಲಿಸಿ ಎಂದು ತಿಳಿಸಿದರು.
ಸುಮಾರು 20 ವರ್ಷದಿಂದ ಮಳಿಗೆಗಳ ಮೂಲಕ ವ್ಯಾಪಾರಿಗಳು ಜೀವನ ಸಾಗಿಸಿಕೊಂಡು ಬಂದಿದ್ದಾರೆ. ಮರು ಹರಾಜು ಮಾಡುವ ಮೂಲಕ ಗೊಂದಲ ಸೃಷ್ಟಿಸೋದು ಬೇಡ. ಅವರಿಗೆ ಪುನಃ ಅವಕಾಶ ನೀಡೋಣ. ಆದರೆ ಬಾಡಿಗೆ ಕಟ್ಟದವರ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಲಿ ಎಂದರು.
ಶೇ. 20 ರಷ್ಟು ಬಾಡಿಗೆ ವಸೂಲಿ: ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್ ಮಾತನಾಡಿ, 2019-20 ನೇ ಸಾಲಿನಲ್ಲಿ ಪಾಲಿಕೆ ಮಳಿಗೆಯಿಂದ ಕೇವಲ ಶೇ. 20 ರಷ್ಟು ಬಾಡಿಗೆ ವಸೂಲಿಯಾಗಿದೆ. 2.14 ಕೋಟಿ ಬಾಡಿಗೆ ಬರುವುದು ಬಾಕಿ ಇದೆ. ಮಳಿಗೆ ಬಾಡಿಗೆದಾರರರು ಸರಿಯಾಗಿ ಬಾಡಿಗೆ ಕಟ್ಟದೆ ಪಾಲಿಕೆಗೆ ನಷ್ಟವಾಗಿದೆ. 505 ಮಳಿಗೆಗಳಿದ್ದು, ಅದರಲ್ಲಿ ಇದೀಗ 340 ಮಳಿಗೆಗಳ ಕರಾರು ಮುಗಿದಿದೆ. ಈ ಹಿನ್ನೆಲೆಯಲ್ಲಿ ಮರು ಹರಾಜು ಮಾಡುವ ಮೂಲಕ ಹೊಸಬರಿಗೆ ಅವಕಾಶ ನೀಡೋಣ ಎಂದರು
ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಮಾತನಾಡಿ, ಪೌರ ಕಾರ್ಮಿಕರಿಗಾಗಿ ಬಯೋಮೆಟ್ರಿಕ್ ಅಳವಡಿಸಲಾಗಿದೆ. ದಫೇದಾರ್ ಆಗಿರುವವರನ್ನು ಪೌರ ಕಾರ್ಮಿಕರನ್ನಾಗಿ ಕೆಲಸ ತೆಗೆದುಕೊಳ್ಳಲು ಸೂಚನೆ ನೀಡಲಾಗಿದ. ಕಂದಾಯ ವಂಚನೆ ಆಗುತ್ತಿರುವ ಬಗ್ಗೆ ಈ ವರ್ಷ ಕಟ್ಟುನಿಟ್ಟಿನ ನಿರ್ಧಾರ ತೆಗೆದುಕೊಳ್ಳುವ ಮೂಲಕ ಕ್ರಮ ವಹಿಸಲಾಗಿದೆ. ಕಳೆದ ವರ್ಷ 13 ಕೋಟಿ ಕಂದಾಯ ವಸೂಲಿ ಮಾಡಲಾಗಿತ್ತು. ಆದರೆ ಈ ಬಾರಿ ಕೊರೊನಾ ಸಂದರ್ಭದಲ್ಲಿಯೂ ಸಹ ಆಗಸ್ಟ್ ಮಾಹೆಯವರೆಗೆ 21.58 ಕೋಟಿ ಹಣ ಕಂದಾಯ ವಸೂಲಿ ಮಾಡಲಾಗಿದ್ದು, ಅಧಿಕಾರಿಗಳು ಉತ್ತಮವಾಗಿ ತಮ್ಮ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸಭೆಗೆ ತಿಳಿಸಿದರು.
ಮಹಾನಗರಪಾಲಿಕೆ ಸದಸ್ಯ ಲತೀಫ್ ಮಾತನಾಡಿ, ಪೌರಕಾರ್ಮಿಕರು ಸರಿಯಾಗಿ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ಪಾಲಿಕೆ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು. ಇಲ್ಲದಿದ್ದಲ್ಲಿ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದರು. ಈ ವೇಳೆ ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್ ಮಾತನಾಡಿ, ಈ ವಿಷಯವನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡು ಚರ್ಚೆ ನಡೆಸೋಣ ಎಂದರು.
ಶೆಟರ್ಸ್ ಕಿತ್ತು ಹೋಗಿವೆ. ಜೊತೆಗೆ ಕೊರೊನಾ ಹಿನ್ನೆಲೆಯಲ್ಲಿ ವ್ಯಾಪಾರ ಇಲ್ಲ ಹಾಗಾಗಿ ಈಗಿರುವವರಿಗೆ ಬಿಟ್ಟುಕೊಟ್ಟರೆ ಒಳ್ಳೆಯದು. ಸುಮ್ಮನೆ ಹರಾಜು ಮಾಡುವ ಮೂಲಕ ಗೊಂದಲಕ್ಕೆ ಎಡೆಮಾಡಿಕೊಡಬಾರದು ಎಂದ ಅವರು, ಕಂದಾಯ ವಂಚನೆಯಾಗುತ್ತಿದೆ. ಶ್ರೀಮಂತರು ಹಾಗೂ ಆರ್ಥಿಕವಾಗಿ ಸಬಲರಾಗಿದ್ದವರು ಕಂದಾಯ ಪಾವತಿಸುತ್ತಿಲ್ಲ ಎಂದರು.
ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ.ವೀರೇಶ್ ಮಾತನಾಡಿ, ಪ್ರಾಮಾಣಿಕವಾಗಿರುವವರಿಗೆ ಹಾಗೂ ಯಾರೂ ಸರಿಯಾಗಿ ಬಾಡಿಗೆ ಕಟ್ಟಿದ್ದಾರೋ ಅವರಿಗೆ ಮರು ಅವಕಾಶ ಮಾಡಿಕೊಡೋಣ ಎಂದರು.
ಸದಸ್ಯ ದೇವರಮನೆ ಶಿವಕುಮಾರ್ ಮಾತನಾಡಿ, ಪಾಲಿಕೆಗೆ ಆದಾಯ ಬರಬೇಕು. ಈ ಹಿನ್ನೆಲೆಯಲ್ಲಿ ಮಳಿಗೆ ಮರು ಹರಾಜು ಮಾಡುವುದು ಒಳಿತು. ಜೊತೆಗೆ ಕಂದಾಯ ವಸೂಲಿಯಿಂದ ನಗಾರಭಿವೃದ್ಧಿ ಮಾಡಬಹುದ್ದಾಗಿದ್ದು, ಅಧಿಕಾರಿಗಳು ಕೂಲಂಕಷವಾಗಿ ಕರ್ತವ್ಯ ನಿಭಾಯಿಸುವ ಮೂಲಕ ಕಂದಾಯ ವಸೂಲಿ ಮಾಡಲು ಮುಂದಾಗಬೇಕು ಎಂದರು.
ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಕುಡಿಯುವ ನೀರು ಬಿಡುತ್ತಾರೆ. ಆ ವೇಳೆ ಎದ್ದು ನೀರು ಹಿಡಿಯಲು ಜನಸಾಮಾನ್ಯರಿಗೆ ಕಷ್ಟ ಸಾಧ್ಯವೆಂದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, ಈ ಬಗ್ಗೆ ಎಇಇ ವಿನಾಯಕ್ ಅವರಿಗೆ ತಿಳಿಸಿದ್ದೆ. ತೊಂದರೆ ಆಗುತ್ತಿರುವ ಬಗ್ಗ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದೆ ಎಂದ ಅವರು, ಈ ಬಗ್ಗೆ ಕ್ರಮ ವಹಿಸದ ಅಧಿಕಾರಿ ವಿರುದ್ಧ ಹರಿಹಾಯ್ದರು.
ಪಾಲಿಕೆ ಸದಸ್ಯೆ ಆಶಾ ಮಾತನಾಡಿ, ಸ್ಮಶಾನಕ್ಕೆ ಹೋದಾಗ ಗುಂಡಿ ತೆಗೆಯಲು 4 ರಿಂದ 5 ಸಾವಿರ ಹಣ ಕೇಳುತ್ತಿದ್ದಾರೆ. ಈ ಬಗ್ಗೆ ಕ್ರಮ ವಹಿಸಬೇಕು ಎಂದರು. ಈ ವೇಳೆ ಸದಸ್ಯ ನಾಗರಾಜ ಮಾತನಾಡಿ, ಕಾಪೋರೇಶನ್ ವತಿಯಿಂದ ಒಂದು ದರ ನಿಗದಿಪಡಿಸಿ. ಅದಕ್ಕಾಗಿ ಒಂದು ಜೆಸಿಬಿ ಮೀಸಲಿಡಬೇಕು ಎಂದರು.
ಈ ಸಂದರ್ಭದಲ್ಲಿ ಮೇಯರ್ ಪ್ರತಿಕ್ರಿಯಿಸಿ, ಮೊದಲಿನಿಂದಲೂ ಈ ವಿಷಯ ಗಮನಕ್ಕೆ ಬಂದಿದೆ. ರುದ್ರಭೂಮಿಗೆ ಈಗಾಗಲೇ 2 ಜೆಸಿಬಿ ಮೀಸಲಿಡಲಗಿದೆ. ರೂ.500 ನಿಗದಿಪಡಿಸಿದ್ದು, ಜೆಸಿಬಿ ಗುಂಡಿ ತೆಗೆದು, ಮುಚ್ಚುವ ಕೆಲಸ ಮಾಡಲಾಗುತದೆ ಎಂದ ಅವರು, ಸ್ಮಶಾನವು ದುಶ್ಚಟಗಳ ತಾಣವಾಗುತ್ತಿರುವ ಬಗ್ಗೆ ಕೆಳಿ ಬಂದಿದೆ. ಈ ಬಗ್ಗೆ ಕ್ರಮ ವಹಿಸುವ ಮೂಲಕ ಮೂಲ ಸೌಕರ್ಯ ಒದಗಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರದ ರವೀಂದ್ರನಾಥ್, ಉಪ ಮೇಯರ್ ಸೌಮ್ಯ ನರೇಂದ್ರ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಮ್ಮ ಗೋಪಿನಾಯ್ಕ್, ಲೆಕ್ಕಪರಿಶೋಧನಾ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಮ್ಮ ಗಿರಿರಾಜ್, ಮಹಾನಗರ ಪಾಲಿಕೆಯ ಸದಸ್ಯರು ಹಾಗೂ ಅಧಿಕಾರಿಗಳು ಹಾಜರಿದ್ದರು.