ಡಿವಿಜಿ ಸುದ್ದಿ, ದಾವಣಗೆರೆ: ಕೊರೊನಾ ಸಂಕಷ್ಟ ಸಮಯದಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ಸರ್ವಸದ್ಯರ ಸಭೆ ಕರೆಯದೇ ಅಧಿಕಾರಿಗಳು ಏಕಾಏಕಿ ಮನೆ ಕಂದಾಯ ಏರಿಕೆ ಮಾಡಿರುವುದು ಖಂಡನೀಯ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪ್ರತಿ 3 ವರ್ಷಕ್ಕೊಮ್ಮೆ ಮನೆ ಕಂದಾಯ ಹೆಚ್ಚಳ ಮಾಡುವ ಆದೇಶವಿದೆ. ಅದು ಸಹ ಜನ ಸಾಮಾನ್ಯರಿಗೆ ಹೊರೆಯಾಗದಂತೆ ಶೇ.15 ರಿಂದ 30 ರಷ್ಟು ಮಿತಿಯೊಳಗೆ ಸಭೆಯಲ್ಲಿ ತೀರ್ಮಾನ ಮಾಡಬೇಕು. ಆದರೆ ಅಧಿಕಾರಿಗಳು ಏಕಾಏಕಿ ಹೆಚ್ಚಳ ಮಾಡಿರುವುದು ಖಂಡನೀಯ. ಸಭೆಯಲ್ಲಿ ಚರ್ಚಿಸಿ ತೀರ್ಮಾನ ಆಗುವವೆರೆಗೂ ಕಂದಾಯ ಹೆಚ್ಚಳ ಮಾಡಬಾರದು ಎಂದರು.
ಕಾಂಗ್ರೆಸ್ ಪಾಲಿಕೆಯಲ್ಲಿ ಆಡಳಿತ ನಡೆಸಿದ ವೇಳೆ ಶೇ.15 ರಷ್ಟು ಮನೆ ಕಂದಾಯ ಹಾಗೂ ಶೇ. 20 ರಷ್ಟು ರಷ್ಟು ಕರ್ಮಷಿಯಲ್ ಕಂದಾಯ ನಿಗಧಿ ಮಾಡಲಾಗಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಜನರಿಗೆ ಹೊರೆ ಮಾಡಲಾಗುತ್ತಿದೆ. ಕೌನ್ಸಿಲ್ ಸಭೆ ನಡೆಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಆದರೆ ಈ ಬಗ್ಗೆ ಯಾವುದೇ ಸಭೆ ಕರೆಯದೇ ಏಕಾಏಕಿ ಹೆಚ್ಚಳ ಮಾಡಲಾಗಿದೆ. ಮನೆ ಕಂದಾಯ ಪಾವತಿಸಲು ಶೇ 5 ರಷ್ಟು ವಿನಾಯಿತಿ ನೀಡುವುದನ್ನು ಜೂ.30 ರವರೆಗೂ ವಿಸ್ತರಿಸಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ನಾಳೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು. ವಿದ್ಯುತ್ ದರ ಹೆಚ್ಚಳ ಮಾಡಿ ಹಗಲು ದರೋಡೆ ಮಾಡಲಾಗುತ್ತಿದೆ. ಈ ಕೂಡಲೇ ವ್ಯತ್ಯಾಸವಾದ ಬಿಲ್ ನ ಮೊತ್ತ ಸರಿಪಡಿಸಬೇಕು ಇಲ್ಲವಾದಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಾಲಿಕೆ ಮಾಜಿ ಸದಸ್ಯ ಕೆ. ದಿನೇಶ್ ಶೆಟ್ಟಿ ಮಾತನಾಡಿ, 2019-20 ನೇ ಸಾಲಿನ ಕಂದಾಯ ಪಾವತಿಸಲು ಖಾತೆದಾರರು ಪಾಲಿಕೆಗೆ ಹೋಗಾದ ಕಂದಾಯ ಏರಿಕೆಯಾಗಿರುವುದು ತಿಳಿದು ಬಂದಿದೆ. ಈ ಹಿಂದೆ 1,799 ಬರುತ್ತಿದ್ದ ಕಂದಾಯ. ಇದೀಗ ದುಪ್ಪಟ್ಟಾಗಿ 3,518 ರೂಪಾಯಿಗೆ ಹೆಚ್ಚಳವಾಗಿದೆ.
ಪರ್ಸೆಂಟೇಜ್ ಗೆ ನಿಂತ ಮೇಯರ್
ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಹೊರೆಯಾಗಲಿದೆ. ಅನನುಭವಿಗಳಿಂದಾಗಿ ಪಾಲಿಕೆಯ ಎಲ್ಲಾ ಆಡಳಿತ ದಿಕ್ಕೆಟ್ಟು ಹೋಗುತ್ತಿದೆ ಎಂದು ಆರೋಪಿಸಿದರು. ಪಾಲಿಕೆಯಲ್ಲಿ ಮೇಯರ್, ಕಮಿಷನರ್ ಹಾಗೂ ಅಕೌಂಟ್ಸ್ ವಿಭಾಗ ಪರ್ಸೆಂಟೇಜ್ ಪಡೆಯುತ್ತಿದ್ದಾರೆ. ಎಲ್ಲದರಲ್ಲೂ ಶೇಕಡಾವಾರು ಪರ್ಸೆಂಟೇಜ್ ಪಡೆಯುವ ಮೂಲಕ ಅವ್ಯವಹಾರ ಮಾಡಲಾಗುತ್ತಿದೆ. ಈ ಬಗ್ಗೆ ದಾಖಲೆಗಳಿದ್ದು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.
ಕೊರೊನಾ ಸಂಕಷ್ಟದಲ್ಲಿ ಇರುವವರಿಗೆ ಮಹಾನಗರ ಪಾಲಿಕೆಯಿಂದ 30 ಸಾವಿರ ಕಿಟ್ ಗಳನ್ನು ನೀಡಲಾಗಿದೆ. ಆದರೆ, ಇದರಲ್ಲೂ ಸಹ ಅವ್ಯವಹಾರ ನಡೆದಿದೆ ಮೇಯರ್ ತಮಗೆ ಬೇಕಾದವರ ಟೆಂಡರ್ ಹಾಕಿಸಿ ಅವ್ಯವಹಾರ ನಡೆಸಿದ್ದಾರೆ. 100 ಕಿಟ್ ಗೆ 400 ರಿಂದ 500 ಎಂದು ಹೇಳಲಾಗುತ್ತಿದೆ. ಪಾಲಿಕೆ ಸದಸ್ಯರಿಗೆ ಬೇರೆ ಕಿಟ್ ಹಾಗೂ ಮೇಯರ್ ವಾರ್ಡ್‍ಗೆ ಬೇರೆ ಕಿಟ್ ನೀಡಲಾಗಿದೆ .
ಪಾಲಿಕೆಯಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಂದ ಯಾರಿಗೂ ಟ್ರೇಡ್ ಲೈಸೆನ್ಸ್ ಸಿಗುತ್ತಿಲ್ಲ.ಅದಕ್ಕಾಗಿ ಮುಂದೂಡಲೂ ಮನವಿ ಮಾಡಿದ್ದೆವು ಆದರೆ ಅದನ್ನೇ ತಪ್ಪಾಗಿ ಬಿಂಬಿಸಲಾಗಿದೆ.ಉಪಮೇಯರ್ ಮುಂದಿನ ನಾಲ್ಕು ವರ್ಷ ಕೆಲಸ ಮಾಡಿ ಅನುಭವ ಪಡೆದು ಆರೋಪ ಮಾಡಲಿ ಎಂದು ಸಲಹೆ ನಿಡಿದರು.
ಉಪಮೇಯರ್ ಕಡೆಗಣನೆ
ಪಾಲಿಕೆಯಲ್ಲಿ ಉಪಮೇಯರ್ ಅವರನ್ನು ಕಡೆಗಣಿಸಲಾಗುತ್ತಿದೆ ಅವರನ್ನು ಯಾವುದೇ ಸಭೆಗಳಿಗೆ ಕರೆಯುತ್ತಿಲ್ಲ.ಯಾರದೋ ಒತ್ತಡದ ಮೇಲೆ ಅವರು ನನ್ನ ಬಗ್ಗೆ ಹೇಳಿಕೆ ನೀಡಿದ್ದಾರೆ. ಮೊದಲು ಅವರು ಎಷ್ಟು ಹಣಪಡೆದು ಬಿಜೆಪಿಗೆ ಬೆಂಬಲಿಸಿದ್ದಾರೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕೆಂದರು. ಮೇಯರ್ ಕೊರೊನಾ ಸಭೆ ಮಾಡುವುದು ಗುಣಮುಖರಾಗಿ ಬಿಡುಗಡೆಯಾದವರಿಗೆ ಹೂ ಹಾಕುವುದು ಮಾತ್ರ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ ವಿನಃ ಜನರಿಗೆ ನೆರವಾಗುವ ಯಾವ ಕಾರ್ಯ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ದೇವರಮನಿ ಶಿವಕುಮಾರ್, ಮಾಜಿ ಮೇಯರ್ ಅನಿತಾಬಾಯಿ, ಯುವರಾಜ್ ಇದ್ದರು.