ಡಿವಿಜಿ ಸುದ್ದಿ, ದಾವಣಗೆರೆ: ನಗರದ ೬ನೇ ವಾರ್ಡ್ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಇಲ್ಲಿಯವರೆಗೂ ಪಾಲಿಕೆ ಆಡಳಿತ ಮಾಡಿದ ಸದಸ್ಯರುಗಳು ಮೂಲ ಸೌಕರ್ಯ ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಶಿವಳ್ಳಿ ರಂಗಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 6ನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಕುರುಬಕೆರೆ,ವಿಜಯನಗರ ಬಡಾವಣೆ, ಎಸ್.ಎಂ.ಕೃಷ್ಣ ಬಡಾವಣೆ, ಬಾಬು ಜಗಜೀವರಾಂ ಬಡಾವಣೆಯಲ್ಲಿ ಕನಿಷ್ಟ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಚರಂಡಿ ರಸ್ತೆ ಯಾವುದೇ ಸೌಕರ್ಯಗಳಿಲ್ಲದೆ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು 30 ವರ್ಷಕ್ಕೂ ಹಳೆಯದಾದ ವಿಜಯನಗರ ಬಡಾವಣೆಯಲ್ಲಿ ಇಲ್ಲಿಯವರೆಗೂ ರಸ್ತೆ ಚರಂಡಿ ಇಲ್ಲ.
ಮಳೆ ಬಂದರೆ ರಸ್ತೆಗಳು ಹೊಲಗದ್ದೆಗಳಂತಾಗುತ್ತವೆ. ವಾಹನಗಳ ಚಲಾಯಿಸುವುದೇ ದುಸ್ತರವಾಗುತ್ತದೆ. ಬಾಬು ಜಗಜೀವನರಾಮ್ ಬಡಾವಣೆ, ಎಸ್.ಎಂ.ಕೃಷ್ಣ ನಗರಗಳಲ್ಲಿ ಮಳೆ ಬಂದರೆ ಮೊಣಕಾಲೆತ್ತರ ಮನೆಗಳಿಗೆ ನೀರು ನುಗ್ಗುತ್ತದೆ. ಚರಂಡಿ ಮತ್ತು ರಸ್ತೆಗಳನ್ನು ವ್ಯವಸ್ಥೆಗೊಳಿಸುವುದರಲ್ಲಿ ಈ ಹಿಂದೆ ಇದ್ದ ಪಾಲಿಕೆ ಸದಸ್ಯರುಗಳು ಸಂಪೂರ್ಣರಾಗಿ ವಿಫಲರಾಗಿದ್ದಾರೆ ಎಂದು ದೂರಿದರು.



