ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಮಹಾನರ ಪಾಲಿಕೆಗೆ ಚುನಾವಣೆ ನಡೆದು ಮೂರು ತಿಂಗಳ ಬಳಿಕ ಮೇಯರ್ ಆಯ್ಕೆಗೆ ಅಧಿಸೂಚನೆ ಹೊರಡಿಸಲಾಗಿದ್ದು, ಫೆ. 19ಕ್ಕೆ ಮೇಯರ್ ಚುನಾವಣೆ ನಡೆಯಲಿದೆ. ಪಾಲಿಕೆ ಚುಕ್ಕಾಣಿಗಾಗಿ ಕಾಂಗ್ರೆಸ್ , ಬಿಜೆಪಿ ಭಾರೀ ಪೈಪೋಟಿಗೆ ಬಿದ್ದಿವೆ. ಈ ಬಾರಿ ಯಾರು ದಾವಣಗೆರೆ ಮಹಾನಗರ ಪಾಲಿಕೆ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಎರಡೂ ಪಕ್ಷಗಳೂ ಕಾದು ನೋಡುವ ಅನ್ನೋ ತಂತ್ರ ಅನುಸರಿಸುತ್ತಿದ್ದು, ಕುತೂಹಲ ಇನ್ನಷ್ಟು ಹೆಚ್ಚಿಸಿದೆ.
ನವೆಂಬರ್ 12 ರಂದು ಒಟ್ಟು 45 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ನವೆಂಬರ್ 14 ರಂದು ಫಲಿತಾಂಶ ಹೊರ ಬಿದ್ದಿತ್ತು. ಕಾಂಗ್ರೆಸ್ 22 ಸ್ಥಾನ, ಬಿಜೆಪಿ 17 ಸ್ಥಾನ , ಪಕ್ಷೇತರರರು 5 ಸ್ಥಾನ, ಜೆಡಿಎಸ್ 1 ಸ್ಥಾನ ಗೆದ್ದಿವೆ. ಇದರಲ್ಲಿ 4 ಪಕ್ಷೇತರರು ಬಿಜೆಪಿಗೆ ಬೆಂಬಲ ಸೂಚಿಸಿದರೆ, ಒಬ್ಬ ಪಕ್ಷೇತರ ಕಾಂಗ್ರೆಸ್ ಗೆ ಬೆಂಬಲ ಸೂಚಿಸಿದ್ದಾರೆ. ಇನ್ನು ಜೆಡಿಎಸ್ ತಟಸ್ಥವಾಗಿದೆ. ಮೇಯರ್ ಸ್ಥಾನಕ್ಕೆ ಮ್ಯಾಜಿಕ್ ನಂಬರ್ 23 ಅಗತ್ಯವಿತ್ತು. ಆದರೆ, ರಾಜ್ಯ ಸರ್ಕಾರ ಮೇಯರ್ ಚುನಾವಣೆಗೆ ಶಾಸಕರು, ಸಂಸದರು, ಎಂಎಲ್ ಸಿ ಸಹಿತ ರಾಜ್ಯ ಸರ್ಕಾರದ ಗೆಜೆಟ್ ನಲ್ಲಿ 62 ಸದಸ್ಯರಿಗೆ ಮೇಯರ ಸ್ಥಾನದ ಮತದಾನಕ್ಕೆ ಅವಕಾಶ ಕಲ್ಪಿಸಿದೆ.
ಯಾರ ಕಡೆ ಎಷ್ಟು ಬಲ
ಬಿಜೆಪಿ: 21 ಪಾಲಿಕೆ ಸದಸ್ಯರು (4 ಪಕ್ಷೇತರರು ಸೇರಿ), 1 ಸಂಸದ, 1 ಶಾಸಕ, 8 ಎಂಎಲ್ ಸಿ = ಒಟ್ಟು 31
ಕಾಂಗ್ರೆಸ್ : 23 ಪಾಲಿಕೆ ಸದಸ್ಯರು (1 ಪಕ್ಷೇತರ ಸೇರಿ) 1 ಶಾಸಕ, 6 ಎಂಎಲ್ ಸಿ = ಒಟ್ಟು 30
ಜೆಡಿಎಸ್ : 1 ಪಾಲಿಕೆ ಸದಸ್ಯ
ರಾಜ್ಯ ಸರ್ಕಾರ ಗೆಜೆಟ್ ನಲ್ಲಿ ಹೊರಡಿಸುವ ಪಟ್ಟಿ ಪ್ರಕಾರ ಬಿಜೆಪಿ ಕಡೆ 1 ಸಂಸದರು, 1 ಶಾಸಕ, 8 ಎಂಎಲ್ಸಿ, 21 ಪಾಲಿಕೆ ಸದಸ್ಯರು (4 ಪಕ್ಷೇತರರು ) ಸೇರಿ ಒಟ್ಟು 31 ಸದಸಸ್ಯರ ಬಲವಿದೆ. ಇನ್ನು ಕಾಂಗ್ರೆಸ್ ಕಡೆಯಿಂದ 1 ಶಾಸಕ, 6 ಎಂಎಲ್ ಸಿ, 23 ಪಾಲಿಕೆ ಸದಸ್ಯರು (1 ಪಕ್ಷೇತರ ಅಭ್ಯರ್ಥಿ) ಸೇರಿ ಒಟ್ಟು 30 ಸ್ಥಾನಗಳಾಗುತ್ತವೆ. ಇನ್ನು ಜೆಡಿಎಸ್ ಪಕ್ಷ ಕಾಂಗ್ರೆಸ್ ಗೆ ಬೆಂಬಲ ನೀಡಿದರೆ 31 ಸ್ಥಾನಗಳಾಗಲಿದೆ. ಈ ಮೂಲಕ ಎರಡೂ ಕಡೆ ಸಮ ಬಲವಾಗಲಿದೆ. ಎರಡೂ ಕಡೆ ಸಮ ಬಲ ಸಾಧಿಸಿದ್ದಲ್ಲಿ ಲಾಟರಿ ಮೂಲಕ ಮೇಯರ್ ಆಯ್ಕೆ ನಡೆಯಲಿದೆ.
ಈ ಬಾರಿ ನೂರಕ್ಕೆ ನೂರಷ್ಟು ಬಿಜೆಪಿ ಅಧಿಕಾರ ಹಿಡಿಯುವುದು ಪಕ್ಕವಾಗಿದೆ. ಈ ಬಗ್ಗೆ ಎಲ್ಲಾ ರೀತಿಯಲ್ಲಿಯೂ ತಯಾರಿ ಮಾಡಿಕೊಳ್ಳಲಾಗಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ.
-ವೀರೇಶ್ ಹನಗವಾಡಿ, ಬಿಜೆಪಿ ಜಿಲ್ಲಾಧ್ಯಕ್ಷ
ಮೇಯರ್ ಚುನಾವಣೆಗೆ ಅವಕಾಶ ಪಡೆದವರು
ಕಾಂಗ್ರೆಸ್: ಶಾಸಕ ಶಾಮನೂರ ಶಿವಶಂಕರಪ್ಪ, ಎಂಎಲ್ ಸಿ ಗಳಾದ ಅಬ್ದುಲ್ ಜಬ್ಬಾರ್ , ಮೋಹನ್ ಕೊಂಡಜ್ಜಿ, ಕೆಸಿ ಕೊಂಡಯ್ಯ, ಯು.ಬಿ. ವೆಂಕಟೇಶ್, ರಘು ಆಚಾರ್, ಎಚ್. ಎಂ. ರೇವಣ್ಣ
ಬಿಜೆಪಿ: ಸಂಸಸದ ಜಿ.ಎಂ. ಸಿದ್ದೇಶ್ವರ್, ಶಾಸಕ ಎಸ್. ಎ. ರವೀಂದ್ರನಾಥ್, ಎಂಎಲ್ಸಿ ಕೆ.ಪಿ. ನಂಜುಂಡಿ, ವಿಶ್ವಕರ್ಮ, ಲೆಹರ್ ಸಿಂಗ್ ಸಿರಾಯ್, ವೈ.ಎ. ನಾರಾಯಣಸ್ವಾಮಿ, ಎನ್ . ರವಿಕುಮಾರ್ ,ಡಾ. ತೇಜಶ್ವಿನಿಗೌಡ, ಎಸ್. ರುದ್ರೇಗೌಡ, ಡಿ. ಯು. ಮಲ್ಲಿಕಾರ್ಜುನ್, ಹನುಮಂತ ನಿರಾಣಿ
ಒಟ್ನಲ್ಲಿ ಈ ಬಾರಿಯ ದಾವಣಗೆರೆ ಮಹಾನಗರ ಪಾಲಿಕೆ ಅಧಿಕಾರ ಯಾರ ಪಾಲಾಗಲಿದೆ ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ. ನೀವು ಕೂಡ ದಾವಣಗೆರೆ ನೂತನ ಮೇಯರ್ ಯಾರು ಎಂಬುದನ್ನು ತಿಳಿದುಕೊಳ್ಳಬೇಕಾದರೆ, ಫೆ . 19 ವರೆಗೆ ಕಾಯಲೇಬೇಕು….