ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ವೈರಸ್ ಸೋಂಕಿನ ಯಾವುದೇ ಪ್ರಕರಣ ವರದಿಯಾಗಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಜಿಲ್ಲಾಸ್ಪತ್ರೆ, ಬಾಪೂಜಿ ಮತ್ತು ಎಸ್. ಎಸ್.ಆಸ್ಪತ್ರೆ ಸೇರಿದಂತೆ ಒಟ್ಟು 132 ಬೆಡ್‍ಗಳನ್ನು ಈ ಸೋಂಕಿಗೆ ಚಿಕಿತ್ಸೆ ನೀಡಲೆಂದು ಮೀಸಲಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಕೊರೊನ ವೈರಸ್ ಸೋಂಕು ಮುನ್ನೆಚ್ಚರಿಕೆ ಕ್ರಮದ ಹಿನ್ನೆಲೆ ಇಂದು ನಗರದ ಜಿಲ್ಲಾ ಚಿಗಟೇರಿ ಆಸ್ಪತ್ರೆ, ಬಾಪೂಜಿ, ಎಸ್.ಎಸ್.ಆಸ್ಪತ್ರೆಗಳಿಗೆ ಭೇಟಿ ನೀಡಿ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಮೀಸಲು ಇರಿಸಿದ ಐಸೊಲೇಟೆಡ್ ವಾರ್ಡ್‍ಗಳನ್ನು ಪರಿಶೀಲಿಸಿದ ನಂತರ ಮಾತನಾಡಿದರು.
ಕೊರೊನಾ ಸೋಂಕಿನ ಚಿಕಿತ್ಸೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಲ್ಲಿ ಒಟ್ಟು 132 ಬೆಡ್‍ಗಳನ್ನು ಸಿದ್ದಪಡಿಸಿದ್ದೇವೆ. ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಒಟ್ಟು 10 ಬೆಡ್‍ಗಳು, ಬಾಪೂಜಿ ಆಸ್ಪತ್ರೆಯಲ್ಲಿ 15 ಬೆಡ್‍ಗಳು ಹಾಗೂ ಎಸ್.ಎಸ್.ಆಸ್ಪತ್ರೆಯಲ್ಲಿ 15 ಬೆಡ್‍ಗಳುಳ್ಳ ಐಸೊಲೇಟೆಡ್ ವಾರ್ಡ್‍ಗಳನ್ನು ಮೀಸಲಿಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಒಂದೆಡೆ ಮೂರು ಮತ್ತು ಒಂದೆಡೆ ನಾಲ್ಕು ಬೆಡ್ ವ್ಯವಸ್ಥೆ ಮಾಡಲಾಗಿದೆ. ಹಾಗೂ ತಾಲ್ಲೂಕು ಮಟ್ಟದಲ್ಲಿ ಐಸೊಲೇಟೆಡ್ ವಾರ್ಡ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಕಂಚಿಕೇರಿಯಲ್ಲಿ ಶಂಕಿತ ಪ್ರಕರಣ: ಇದೇ ತಿಂಗಳು 11ನೇ ತಾರೀಖಿನಂದು ಹರಪನಹಳ್ಳಿ ತಾಲ್ಲೂಕಿನ ಕಂಚಿಕೇರಿ ಗ್ರಾಮಕ್ಕೆ ಸುಮಾರು 26 ವರ್ಷದ ಯುವಕ ದುಬೈನಿಂದ ಬಂದಿದ್ದು, ಆತನಿಗೆ ಕೊರೊನಾ ಬಂದಿರು ಶಂಕೆ ವ್ಯಕ್ತವಾಗಿದೆ. ಹೀಗಾಗಿ ಬಳ್ಳಾರಿ ಜಿಲ್ಲಾಧಿಕಾರಿಗಳು ಕಂಚಿಕೇರಿ ದಾವಣಗೆರೆಗೆ ಸಮೀಪವಿರುವ ಕಾರಣ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಂತೆ ಕೇಳಿಕೊಂಡ ಹಿನ್ನೆಲೆಯಲ್ಲಿ ಚಿಗಟೇರಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಗಿದೆ. ಆ ಯುವಕನಿಗೆ ಕೊರೊನಾ ವೈರಸ್ ಸೋಂಕಿನ ಯಾವ ಲಕ್ಷಣಗಳೂ ಕಂಡು ಬಂದಿಲ್ಲ. ಹಾಗೂ ಆತ ಕೂಡ ಊರಿಗೆ ಹೋಗುವುದಾಗಿ ಹೇಳುತ್ತಿದ್ದಾರೆ.
ಬಳ್ಳಾರಿ ಜಿಲ್ಲಾಧಿಕಾರಿಗಳು ಆತನಿಗೆ ಗಂಟಲು ನೋವಿದೆ ಎಂದು ಹೇಳಲಾಗುತ್ತಿರುವ ಹಿನ್ನೆಲೆ ಪರೀಕ್ಷೆ ಮಾಡಿಸುವಂತೆ ತಿಳಿಸಿರುತ್ತಾರೆ. ಈ ಹಿನ್ನಲೆಯಲ್ಲಿ ಆತನ ಗಂಟಲು ದ್ರವ ಮಾದರಿಯನ್ನು ಪರೀಕ್ಷೆ ಕಳುಹಿಸಲಾಗಿದ್ದು ನಾಳೆಗೆ ಆ ಪರೀಕ್ಷೆಯ ವರದಿ ಬರಲಿದೆ. ಸದ್ಯಕ್ಕೆ ಮುಂಜಾಗೃತಾ ಕ್ರಮವಾಗಿ ಆಸ್ಪತ್ರೆಯಲ್ಲೇ ಇರಿಸಿಕೊಳ್ಳಲಾಗಿದೆ. ನಂತರದಲ್ಲಿ ಯಾವುದೇ ಲಕ್ಷಣಗಳು ಕಂಡು ಬರದಿದ್ದರೂ ಆತನನ್ನು ಮನೆಯಲ್ಲೇ 14 ದಿನ ನಿಗಾವಣೆಯಲ್ಲಿರುವಂತೆ ಸೂಚಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ವಿದೇಶ ಹೋಗಿ ಬಂದವರು 49 ಜನರಿದ್ದು, ಅದರಲ್ಲಿ 14 ಜನ 14 ದಿನ ಅವಲೋಕನ ಅವಧಿ ಮುಗಿಸಿದ್ದಾರೆ. ಒಬ್ಬರು 28 ದಿನ ಅವಲೋಕನ ಅವಧಿ ಮುಗಿಸಿದ್ದಾರೆ. ಇನ್ನುಳಿದವರು ಅವಲೋಕನ ಅವಧಿಯ ಬೇರೆ ಬೇರೆ ಹಂತದಲ್ಲಿದ್ದು, ಯಾರಲ್ಲೂ ಸೋಂಕಿನ ಲಕ್ಷಣ ಇಲ್ಲ. ಸೋಂಕಿನ ಲಕ್ಷಣಗಳಿದ್ದ ನಾಲ್ಕು ಜನರ ವರದಿ ನೆಗೆಟೆವ್ ಇದ್ದು, ಜಿಲ್ಲೆಯಲ್ಲಿ ಯಾವುದೇ ಖಚಿತಪಟ್ಟ ಪ್ರಕರಣಗಳು ವರದಿಯಾಗಿಲ್ಲ ಎಂದರು.
ಮಾನ್ಯ ಮುಖ್ಯಂತ್ರಿಗಳು ದಿನಸಿ ವಸ್ತುಗಳು, ದೈನಂದಿನ ವಸ್ತುಗಳನ್ನು ಮಾರಾಟಕ್ಕೆ ನಿರ್ಬಂಧ ಹೇರದಂತೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತರ ಮೂಲಕ ಸೂಚನೆ ನೀಡಿದ್ದೇವೆ. ಜನಸಂದಣಿಯಾವುಂತಹ ಕಾರ್ಯಕ್ರಮಗಳು, ಘಟನೆಗಳ ನಿಯಂತ್ರಣಕ್ಕಾಗಿ ಹಬ್ಬ, ಜಾತ್ರೆ, ಸಂತೆಗಳನ್ನು ನಿಷೇಧಿಸಲು ಕ್ರಮ ವಹಿಸಲಾಗಿದೆ. ಆದರ, ಕೊರೊನಾ ವೈರಸ್ ಸೋಂಕಿನ ನಿಯಂತ್ರಣ ಮತ್ತು ತಡೆಗಾಗಿ ಎಲ್ಲ ರೀತಿಯ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ ಎಂದರು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ಪಾಲಿಕೆ ಆಯುಕ್ತರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ವಿಜಯ್ ಕುಮಾರ್, ಎಸ್‍ಎಸ್‍ಐಎಂ ಪ್ರಾಂಶುಪಾಲ ಪ್ರಸಾದ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.