ಡಿವಿಜಿ ಸುದ್ದಿ, ದಾವಣಗೆರೆ: ಖಾಸಗಿ ಆಸ್ಪತ್ರೆಗಳು ಸೇರಿದಂತೆ ಕೋವಿಡ್ ಹಾಗೂ ನಾನ್ ಕೋವಿಡ್ ರೋಗಿಗಳು ಚಿಕಿತ್ಸೆಗೆ ಬಂದಾಗ ಯಾವುದೇ ಕಾರಣ ಹೇಳಿ ಚಿಕಿತ್ಸೆ ನಿರಾಕರಿಸುವಂತಿಲ್ಲ ಎಂದು ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಎಚ್ಚರಿಕೆ ನೀಡಿದರು.
ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾದ ಕೆಡಿಪಿ ಒಂದನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಭಿವೃದ್ದಿ ಕಾರ್ಯಗಳಲ್ಲಿ ಸ್ವಲ್ಪ ಹಿನ್ನಡೆಯಾದರೂ ಪರವಾಗಿಲ್ಲ. ಆದರೆ ಕೋವಿಡ್ ನಿರ್ವಹಣೆಯಲ್ಲಿ ಹಿನ್ನಡೆಯಾದರೆ ಸಹಿಸುವುದಿಲ್ಲ. ಕೋವಿಡ್ ವಿಚಾರದಲ್ಲಿ ಯಾವುದೇ ರಾಜೀ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಯಾವುದೇ ರೋಗಿಯೂ ಚಿಕಿತ್ಸೆಯಿಂದ ವಂಚಿತನಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು. ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಬೇಕು. ಸಾವಿನ ಸಂಖ್ಯೆ ಕುಗ್ಗಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕಾರ್ಯೋನ್ಮುಖವಾಗಬೇಕಿದೆ ಎಂದರು.
ಕೋವಿಡ್ ಮತ್ತು ಇನ್ನಿತರೆ ಚಿಕಿತ್ಸೆಗೆಂದು ಆಸ್ಪತ್ರೆಗಳಿಗೆ ರೋಗಿಗಳು ಬಂದಾಗ ಖಾಸಗಿ ಆಸ್ಪತ್ರೆಗಳು ಸಮರ್ಪಕವಾಗಿ ನಡೆದುಕೊಳ್ಳುತ್ತಿಲ್ಲ. ಬೆಡ್ ಖಾಲಿ ಇಲ್ಲವೆಂದು, ಅಥವಾ ಜ್ವರ ಬಂದಿದ್ದರೆ ಚಿಗಟೇರಿ ಆಸ್ಪತ್ರೆಗೆ ಹೋಗಿರೆಂದು ದೂರದಿಂದಲೇ ಕಳುಹಿಸುತ್ತಿದ್ದಾರೆ. ರೋಗಿಗಳಿಗೆ ಸಮರ್ಪಕ ಸ್ಪಂದನೆ ದೊರೆಯುತ್ತಿಲ್ಲ. ಜನಪ್ರತಿನಿಧಿಗಳು ಡಿಹೆಚ್‍ಓ ಇತರೆ ಅಧಿಕಾರಿಗಳಿಗೆ ಕರೆ ಮಾಡಿದರೂ ತ್ವರಿತ ಸ್ಪಂದನೆ ಇಲ್ಲವೆಂದು ದೂರುತ್ತಿದ್ದಾರೆ. ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ನಿರಾಕರಿಸದೇ ಚಿಕಿತ್ಸೆ ನೀಡಬೇಕು.
ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳಿಗೆ ನೋಂದಣಿ ರದ್ದತಿ ಸೇರಿದಂತೆ ಸರ್ಕಾರದ ಸವಲತ್ತುಗಳನ್ನು ರದ್ದುಪಡಿಸುವಂತೆ ಡಿಹೆಚ್‍ಓ ರವರಿಗೆ ಸೂಚನೆ ನೀಡಿದ ಅವರು, ಯಾವುದೇ ಆಸ್ಪತ್ರೆ ರೋಗಿಗಳನ್ನು ನಿರ್ಲಕ್ಷಿಸಿದಲ್ಲಿ ನಿರ್ದಾಕ್ಷಿಣ್ಯ ಮತ್ತು ಕಠಿಣ ಕ್ರಮ ಜರುಗಿಸಲಾಗುವುದು. ಜೊತೆಗೆ ಡಿಹೆಚ್‍ಒ ರವರನ್ನು ಸಹ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೃಷಿ ಸಮ್ಮಾನ್ ಯೋಜನೆಯು ಪ್ರತಿ ಅರ್ಹ ರೈತರಿಗೆ ತಲುಪಬೇಕು. ಜಗಳೂರು ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಅಭಾವ ಸೃಷ್ಟಿಯಾಗಿದೆ. ಡೀಲರ್‍ಗಳ ದಾಸ್ತಾನು ಮಳಿಗೆಗಳಿಗೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಂಡು ಯೂರಿಯಾ ಅಭಾವವನ್ನು ಸೂಕ್ತವಾಗಿ ನಿರ್ವಹಿಸಬೇಕು. ಕೃಷಿ ಜಂಟಿ ನಿರ್ದೇಶಕರು ತಾವೇ ಸ್ವತಃ ಕ್ಷೇತ್ರಗಳಿಗೆ ತೆರಳಿ ರೈತರಿಂದ ಯಾವುದೇ ದೂರುಗಳು ಬರದಂತೆ ಕ್ರಮ ವಹಿಸಬೇಕೆಂದು ತಾಕೀತು ಮಾಡಿದರು.
ಡಿಹೆಚ್‍ಓ ಡಾ.ರಾಘವೇಂದ್ರ ಸ್ವಾಮಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಇದುವರೆಗೆ 2 ಮಲೇರಿಯಾ, 22 ಚಿಕುನ್‍ಗುನ್ಯ ಮತ್ತು 92 ಡೆಂಗ್ಯು ಪ್ರಕರಣಗಳು ದೃಢಪಟ್ಟಿವೆ. ಕೋವಿಡ್ ಹಿನ್ನೆಲೆಯಲ್ಲಿ ಜೂನ್ 15 ರ ನಂತರ ಲಸಿಕಾ ಕಾರ್ಯಕ್ರಮ ಆರಂಭಿಸಿದ್ದು ಶೇ.90 ಪ್ರಗತಿ ಸಾಧಿಸಲಾಗಿದೆ. ಕಂಟೈನ್‍ಮೆಂಟ್ ಝೋನ್ ಹೊರತುಪಡಿಸಿ ಶಾಲಾ ಮಕ್ಕಳಿಗೆ ಆ.1 ರಿಂದ 15 ರವರೆಗೆ ಶಾಲಾ ಲಸಿಕಾ ಕಾರ್ಯಕ್ರಮ ಪ್ರಗತಿಯಲ್ಲಿದೆ. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಸಂಖ್ಯೆ ಕಡಿಮೆಯಾಗಿದೆ. ಶೇ.20 ಮಾತ್ರ ಸಿಸೇರಿಯನ್ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕೃಷಿ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾತನಾಡಿ, ಜಿಲ್ಲೆಯಲ್ಲಿ 2020-21 ನೇ ಸಾಲಿನ ಜೂನ್ 30 ರವರೆಗೆ ಸರಾಸರಿ ವಾಡಿಕೆ ಮಳೆ 184 ಮಿ.ಮೀ ಗೆ 189 ಮಿ.ಮೀ ವಾಡಿಕೆ ಮಳೆಯಾಗಿದ್ದು, ಶೇ.3 ರಷ್ಟು ಹೆಚ್ಚು ಮಳೆಯಾಗಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು 243698 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಮ್ಮಿಕೊಂಡಿದ್ದು ಇದುವರೆಗೆ 103342 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ. ಮೆಕ್ಕೆಜೋಳ ಬೆಳೆದು ಕೊರೊನಾ ಹಿನ್ನೆಲೆ ಸಂಕಷ್ಟಗೀಡಾಗಿದ್ದ ಸುಮಾರು 56618 ರೈತರಿಗೆ ತಲಾ ರೂ.5 ಸಾವಿರವನ್ನು ಪರಿಹಾರ ನೀಡಲಾಗಿದೆ ಎಂದರು.
ವಿವಿಧ ಬೆಳೆಗಳ ಹಾಗೂ ವಿವಿಧ ತಳಿಗಳ 40381 ಕ್ವಿಂಟಾಲ್ ಬಿತ್ತನೆ ಬೇಡಿಕೆ ಇದ್ದು, ಇದುವರೆಗೆ 41647 ಕ್ವಿಂಟಾಲ್ ದಾಸ್ತಾನು ಇದೆ. 37501 ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆಯಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿಗೆ 141057 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರ ಬೇಡಿಕೆ ಇರುತ್ತದೆ. ಜುಲೈ ಮಾಹೆಯಲ್ಲಿ 25850 ಮೆಟ್ರಿಕ್ ಟನ್ ಬೇಡಿಕೆ ಇದ್ದು ಕಾಪು ದಾಸ್ತಾನು ಸೇರಿ ಒಟ್ಟು 29096 ಮೆಟ್ರಿಕ್ ಟನ್ ರಸಗೊಬ್ಬರಗಳ ದಾಸ್ತಾನು ಲಭ್ಯವಿರುತ್ತದೆ.
ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ನರೇಗಾ ಯೋಜನೆಯಡಿ ಅರೆ ಮಲೆನಾಡಿನಲ್ಲಿ ಕೈಗೊಳ್ಳಲಾಗುತ್ತಿರುವ ಅಡಿಕೆ ಬೆಳೆಗೆ ಬಿಪಿಎಲ್ ಕಾರ್ಡುದಾರರಿಂದಲೂ ಸಣ್ಣ ಹಿಡುವಳಿ ಪ್ರಮಾಣ ಪತ್ರ ಕೇಳಲಾಗುತ್ತಿದೆ. ಬಿಪಿಎಲ್ ಇದ್ದರೆ ಈ ಪ್ರಮಾಣ ಪತ್ರದ ಅವಶ್ಯಕತೆ ಇಲ್ಲ. ಈ ಬಗ್ಗೆ ಜಿ.ಪಂ. ಸಿಇಓ ಸೂಕ್ತ ನಿರ್ದೇಶನ ನೀಡಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಜಿಲ್ಲೆಯ ಬರಪೀಡಿತವಾಗಿದ್ದ ಜಗಳೂರು ತಾಲ್ಲೂಕಿನಲ್ಲಿ ಈ ಬಾರಿ ಯಥೇಚ್ಚ ಮಳೆಯಾಗಿದೆ. ಜೊತೆಗೆ ನೆರೆ ಭೀತಿ ಇರುವ ಹರಿಹರ ಮತ್ತು ಹೊನ್ನಾಳಿಯಲ್ಲಿ ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು
ಇದೇ ವೇಳೆ ಸೋಪ್ಸ್ & ಡಿಟೆರ್ಜೆಂಟ್ಸ್ ನಿಗಮದ ನೂತನ ಅಧ್ಯಕ್ಷರಾದ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ರಾಜ್ಯ ಪರಿಶಿಷ್ಟ ಪಂಗಡ ವಾಲ್ಮೀಕಿ ನಿಗಮದ ನೂತನ ಅಧ್ಯಕ್ಷ ಎಸ್.ವಿ.ರಾಮಚಂದ್ರಪ್ಪ ಇವರನ್ನು ಜಿಲ್ಲಾಡಳಿತದ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು.
ಸಭೆಯಲ್ಲಿ ಶಾಸಕರಾದ ಎಸ್.ಎ.ರವೀಂದ್ರನಾಥ್, ಪ್ರೊ.ಲಿಂಗಣ್ಣ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್, ಉಪಾಧ್ಯಕ್ಷೆ ಸಾಕಮ್ಮ ಗಂಗಾನಾಯ್ಕ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷರು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.