Connect with us

Dvg Suddi-Kannada News

ತಾಲ್ಲೂಕು ಮಟ್ಟದಲ್ಲಿ ಜನಸ್ಪಂದನ ಸಭೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚನೆ

ದಾವಣಗೆರೆ

ತಾಲ್ಲೂಕು ಮಟ್ಟದಲ್ಲಿ ಜನಸ್ಪಂದನ ಸಭೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚನೆ

ಡಿವಿಜಿ ಸುದ್ದಿ, ದಾವಣಗೆರೆ :

ಪ್ರತಿ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜನಸ್ಪಂದನ ಸಭೆ ನಡೆಸುತ್ತಿದ್ದು, ಇನ್ನು ಮುಂದೆ ಎಲ್ಲಾ ತಾಲ್ಲೂಕುಗಳಲ್ಲಿ ತಹಶೀಲ್ದಾರರ ನೇತೃತ್ವದಲ್ಲಿ ಜನಸ್ಪಂದನ ಸಭೆ ನಡೆಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದರು.

ಸೋಮವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಜನರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ಜನಸ್ಪಂದನ ಸಭೆಗೆ ಬೇರೆ ಬೇರೆ ಊರುಗಳಿಂದ ಜನರು ಬಂದು ಮನವಿ ಮತ್ತು ದೂರುಗಳನ್ನು ನೀಡುತ್ತಿದ್ದಾರೆ. ಸಾರ್ವಜನಿಕರ ಹಿತದೃಷ್ಠಿಯಿಂದ ಇನ್ನು ಮುಂದೆ ದಾವಣಗೆರೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ತಹಶೀಲ್ದಾರರ ನೇತೃತ್ವದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಹಭಾಗಿತ್ವದೊಂದಿಗೆ ತಾಲ್ಲೂಕು ಮಟ್ಟದ ಜನಸ್ಪಂದನ ಸಭೆಗಳನ್ನು ನಡೆಸುವಂತೆ ತಿಳಿಸಿದರು.

ಸಕಾಲದಲ್ಲಿ ನಮ್ಮ ಜಿಲ್ಲೆಯು 6 ನೇ ಸ್ಥಾನಕ್ಕಿಂತ ಕೆಳಗಿದ್ದು, ಸಕಾಲದಲ್ಲಿ ಹಾಕಿರುವ ಅರ್ಜಿಗಳನ್ನು ಎಲ್ಲಾ ಇಲಾಖೆಯವರು ಆದಷ್ಟು ಬೇಗ ವಿಲೇವಾರಿ ಮಾಡಸಬೇಕೆಂದು ಸೂಚನೆ ನೀಡಿದರು.
ಜನಸ್ಪಂದನ ಸಭೆಗೆ ಹಲವಾರು ಇಲಾಖೆಗಳಿಗೆ ಸಂಬಂಧಿಸಿದಂತೆ ದೂರುಗಳು ಬರುತ್ತಿದವೆ. ಆದರೆ ಸಾರ್ವಜನಿಕರು ಮೊದಲು ತಮ್ಮ ಸಮಸ್ಯೆಯನ್ನು ಸಂಬಂಧಿಸಿದ ಇಲಾಖೆಗೆ ದೂರು ಅಥವಾ ಮನವಿ ಸಲ್ಲಿಸಬೇಕು ಎಂದರು.

ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೊತ್ತು ನೇರವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಬರುವುದು ಸರಿ ಅಲ್ಲ. ಮೊದಲು ತಮ್ಮ ಸಮಸ್ಯೆಗೆ ಸಂಬಂಧಿಸಿದ ಇಲಾಖೆಗೆ ಹೋಗಿ ಅಲ್ಲಿ ತಮ್ಮ ಕೆಲಸ ಆಗದೇ ಇದ್ದಾಗ ಮಾತ್ರ ಜಿಲ್ಲಾಧಿಕಾರಿಗಳ ಕಚೇರಿಗೆ ಬರಬೇಕು. ಆಗ ನಾವು ಸಂಬಂಧಿಸಿದ ಇಲಾಖೆಗಳಿಂದ ಕೆಲಸ ಮಾಡಿಸಿಕೊಡುತ್ತೇವೆ ಎಂದರು.

ಜನಸ್ಪಂದನ ಸಭೆಗೆ ಇದುವರೆಗೂ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ 330 ಅರ್ಜಿಗಳು ಬಂದಿದ್ದು, ಇದರಲ್ಲಿ 204 ಅರ್ಜಿಗಗಳನ್ನು ಈಗಾಗಲೇ ವಿಲೇವಾರಿ ಮಾಡಲಾಗಿದೆ. ಇನ್ನು 126 ಅರ್ಜಿಗಳು ವಿವಿಧ ಹಂತದಲ್ಲಿ ಬಾಕಿ ಇದ್ದು, ಆದಷ್ಟು ಬೇಗ ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದರು.

ಚನ್ನಗಿರಿ ತಾಲ್ಲೂಕು ದೊಡ್ಡಘಟ್ಟ ನಿವಾಸಿ ಹನುಮಂತಪ್ಪ ಎಂಬುವರು ತಾವು ತಮ್ಮ ಗ್ರಾಮದಲ್ಲಿ ಸರ್ಕಾರಿ ಶಾಲೆಗೆಂದು ದಾನ ನೀಡಿರುವ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ಮನೆ ನಿರ್ಮಾಣ ಮಾಡುತ್ತಿದ್ದಾರೆ. ದಯವಿಟ್ಟು ಇದನ್ನು ನಿಲ್ಲಿಸಬೇಕೆಂದು ಮನವಿ ಪತ್ರ ಸಲ್ಲಿಸಿದರು.

ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಈ ಹಿಂದೆ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸರ್ಕಾರಿ ಶಾಲೆಗಳಿಗೆ ಭೂದಾನ ನೀಡಲಾಗಿರುವ ಜಮೀನುಗಳಿಗೆ ಸಂಬಂಧಿಸಿದಂತೆ ಅದರ ದಾಖಲೆಗಳನ್ನು ಮತ್ತು ಖಾತೆ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ತಿಳಿಸಲಾಗಿತ್ತು. ದೂರಿನಲ್ಲಿ ತಿಳಿಸಿದ ಜಾಗಕ್ಕೆ ಸಂಬಂಧಿಸಿದಂತೆ ಖಾತೆ ಮತ್ತು ದಾಖಲೆಗಳನ್ನು ಪರಿಶೀಲನೆ ನಡೆಸಿ, ಈ ಜಾಗದಲ್ಲಿ ನಿರ್ಮಿಸಲಾಗುತ್ತಿರುವ ಕಟ್ಟಡ ನಿರ್ಮಾಣ ಕಾರ್ಯವನ್ನು ನಿಲ್ಲಿಸುವಂತೆ ಕ್ರಮ ವಹಿಸಬೇಕೆಂದು ಡಿಡಿಪಿಐಗೆ ಸೂಚಿಸಿದರು.

ನಮ್ಮ ಜಿಲ್ಲೆಯಲ್ಲಿರುವ ಕುಗ್ರಾಮಗಳನ್ನು ಅಧಿಕಾರಿಗಳು ಆಯ್ಕೆ ಮಾಡಿಕೊಂಡು ಆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೆಲ್ಲಾ ಸೇರಿ ಮಕ್ಕಳಿಗೆ ಸ್ಪೂರ್ತಿ ನೀಡುವವಂತಹ ಮಾತುಗಳನ್ನು ಹೇಳುವ ಮೂಲಕ ಅವರಲ್ಲಿ ಕನಸು ಬಿತ್ತುವ ಕೆಲಸ ಮಾಡಬೇಕು. ಹಾಗೂ ವಿದ್ಯಾರ್ಥಿಗಳ ಗುರಿಗಳನ್ನು ತಿಳಿಯುವ ಪ್ರಯತ್ನ ಮಾಡಬೇಕು. ಈ ಸ್ಫೂರ್ತಿ ತುಂಬುವ ಪ್ರಯತ್ನವನ್ನು ಜ.29 ರಂದು ಜಗಳೂರು ತಾಲ್ಲೂಕಿನ ಹೊಸಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ “ಕನಸು ಬಿತ್ತುವ-ರಾಷ್ಟ್ರ ಕಟ್ಟುವ” ಕಾರ್ಯಕ್ರಮ ಮಾಡುವುದರ ಮೂಲಕ ಆರಂಭಿಸಲಾಗುವುದು ಎಂದರು.

ಇಂಡಸ್ಟ್ರಿಯಲ್ ಏರಿಯಾದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹತ್ತಿರ ಉದ್ಯಾನವನಕ್ಕಾಗಿ ಮೀಸಲಿಟ್ಟಿರುವ ಜಾಗದಲ್ಲಿ ಕಾನೂನು ಬಾಹಿರವಾಗಿ ನಿವೇಶನಗಳನ್ನು ನಿರ್ಮಿಸಿ, ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ಮಾರಾಟ ಮಾಡಲಾಗುತ್ತಿದೆ. ಇದರ ಬಗ್ಗೆ ಪರಿಶೀಲನೆ ನಡೆಸಬೇಕು ಹಾಗೂ ಉದ್ಯಾನವನಕ್ಕೆ ಕಾಂಪೌಂಡ್ ನಿರ್ಮಾಣ ಮಾಡಿ ಗಿಡ ಮರಗಳನ್ನು ಬೆಳಿಸಿ, ಮಕ್ಕಳ ಆಟಿಕೆ ಸಾಮಾನುಗಳನ್ನು ಅಳವಡಿಸಿ ಅಭಿವೃದ್ಧಿ ಪಡಿಸಬೇಕೆಂದು ಮಲ್ಲಿಕಾರ್ಜುನ್ ಇಂಗಳೇಶ್ವರ್ ಮನವಿ ಮಾಡಿ ನಗರದ ಅರ್ಜಿ ನೀಡಿದರು.ದೂಡಾ ಆಯುಕ್ತರು ಪರಿಶೀಲನೆ ನಡೆಸಿ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಜನಸ್ಪಂದನ ಸಭೆಗೆ ವೃದ್ಧೆಯೋರ್ವರು ಬಂದು ತಾವು ಕಳೆದ ಜನಸ್ಪಂದನ ಸಭೆಗೆ ಆಗಮಿಸಿ ಪಿಂಚಣಿ ಬಂದಿಲ್ಲ ಎಂದು ದೂರು ನೀಡಿದ್ದೆ. ಈ ತಿಂಗಳು ನನಗೆ 5 ರಿಂದ 6 ತಿಂಗಳ ಬಾಕಿ ಪಿಂಚಣಿ ಹಣ ತಮ್ಮ ಖಾತೆಗೆ ಪಾವತಿಯಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ಧನ್ಯವಾದ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಘವೇಂದ್ರಸ್ವಾಮಿ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ್ ಬೊಮ್ಮನ್ನಾರ್, ದಾವಣಗೆರೆ ತಾಲ್ಲೂಕು ತಹಶೀಲ್ದಾರರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು, ಉಪಸ್ಥಿತರಿದ್ದರು.

 

 

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top