ಡಿವಿಜಿ ಸುದ್ದಿ, ಹರಪನಹಳ್ಳಿ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ಪುತ್ರನ ವಯಸ್ಸಿನ ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ ಎಂದು ದೂರು ನೀಡಿದವರಿಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ಮಾಜಿ ಸಚಿವ ಹಾಗೂ ಹೂವಿನ ಹಡಗಲಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ವಿರುದ್ಧ ದೂರು ದಾಖಲಾಗಿದೆ.
ಈ ಪ್ರಕರಣದಲ್ಲಿ ಶಾಸಕರ ಪುತ್ರ ಪಿ.ಟಿ. ಭರತ್ , ಮುಖ್ಯ ಶಿಕ್ಷಕ ರಾಜ ಸೋಮಶೇಖರ ನಾಯಕ ವಿರುದ್ಧವೂ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.2015ರಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಲಕ್ಷ್ಮೀಪುರ ಗ್ರಾಮ ಪಂಚಾಯಿತಿಯಲ್ಲಿ ಸ್ಪರ್ಧಿಸಲು ಪರಮೇಶ್ವರ ನಾಯ್ಕ ಅವರ ಪುತ್ರ ಪಿ.ಟಿ. ಭರತ್ ವಯಸ್ಸಿನ ಕುರಿತು ಸುಳ್ಳು ದಾಖಲೆ ಸಲ್ಲಿಸಿದ್ದರು.
ಪುತ್ರನಿಗೆ 21 ವರ್ಷ ಆಗದ ಹಿನ್ನೆಲೆ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ತಮ್ಮ ಪ್ರಭಾವ ಬಳಸಿ ಶಾಲಾ ದಾಖಲಾತಿ ದಿನಾಂಕ ತಿದ್ದಿದ್ದರು. ಇದಾದ ಬಳಿಕ ಶಾಸಕರ ಪುತ್ರ ಚುನಾವಣೆಯಲ್ಲಿ ಗೆದ್ದು 5 ವರ್ಷ ಪಂಚಾಯಿತಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದರು ಎಂದು ಡಿ.ಲಿಂಬಾನಾಯ್ಕ ಎಂಬುವವರು ದೂರು ನೀಡಿದ್ದರು.ದೂರುದಾರ ಲಿಂಬಾನಾಯ್ಕಗೆ ಜೀವ ಬೆದರಿಕೆ ಇದ್ದು, ಭದ್ರತೆ ಒದಗಿಸಬೇಕು ಎಂದು ಅವರ ಪರ ವಕೀಲ ರೇವನಗೌಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.