ಡಿವಿಜಿ ಸುದ್ದಿ, ಹರಿಹರ: ಪಂಚಮಸಾಲಿ ಸಮಾಜಕ್ಕೆ 3 ಸಚಿವ ಸ್ಥಾನ ನೀಡುವ ವಿಚಾರವಾಗಿ ಪಂಚಮಸಾಲಿ ಮಠದ ಶ್ರೀ ವಚನಾಂದ ಸ್ವಾಮೀಜಿ ಮತ್ತು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಡುವೆ ಮಾತಿನ ಜಟಾಪಟಿ ನಡೆಯಿತು.
ಹರಿಹರದ ವೀರಶೈವ ಪಂಚಮಸಾಲಿ ಮಠದಲ್ಲಿ ನಡೆಯುತ್ತಿರುವ ಪ್ರಥಮ ಹರ ಜಾತ್ರಾ ಮಹೋತ್ಸವದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಬೆಳ್ಳಿ ಬೆಡಗು ಕಾರ್ಯಕ್ರಮ ಅಧ್ಯಕ್ಷತೆಯ ವಹಿಸಿ ಮಾತನಾಡುತ್ತಿದ್ದ ಶ್ರೀಗಳು, ನಮ್ಮ ಸಮಾಜಕ್ಕೆ ಈ ಬಾರಿ 3 ಸಚಿವ ಸ್ಥಾನ ಕೊಡಲೇಬೇಕು ಪಟ್ಟು ಹಿಡಿದರು.
ನ್ಯಾಯಯುತವಾಗಿ ನಮಗೆ 4 ಸಚಿವ ಸ್ಥಾನ ನೀಡಬೇಕು. ಆದರೆ, ನಾವು 3 ಸ್ಥಾನ ಕೇಳುತ್ತಿದ್ದೇವೆ. ಅದರಲ್ಲೂ ನಮ್ಮ ಸಮಾಜದ ಮುಖಂಡ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ನೀಡಲೇಬೇಕು. ಈ ಬಾರಿ ನೀವು ನಮ್ಮ ಸಮಾಜ ಕೈ ಹಿಡಿಯಬೇಕು. ಈ ಬಾರಿ ನೀವು ನಮ್ಮ ಸಮಾಜದ ಕೈ ಹಿಡಿಯದೇ ಹೋದಲ್ಲಿ ನಮ್ಮ ಸಮಾಜ ನಿಮ್ಮ ಕೈ ಬಿಡಲಿದೆ ಎಂದು ಹೇಳಿದ ತಕ್ಷಣ ಪಕ್ಕದಲ್ಲಿಯೇ ಕುಂತಿದ್ದ ಮುಖ್ಯಮಂತ್ರಿ ಎದ್ದುನಿಂತು, ನೀವು ಈ ರೀತಿ ಮಾತನಾಡಿದರೆ ನಾನು ಎದ್ದು ಹೋಗುತ್ತೇನೆ. ಸಲಹೆ, ಸೂಚನೆ, ಮನವಿ ಕೊಡಿ..ಆದರೆ, ಈ ರೀತಿ ಬೆದರಿಕೆ ಹಾಕುವುದು ಸರಿಯಲ್ಲ ಎಂದು ನಿಂತೇ ಮಾತನಾಡಿದರು.
ಆಗ ಸ್ವಾಮೀಜಿ ನೀವು ಕುಳಿತುಕೊಳ್ಳಬೇಕು. ನೀವು ಒಳ್ಳೆಯವರಿದ್ದೀರಿ. ಇದು ನಮ್ಮ ನಮ್ಮ ಸಮಾಜ ಕೂಗು. ಮುರುಗೇಶ್ ನಿರಾಣಿ ನಮ್ಮ ಸಮಾಜದ ಪ್ರಶ್ನಾತೀತ ನಾಯಕ. ಅವರು ನಿಮಗೂ ಸಹಾಯ ಮಾಡಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಲೇಬೇಕು. ಇಲ್ಲದಿದ್ದರೆ ಸಮಾಜ ನಿಮ್ಮ ಕೈ ಬಿಡಲಿದೆ ಎಂದರು.
ಬಿ.ಎಸ್ ವೈ ಕೋಪದಿಂದಲೇ ಎದ್ದು ನಿಂತು. ಸ್ವಾಮೀಜಿ ಅವರಿಗೆ ನಮಸ್ಕಾರ ಮಾಡಿ ನಾನು ಹೊರಡುತ್ತೇನೆ ಎಂದರು. ಆಗ ಪಕ್ಕದಲ್ಲಿದ್ದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಅವರನ್ನು ಸಮಾಧಾನ ಮಾಡಿದರು.