ಡಿವಿಜಿ ಸುದ್ದಿ, ದಾವಣಗೆರೆ: ನಗರ ದೇವತೆ ದುರ್ಗಾಂಬಿಕಾ ದೇವಿ ಜಾತ್ರೆಯಲ್ಲಿ ಜಿಲ್ಲಾಡಳಿತ ಕೋಣ ಬಲಿಯನ್ನು ನಿಷೇಧಿಸಿದ್ದರೂ, ಕೋಣ ಬಲಿ ನಡೆದಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ.
ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದರೂ ದೇವಿಗೆ ಕೋಣ ಬಲಿ ನಡೆದಿದೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ. ದೇವಸ್ಥಾನಕ್ಕೆ ಸಮೀಪದ ಸ್ವಲ್ಪ ದೂರದಲ್ಲಿ ಕೋಣ ಬಲಿ ನೆಡೆದಿದೆ. ದೇವರಿಗೆ ಬಲಿ ನೀಡಿದಾಗ ಮಾತ್ರ ದೇವಿಗೆ ಸಂತೃಪ್ತಿ ಎಂಬುದು ಜನರ ನಂಬಿಕೆ.

ದೇವಸ್ಥಾನ ಪ್ರದೇಶ ಬಿಟ್ಟು ಇನ್ನೊಂದು ಪ್ರದೇಶದಲ್ಲಿ ಊಧೋ ಊಧೋ ಎಂದು ಭಕ್ತರು ಕೋಣವನ್ನು ಬಲಿ ಕೊಟ್ಟಿದ್ದಾರೆ ಎನ್ನಲಾಗಿದ್ದು, ಬಳಿಕ ಕೋಣದ ರಕ್ತದಲ್ಲಿ ಚರಗ ಹಾಕಿದ್ದಾರೆ. ರಾತ್ರಿ ದುಗ್ಗಮ್ಮ ದೇವಿಗೆ ಬಿಟ್ಟಂತಹ ಕೋಣದಿಂದ ಸಿರಂಜ್ ಮೂಲಕ ವೈದ್ಯರು ರಕ್ತವನ್ನು ತೆಗೆದು ದುಗ್ಗಮ್ಮ ದೇವಿಗೆ ಅರ್ಪಿಸಿದರು.

ದೇವಸ್ಥಾನದ ಆವರಣದಲ್ಲಿ ಕೋಣವನ್ನು ಬಲಿ ನೀಡುವುದನ್ನು ತಡೆಯಲು ಇಡೀ ರಾತ್ರಿ ದೇವಸ್ಥಾನ ಆವರಣದಲ್ಲಿ ಜಿಲ್ಲಾಧಿಕಾರಿ, ಎಸ್‍ಪಿ ಸೇರಿದಂತೆ ಹಲವು ಅಧಿಕಾರಿಗಳು ಜಾಗರಣೆ ಮಾಡಿದರು. ಆದರೂ ಕೂಡ ದೇವಸ್ಥಾನದಿಂದ ದೂರದಲ್ಲಿ ದೇವರ ಕೋಣವನ್ನು ಬಲಿಕೊಟ್ಟು ದೇವತೆಗೆ ಭಕ್ತಿಯಿಂದ ಕೋಣದ ತಲೆ ಮೇಲೆ ದೀಪವಿಟ್ಟು ನೈವೇದ್ಯ ಅರ್ಪಿಸಿದರು. ದೇವಸ್ಥಾನದ ಆವರಣದಲ್ಲಿ ಯಾವುದೇ ಬಲಿ ನಡೆದಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.
ಬೆತ್ತಲೆ, ಅರೆಬೆತ್ತಲೆಯಾಗಿ ಬೇವಿನುಡುಗೆ ಉಡಬಾರದು ಎಂದು ಸರ್ಕಾರ ಆದೇಶ ಹೊರಸಿದ್ದರೂ ಕೆಲವರು ಬೇವಿನುಡುಗೆ ತೋಡಿಸಿದ್ದ ಮಕ್ಕಳ ಪೋಷಕರಿಗೆ ಜಿಲ್ಲಾಧಿಕಾರಿಗಳು ಕ್ಲಾಸ್ ತೆಗೆದುಕೊಂಡರು. ಈ ರೀತಿ ಮೂಡ ನಂಬಿಕೆಯಿಂದ ಮಕ್ಕಳಿಗೆ ಹಿಂಸೆ ನೀಡಬಾರದು ಎಂದು ತಿಳಿಹೇಳಿದರು.



