Connect with us

Dvg Suddi-Kannada News

ದಾವಣಗೆರೆಯಲ್ಲಿ ಕೊರೊನಾ ವೈರಸ್  ಪತ್ತೆ ಇಲ್ಲ; ಮುನ್ನೆಚ್ಚರಿಕೆ ವಹಿಸಲು ಸೂಚನೆ: ಜಿಲ್ಲಾಧಿಕಾರಿ

ಪ್ರಮುಖ ಸುದ್ದಿ

ದಾವಣಗೆರೆಯಲ್ಲಿ ಕೊರೊನಾ ವೈರಸ್  ಪತ್ತೆ ಇಲ್ಲ; ಮುನ್ನೆಚ್ಚರಿಕೆ ವಹಿಸಲು ಸೂಚನೆ: ಜಿಲ್ಲಾಧಿಕಾರಿ

ಡಿವಿಜಿ ಸುದ್ದಿ, ದಾವಣಗೆರೆ:

ದಾವಣಗೆರೆ ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ವೈರಸ್ ಪ್ರಕರಣ ವರದಿಯಾಗಿಲ್ಲ. ಈ ಬಗ್ಗೆ ಸರ್ಕಾರದ ನಿರ್ದೇಶನದನ್ವಯ ಅಗತ್ಯ ಪೂರ್ವಸಿದ್ದತೆ ಕೈಗೊಂಡಿದ್ದು, ಸಾರ್ವಜನಿಕರು ಯಾವುದೇ ಭೀತಿಗೆ ಒಳಗಾಗದೇ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಕರೆ ನೀಡಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೊರೊನಾ ವೈರಸ್ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊರೊನೊ ವೈರಸ್ ಮೂಲ ಚೀನಾದ್ದಾಗಿದ್ದು, ವಿದೇಶಿ ಪ್ರವಾಸಿಗರು, ಪ್ರಯಾಣಿಕರಿಂದ ಎಲ್ಲೆಡೆ ಹರಡುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಅನುಸರಿಸಲಾಗುತ್ತಿದ್ದು, ಈ ಬಗ್ಗೆ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುತ್ತಿದೆ.ಈ ಕುರಿತು ತಂಡಗಳನ್ನು ರಚಿಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಕೊರೊನೊ ವೈರಸ್ ಸೋಂಕಿಗೆ ಸಂಬಂಧಿಸಿದಂತೆ ಯಾರೂ ವಂದಂತಿಗಳನ್ನು, ಸುಳ್ಳು ಸುದ್ದಿಗಳನ್ನು ಹರಡಬಾರದು. ಸುಳ್ಳಿ ಸುದ್ದಿ ಹರಡುವವರು ಕಂಡುಬಂದಲ್ಲಿ ಅವರ ವಿರುದ್ದ ಪ್ರಕರಣ ದಾಖಲಿಸಲಾಗುವುದು. ಜನರು ಕೊರೊನೊ ಭೀತಿಗೆ ಒಳಗಾಗುವುದು ಬೇಡ. ಜಿಲ್ಲೆಯಲ್ಲಿ ಕೊರೊನೊ ವೈರಸ್ ಎದುರಿಸಲು ಸಕಲ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕು ಎಂದರು.

ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ ಮಾತನಾಡಿ, ಬಾಪೂಜಿ ನರ್ಸಿಂಗ್ ಹೋಂ ಹಾಗೂ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿಯೂ ಸಹ ಐದು ಬೆಡ್‍ಗಳನ್ನು ಈ ಸೋಂಕಿಗಾಗಿ ಮೀಸಲಿಡಾಗಿದೆ. ಇತ್ತೀಚೆಗೆ ಜಿಲ್ಲೆಯ 14 ಜನ ಪ್ರವಾಸಿಗಳು ಹಾಂಕಾಂಗ್, ಸಿಂಗಾಪುರ, ಥೈಲ್ಯಾಂಡ್, ಮಲೇಶಿಯಾ, ಜಪಾನ್, ಕೊರಿಯ, ವಿಯೆಟ್ನಾಂ, ಇಂಡೋನೇಶಿಯಾ, ನೇಪಾಳ, ಇಟಲಿ, ಇರಾನ್, ಯು.ಎ.ಇ ದೇಶಗಳು ಸೇರಿದಂತೆ ಒಟ್ಟು 12 ದೇಶಗಳಿಗೆ ಪ್ರವಾಸ ಕೈಗೊಂಡಿದ್ದು, ಇವರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಇವರಲ್ಲಿ ಯಾರಿಗೂ ಕೊರೊನಾ ವೈರಸ್ ಸೋಂಕು ಕಂಡು ಬಂದಿರುವುದಿಲ್ಲ.ಈ ಪ್ರಯಾಣಿಕರನ್ನು 14 ದಿನಗಳ ಕಾಲ ಮನೆಯೊಳಗೇ ಇರಿಸಿ ತೀವ್ರ ನಿಗಾವಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ, ಜಿಲ್ಲೆಯಲ್ಲಿ ಲಭ್ಯವಿರುವ ಕೊರೊನಾ ವೈರಸ್‍ಗೆ ಸಂಬಂಧಿಸಿದಂತೆ ಅವಶ್ಯಕವಾದ ಎನ್95 ಮಾಸ್ಕ್‍ಗಳು, ಫೇಸ್‍ಶೀಲ್ಡ್, ಸಂರಕ್ಷಣಾ ಕನ್ನಡಕಗಳು, ಗೌನ್‍ಗಳು, ಸೋಪ್, ಕೈವರೆಸುವ ಟಿಶ್ಯು,ಶಾರ್ಪ್ ಕಂಟೈನರ್ ಗ್ಲಾಸಗಳು, ಗ್ಲೋವ್‍ಗಳು, ಸರ್ಜಿಕಲ್ ಮಾಸ್ಕ್‍ಗಳು, ಟ್ರಿಪಲ್ ಪ್ಯಾಕೇಜಿಂಗ್ ಬಾಕ್ಸ್‍ಗಳು, ಆಕ್ಸಿಜನ್ ಪ್ರಾಂಗ್ಸ್ ಮತ್ತು ಟ್ಯೂಬ್ಸ್ ಇತರೆ ಅವಶ್ಯಕ ಸಾಮಗ್ರಿಗಳ ಸ್ಟಾಕ್ ಇರುವಂತೆ ನಿಗಾ ವಹಿಸಬೇಕು. ಇಂದೇ ಸ್ಟಾಕ್ ಪರೀಕ್ಷಿಸಿ ಅವಶ್ಯವಿರುವ ಔಷಧಿ-ಸಾಮಗ್ರಿಗಳನ್ನು ಶೇಖರಿಸಿಡಲು ಕ್ರಮ ಕೈಗೊಳ್ಳಬೇಕು ಹಾಗೂ ಸರ್ಕಾರದ ನಿರ್ದೇಶನದನ್ವಯ ಸಿಬ್ಬಂದಿ ತರಬೇತಿ, ಸ್ಟಾಕ್ ಪೊಸಿಷನ್, ರಿಪೋರ್ಟಿಂಗ್ ನಮೂನೆ, ತಂಡಗಳ ಗುರುತಿಸುವ ಸೇರಿದಂತೆ ನಿಗದಿತ ನಮೂನೆಗಳನ್ನು ನಿರ್ವಹಿಸಲು ತಿಳಿಸಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್ ಮಾತನಾಡಿ, ಕೊರೊನಾ ವೈರಸ್ ಒಂದು ಸೂಕ್ಷ್ಮ ವೈರಸ್ ಆಗಿದ್ದು, ಇದೊಂದು ಸಾಂಕ್ರಾಮಿಕ ಸೋಂಕಾಗಿರುವ ಕಾರಣ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಪಕ್ಕದ ಆಂಧ್ರ, ಕೇರಳ ಸೇರಿದಂತೆ ದೇಶದ ಹಲವೆಡೆ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲು ಸರ್ಕಾರ ಸೂಚನೆ ನೀಡಿದೆ.

ಎಸ್.ಎಸ್.ಮೆಡಿಕಲ್ ಕಾಲೇಜಿನ ವೈದ್ಯಕೀಯ ನಿರ್ದೇಶಕ ಡಾ.ಕಾಳಪ್ಪ ಮಾತನಾಡಿ, ಎಸ್‍ಎಸ್ ಆಸ್ಪತ್ರೆಯಲ್ಲಿ ಐಸೋಲೇಷನ್ ಐಸಿಯು ವ್ಯವಸ್ಥೆ ಇದೆ. ಈಗಾಗಲೇ ಐದು ಬೆಡ್‍ಗಳನ್ನು ಮುನ್ನಚ್ಚರಿಕೆ ಕ್ರಮವಾಗಿ ಕೊರೊನಾ ವೈರಸ್ ಪ್ರಕರಣಕ್ಕೆಂದು ಮೀಸಲಿಡಲಾಗಿದೆ ಎಂದರು.

 

 

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top