ಡಿವಿಜಿ ಸುದ್ದಿ, ದಾವಣಗೆರೆ: ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೊನ್ನಾಳಿ ತಾಲ್ಲೂಕಿನಲ್ಲಿ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಕೊರೊನಾ ಜಾಗೃತಿ ಬದಲು ಚುನಾವಣೆ ಪ್ರಚಾರದ ರೀತಿ ಗಿಮಿಕ್ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ವಾರಿಯರ್ಸ್ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಶಾಸಕರು ತಾವೇ ಎಲ್ಲಾ ಕೆಲಸ ಮಾಡಿದವರಂತೆ ಹೂ ಮಳೆ ಸುರಿಸಿಕೊಳ್ಳುತ್ತಿದ್ದಾರೆ. 50ಕ್ಕಿಂತ ಹೆಚ್ಚು ಜನ ಸೇರಿಸಬಾರದು ಎಂದು ನಿಯಮ ಇದ್ದರೂ, ಸಾಮಾಜಿಕ ಅಂತರ ಕಾಪಾಡದೇ ಅದ್ಧೂರಿಯಾಗಿ ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದಾರೆ. ಅಧಿಕಾರಿಗಳು ಸಹ ವರ್ಗಾವಣೆಯ ಭಯಕ್ಕೆ ಶಾಸಕರ ತಾಳಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರೆ ಆರೋಪಿಸಿದರು.
150 ವರ್ಷ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ರೇಣುಕಾಚಾರ್ಯ ಹಗುರವಾಗಿ ಮಾತನಾಡುವುದು ಖಂಡನೀಯ. ಸಿದ್ದರಾಮಯ್ಯ ತುಘಲಕ್ ದರ್ಬಾರ್ ನಡೆಸುತ್ತಿಲ್ಲ. ರೇಣುಕಾಚಾರ್ಯ ನಿಜವಾದ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರದ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಆರೋಪಿಸಿದರು.
ಜಿಲ್ಲೆಯಲ್ಲಿ ರೈತರ ಬಹಳ ಸಂಕಷ್ಟದಲ್ಲಿ ಇದ್ದಾರೆ. ಇದರ ಬಗ್ಗೆ ಶಾಕರು ಗಮನಹರಿಸುತ್ತಿಲ್ಲ. ಭತ್ತ, ಮೆಕ್ಕೆಜೋಳಕ್ಕೆ ಸೂಕ್ತ ಬೆಂಬಲ ಬೆಲೆ ಸಿಗದೇ ರೈತರ ಸಂಕಷ್ಟದಲ್ಲಿದ್ದಾರೆ. ಶಾಸಕರು ರಾಜಕೀಯ ದೊಂಬರಾಟ ನಿಲ್ಲಿಸಿ ರೈತರ ನೆರವಿಗೆ ಬರಬೇಕಿದೆ ಎಂದರು.
ಜಿಲ್ಲಾ ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಶೆಟ್ಟಿ ಮಾತನಾಡಿ, ಮೇಯರ್ ಅಧಿಕಾರ ವಹಿಸಿಕೊಂಡು ನಾಲ್ಕು ತಿಂಗಳಾದರೂ, ಅನುಭವ ಇಲ್ಲದ ಕಾರಣ ಉತ್ತಮ ಆಡಳಿತ ನಡೆಸುಲ್ಲಿ ವಿಫಲವಾಗಿದ್ದಾರೆ. ಮಹಾನಗರ ಪಾಲಿಕೆಯಲ್ಲಿ ಹಿಂದಿನಂತೆ ತೆರಿಗೆ ಪಾವತಿಗೆ ಅನುವು ಮಾಡಿಕೊಡಬೇಕು. ಇದರಿಂದ ಜನರಿಗೆ ಅನುಕೂಲವಾಗಲಿದೆ ಎಂದರು.
ಕಳೆದ ಮೂರು ತಿಂಗಳಿಂದ ಯಾವುದೇ ವ್ಯವಹಾರ ನಡೆಯದೇ ವ್ಯಾಪಾರಿಗಳು ನಷ್ಟದಲ್ಲಿದ್ದಾರೆ. ಹೀಗಾಗಿ ಈ ಸಮಯದಲ್ಲಿ ತೆರಿಗೆ ಹೆಚ್ಚಳ ಮಾಡಿರುವುದನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.



