ಡಿವಿಜಿ ಸುದ್ದಿ, ದಾವಣಗೆರೆ: ಮಧ್ಯ ಕರ್ನಾಟಕ ದಾವಣಗೆರೆ ಇವತ್ತು ಎರಡು ವಿಭಿನ್ನ ಕಾರ್ಯಕ್ರಮಕ್ಕೆ ಸಾಕ್ಷಿ ಆಯ್ತು. ಈ ಎರಡು ಕಾರ್ಯಕ್ರಮಗಳು ವಿಭಿನ್ನವಾಗಿದ್ದರೂ, ಸಾಮಾಜಿಕ ಸಾಮರಸ್ಯ ಸಾರುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.
ಜಿಲ್ಲಾಡಳಿತ ವತಿಯಿಂದ ರಾಜ್ಯ ಮಹಿಳಾ ನಿಲಯದಲ್ಲಿ ನೆಲೆಸಿದ್ದ ಅನಿತಾ(ಮಮತಾ) ಮತ್ತು ರೇಣುಕಾ ಗೊರಪ್ಪನವರ್ ಅವರಿಗೆ ವಿವಾಹ ಮಹೋತ್ಸವ ಹಾಗೂ ಮೌಢ್ಯತೆಯ ಕಾರಣದಿಂದ ಊರಿನಿಂದ ಹೊರಗಿಟ್ಟ ಹೆಣ್ಣುಮಗಳೊಬ್ಬಳ 8 ತಿಂಗಳ ಕಂದಮ್ಮನ ನಾಮಕರಣ ಸಮಾರಂಭ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತುಂಬಾ ಅರ್ಥ ಪೂರ್ಣವಾಗಿ ನಡೆಯಿತು.
ಶ್ರೀ ರಾಮನಗರದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ರಾಜ್ಯ ಮಹಿಳಾ ನಿಲಯದ ನಿವಾಸಿ ಅನಿತಾ ಅವರು ಸಿದ್ದಾಪುರ ತಾಲ್ಲೂಕಿನ ವಿನಾಯಕ ಸುಬ್ಬುರಾಯ ಹೆಗಡೆ ಮತ್ತು ರೇಣುಕ ಗೊರಪ್ಪನವರ್ ಅವರು ಶಿರಸಿ ತಾಲ್ಲೂಕಿನ ನಾಗೇಂದ್ರ ಜನಾರ್ಧನ ಭಟ್ಟ ಅವರ ಜೊತೆ ವಿವಾಹ ಮಹೋತ್ಸವ ನಡೆಯಿತು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯರವರ ಸಮ್ಮುಖದಲ್ಲಿ ವಧು ವರರ ಎದುರುಗೊಳ್ಳುವ ಶಾಸ್ತ್ರ ನೆರವೇರಿತು. ನಂತರ ಮದುವೆ ಮಂಟಪಕ್ಕೆ ವಧು ವರರು ಆಗಮಿಸಿದರು. ಶಾಸ್ತ್ರೋಕ್ತವಾಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅವರು ಅನಿತಾ ಮತ್ತು ವಿನಾಯಕ ಸುಬ್ಬುರಾಯ ಹೆಗಡೆ ಜೋಡಿಗೆ ಧಾರೆ ಎರೆಯುವ ಶಾಸ್ತ್ರವನ್ನು ಹಾಗೂ ಜಿಲ್ಲಾಧಿಕಾರಿಗಳು ರೇಣುಕ ಗೊರಪ್ಪನವರ್ ಮತ್ತು ನಾಗೇಂದ್ರ ಜನಾರ್ಧನ ಭಟ್ಟ ಜೋಡಿಗೆ ಧಾರೆ ಎರೆದರು.
ವಿವಾಹ ಮಹೋತ್ಸವದ ನಂತರ ಜಗಳೂರು ತಾಲ್ಲೂಕಿನ ಅಣಬೂರು ಗೊಲ್ಲರಹಟ್ಟಿಯಲ್ಲಿ ಮೌಢ್ಯತೆಗೊಳಗಾಗಿ ಊರಿನಿಂದ ಹೊರಗಿಟ್ಟಿದ್ದ ಮೂಕ ತಾಯಿ ಮತ್ತು ಆಕೆಯ ಎಂಟು ತಿಂಗಳ ಗಂಡು ಮಗುವಿನ ನಾಮಕರಣ ಶಾಸ್ತ್ರವನ್ನು ಜಿ.ಪಂ ಅಧ್ಯಕ್ಷೆ ಯಶೋಧ ಮರುಳಪ್ಪ, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ಪದ್ಮಾ ಬಸವಂತಪ್ಪ ಇವರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಶ್ರೀ ಕೃಷ್ಣ ಎಂದು ಹೆಸರಿಟ್ಟ ಜಿಲ್ಲಾಧಿಕಾರಿ
ಮೌಢ್ಯತೆಯ ಕಾರಣದಿಂದಾಗಿ ಮಹಿಳಾ ನಿಲಯದಲ್ಲಿ ಆಶ್ರಯ ಪಡೆದಿರುವ ಹೆಣ್ಣು ಮಗಳ ಕರುಳಬಳ್ಳಿಗೆ ಶ್ರೀ ಕೃಷ್ಣ ಎಂಬ ಹೆಸರಿಟ್ಟು ಜಿಲ್ಲಾಧಿಕಾರಿಗಳು ನಾಮಕರಣ ಮಾಡಿದರು. ಜಗತ್ತಿಗೆ ಭಗವದ್ಗೀತೆಯ ಸಂದೇಶ ಸಾರಿದ ಗೊಲ್ಲ ಸಮುದಾಯದ ಕೃಷ್ಣ ಪರಮಾತ್ಮನ ಕುಲದಲ್ಲಿ ಜನಿಸಿರುವ ಈ ಕಂದಮ್ಮ ಸಮಾಜದ ಮುನ್ನೆಲೆಗೆ ತರಲು ಎಲ್ಲರೂ ಪ್ರಯತ್ನಿಸೋಣ. ತಾಯಿ ಹಾಗೂ ಮಗುವಿನ ಬದುಕು ಉಜ್ವಲವಾಗಲಿ ಎಂದು ಹಾರೈಸಿದರು. ಕೆಲ ದಿನಗಳಲ್ಲಿ ಊರಿಗೆ ತೆರಳಿ ಗ್ರಾಮಸ್ಥರ ಮನವೊಲಿಸಿ ಸಂಪ್ರದಾಯಗಳ ಸಂಕೋಲೆಯಿಂದ ಹೊರಬಂದು ಸಮಾಜದ ಮುಖ್ಯ ವಾಹಿನಿಗೆ ತರಲು ಅಧಿಕಾರಿಗಳ ತಂಡದೊಂದಿಗೆ ಶ್ರಮ ಪಡಲಾಗುವುದು ಎಂದರು.
ಇನ್ನು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಮಾರ್ಗದರ್ಶನದಲ್ಲಿ ಇಂದು ಮಹಿಳಾ ನಿಲಯದ ಅನಿತಾ ಮತ್ತು ರೇಣುಕಾ ಅವರನ್ನು ಧಾರೆ ಎರೆದು ಕೊಟ್ಟಿರುವುದು ಬಹಳಷ್ಟು ಅರ್ಥ ಪೂರ್ಣವಾದ ಕಾರ್ಯ. ಶಾಶ್ವತವಾಗಿ ನೆನಪಿಟ್ಟುಕೊಳ್ಳುವ ಸಂಭ್ರಮವಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ್, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ವಿಶೇಷ ಭೂಸ್ವಾಧೀನಾಧಿಕಾರಿ ರೇಷ್ಮಾ ಹಾನಗಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧೀಕ್ಷಕಿ ಸುಶೀಲಮ್ಮ, ಮಹಿಳಾ ನಿಲಯದ ಅಧೀಕ್ಷಕಿ ಕು.ಅಭಿಲಾಷ.ಬಿ, ಸುಜಾತ, ಶೃತಿ, ರೇಣುಕಾ, ಪೂರ್ಣಿಮಾ, ಪ್ರತಿಭಾ, ಮಹಾಂತ ಪೂಜಾರ್, ಇತರೆ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.