ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲಾದ್ಯಂತ ಕೊರೊನಾ ರೋಗ ವಿಪತ್ತು ನಿರ್ವಹಣೆಗೆ 16 ರಚಿಸಿದೆ. ಈ ವಿಪತ್ತು ನಿರ್ವಹಣಾ ತಂಡಗಳು ಅತ್ಯಂತ ಕ್ರಿಯಾಶೀಲವಾಗಿ ವಿಪತ್ತು ನಿರ್ವಹಣೆ ಮಾಡುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದಲ್ಲಿ ಏರ್ಪಡಿಸಲಾದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿಗಳು ಮಾತನಾಡಿದ ಅವರು, ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆಗೆ ಸಂಪರ್ಕ ತಂಡ, ಕ್ವಾರೈಂಟಿನ್ ನಿರ್ವಹಣಾ ತಂಡ, ಅವಶ್ಯಕ ಸಾಮಗ್ರಿ ಪೂರೈಕೆ ತಂಡ, ಬಯೋ ಮೆಡಿಕಲ್ ನಿರ್ವಹಣಾ ಹಾಗೂ ಮೃತ ದೇಹ ನಿರ್ವಹಣಾ ತಂಡ, ಅಂಬುಲೆನ್ಸ್ ಸಂಚಾರ ನಿರ್ವಹಣೆ ತಂಡ, ತುರ್ತು ಸಂದರ್ಭ ಯೋಜನೆ ನಿರ್ವಹಣೆ ತಂಡ, ಕೃಷಿ ಪರಿಕರ ಪೂರೈಕೆ ತಂಡ ಸೇರಿದಂತೆ ಮತ್ತಿತರ ತಂಡ ರಚಿಸಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.
ಪ್ರಸ್ತುತ ಜಿಲ್ಲೆಯಲ್ಲಿದ್ದ 3 ಕೊರೊನಾ ಪಾಸಿಟಿವ್ ಪ್ರಕರಣಗಳ ಗಂಟಲು ದ್ರವ ಮಾದರಿಯನ್ನು ಪ್ರಾಥಮಿಕ ಹಂತದ ಪರೀಕ್ಷೆಗೆ ಕಳುಹಿಸಲಾಗಿದ್ದು ಮೂರು ಸೋಂಕಿತರ ವರದಿ ನೆಗೆಟಿವ್ ಎಂದು ಬಂದಿದೆ. ಮತ್ತೊಮ್ಮೆ ಇವರ ಗಂಟಲು ದ್ರವ ಮಾದರಿಯನ್ನು ಎರಡನೇ ಹಂತದಲ್ಲಿ ಕಳುಹಿಸಲಾಗುವುದು. ಎಪಿ ಸೆಂಟರ್ ವಲಯದಲ್ಲಿರುವ ಮನೆಗಳಿಗೆ ತೆರಳಿ ಫ್ಲೂ ಟೆಸ್ಟ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಅಗತ್ಯ ವಸ್ತುಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ. ವೈದ್ಯಕೀಯ ಹಾಗೂ ಇತರೆ ಅಗತ್ಯವಸ್ತುಗಳ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಅಲೆಮಾರಿ, ವಲಸೆ ಕಾರ್ಮಿಕರಿಗೆ ಊಟ ಮತ್ತು ಹಾಲವಿತರಿಸಲಾಗುತ್ತಿದೆ. ಕಿರಾಣಿ ಅಂಗಡಿಗಳು, ದಿನಸಿ ಅಂಗಡಿಗಳು ಕಾರ್ಯರ್ವಹಿಸುತ್ತಿವೆ.
ಕೋವಿಡ್-19 ನಲ್ಲಿ ಶ್ರಮಿಸುತ್ತಿರುವ ಯಾವುದೇ ಅಧಿಕಾರಿಗಳಿಗೆ ಸಾರ್ವಜನಿಕರು ದೂರವಾಣಿ ಕರೆ ಮಾಡಿದರೆ ನಿಮ್ಮಲ್ಲಿರುವ ಮಾಹಿತಿ ನೀಡಿ, ಒಂದು ವೇಳೆ ನಿಮ್ಮಲ್ಲಿ ಮಾಹಿತಿ ಲಭ್ಯವಿಲ್ಲದಿದ್ದಲ್ಲಿ ಕಟ್ರೋಲ್ ರೂಮ್ ನಂಬರ್ ನೀಡಿ ಅವರಿಗೆ ಸಹಕರಿಸಿ ಎಂದರು.
ಪಡಿತರ ಆಹಾರ ಧಾನ್ಯ ವಿತರಣೆಗೆ ಓಟಿಪಿ ಕಡ್ಡಾಯವಲ್ಲ, ಪಡಿತರ ಪಡೆಯಲು ಬಂದವರಿಗೆ ಎಲ್ಲರಿಗೂ 2 ತಿಂಗಳ ಪಡಿತರ ಆಹಾರ ಧಾನ್ಯ ವಿತರಿಸಲು ಕ್ರಮ ವಹಿಸುವಂತೆ ಆಹಾರ ಇಲಾಖೆ ಉಪನಿರ್ದೇಶಕ ಮಂಟೆ ಸ್ವಾಮಿ ಅವರಿಗೆ ಸೂಚನೆ ನೀಡಿದರು.
ಆಹಾರ ಇಲಾಖೆ ಉಪನಿರ್ದೇಶಕ ಮಂಟೆ ಸ್ವಾಮಿ ಮಾಹಿತಿ ನೀಡಿ, 208 ನ್ಯಾಯಬೆಲೆ ಅಂಗಡಿಗಳಲ್ಲಿ ಬಿಪಿಎಲ್ ಅಂತ್ಯೋದಯ ಕಾರ್ಡುದಾರರಿಗೆ ಆಹಾರ ವಿತರಿಸಲಾಗುತ್ತಿದೆ. ಜಿಲ್ಲೆಯ 681 ಅಂಗಡಿಗಳ ಪೈಕಿ, 410 ಅಂಗಡಿಗಳಲ್ಲಿ ಅಕ್ಕಿ ಮಾತ್ರ ಲಭ್ಯವಿದ್ದು, ಇಂದು ನಾಳೆ ಶಿವಮೊಗ್ಗದಿಂದ ಗೋದಿ ಬುರುತ್ತಿದ್ದು, ಅಕ್ಕಿಯೊಂದಿಗೆ ಗೋದಿಯನ್ನು ವಿತರಿಸಲಾಗುತ್ತದೆ ಎಂದರು.
ಕೃಷಿ ಪರಿಕರ ಅಂಗಡಿ ಕೂಡಲೇ ತೆರೆಯಿರಿ
ಕೃಷಿ ಹಾಗು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಅಗತ್ಯ ಪರಿಕರಗಳ ಅಂಗಡಿಗಳು ಈ ಕೂಡಲೇ ತೆರೆಯಬೇಕು. ಇದರ ಬಗ್ಗೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಗಮನಹರಿಸಬೇಕು ಎಂದರು. ವಲಸೆ ಕಾರ್ಮಿಕರಿಗೆ ಆರೋಗ್ಯ ತಪಾಸಣೆ, ಕುಡಿಯುವ ನೀರು, ಆಹಾರ ಒದಗಿಸಬೇಕು. ವಲಸೆ ಕಾರ್ಮಿಕರು ಹಾಗೂ ನಿರಾಶ್ರಿತರಿಗೆ ಸ್ಥಳಿಯ ದಾನಿಗಳ ನೆರವಿನಿಂದ ಅಗತ್ಯ ಬಟ್ಟೆಗಳನ್ನು ಪೂರೈಸಲು ಕ್ರಮ ವಹಿಸಿ, ಒಂದು ವೇಳೆ ದಾನಿಗಳು ಸಿಗದಿದ್ದರೆ ಎಸ್‍ಡಿಆರ್‍ಎಫ್ ನಿಧಿಯಿಂದ ಪಂಚೆ ಅಂಗಿ ಟವಲ್, ಮಹಿಳೆಯರಿಗೆ ಸೀರೆ ನೀಡಿ ಹಾಗೂ ವಲಸೆ ಕಾರ್ಮಿಕರಿಗೆ ಸೂಕ್ತ ಆಪ್ತ ಸಮಾಲೋಚನೆ ಮಾಡಿ, ಹಾಗೂ ದೇವಾಲಯಗಳಲ್ಲಿ ದೊರೆಯುವ ಸೀರೆಗಳನ್ನು ಅಗತ್ಯವಿರುವವರಿಗೆ ನೀಡಲು ತಿಳಿಸಿದರು. ಸಂಘ ಸಂಸ್ಥೆಗಳು ಕೆಲವೆಡೆ ಊಟ ತಿಂಡಿ ಸರಬರಾಜು ಮಾಡುತ್ತಿದ್ದು, ಅಂತವರು ಅಪರ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯಬೇಕು. ಹಾಗೂ ಆಹಾರ ಸುರಕ್ಷತೆ ಪರೀಕ್ಷಕರು ಆಹಾರವನ್ನು ಪರೀಕ್ಷಿಸಬೇಕು ಎಂದರು.
ಸಾಮಾಜಿಕ ಅಂತರ ಅಗತ್ಯ
ಬ್ಯಾಂಕ್‍ಗಳ ಸಭೆ ಮಾಡಿ, ಪಿಎಂ ಕಿಸಾನ್, ಜನಧನ್ ಹಾಗೂ ವಿವಿಧ ಸಾಮಾಜಿಕ ಭದ್ರತೆ ಪಿಂಚಣಿ ಪಡೆಯುವವರು ಬ್ಯಾಂಕುಗಳಲ್ಲಿ ಗುಂಪು ಗೂಡದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯನಿರ್ವಹಿಸಬೇಕು. ಹಾಗೂ ಎಟಿಎಂ ಮುಂದೆ ಸರತಿ ಸಾಲು ಇದ್ದರೆ, ಅಲ್ಲಿ ಒಬ್ಬರು ಪೋಲಿಸರನ್ನು ನಿಯೋಜಿಸುವಂತೆ ತಿಳಿಸಿದರು.
ಕೆಲವಂದು ಹೊಲ್‍ಸೆಲ್ ಅಂಗಡಿಗಳಿಂದ ಕಿರಾಣಿ ಅಂಗಡಿಗಳಿಗೆ ಸಾಮಗ್ರಿಗಳು ಎಂದು ದೂರುಗಳಿದ್ದು, ತಕ್ಷಣ ಅವರಿಗೆ ಸಾಮಗ್ರಿಗಳನ್ನು ಪೂರೈಕೆ ಆಗುವಂತೆ ನೋಡಿಕೊಳ್ಳಬೇಕು.
ಕ್ವಾರಂಟೈನ್‍ಲ್ಲಿರುವವರಿಗೆ ಅಗತ್ಯ ಮೂಲಭೂತ ಸೌಕರ್ಯ ನೀಡಬೇಕು. ಇದಕ್ಕಾಗಿ ಕೆಲ ಲಾಡ್ಜ್ ಗಳನ್ನು ಗುರುತಿಸಲಾಗಿದ್ದು, ಅವುಗಳ ಮೇಲುಸ್ತುವಾರಿಗೆ ಸುರೇಶ ರೆಡ್ಡಿ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ಮಾಡಲಾಗಿದೆ.
ಲಾಕ್‍ಡೌನ್ ಹಿನ್ನೆಲೆಯಲ್ಲಿ ಯಾವುದೇ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳ ನೆರವು ಬೇಕಾದಲ್ಲಿ ಟೋಲ್‍ಪ್ರೀ ಸಂಖ್ಯೆ 1077 ನಂಬರಿಗೆ ಕರೆ ಮಾಡಬಹುದು.
300 ವಾಹನ ಸೀಜ್
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಕಅನಗತ್ಯವಾಗಿ ಓಡಾಡುತ್ತಿದ್ದವರ ವಿರುದ್ದ ಕ್ರಮ ಕೈಗೊಳ್ಳಲಾಗಿದ್ದು ಇದುವರೆಗೆ 300 ವಾಹನಗಳನ್ನು ಸೀಜ್ ಮಾಡಲಾಗಿದೆ ಎಂದರು. ಜಿಲ್ಲೆಯಾದ್ಯಂತ 19 ಚೆಕ್ ತೆರೆಯಲಾಗಿದ್ದು, ಜಿಲ್ಲೆಗೆ ಬರುವ ಪ್ರಯಾಣಿಕರನ್ನು ತಪಾಸಣೆ ಮಾಡಿ ಬಿಡಲಾಗುತ್ತಿದೆ. ಪಾಸ್ ಇದ್ದವರಿಗೆ ಹಾಗೂ ಗುರುತಿನ ಚೀಟಿ ನೋಡಿ ಬಿಡಲಾಗುತ್ತಿದೆ ಹಾಗೂ ಕಳ್ಳಬಟ್ಟಿ ತಯಾರಿಕರನ್ನು ಬಂಧಿಸಿದ್ದು, ಅಬಕಾರಿ ನಿಯಮದಡಿ ಕೇಸ್ ದಾಖಲಿಸಲಾಗಿದೆ.
ಡಾ.ರಾಘವೇಂದ್ರಸ್ವಾಮಿ ಮಾತನಾಡಿ, ಚಿಗಟೇರಿ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿದ್ದು ಪ್ರಸ್ತುತ 70 ಕೋವಿಡ್ ಸೋಂಕಿತರಿಗೆ ಚಿಕಿತ್ಸೆಗೊಳಿಪಡುವಷ್ಟು ಎಲ್ಲ ರೀತಿಯ ವೈದ್ಯಕೀಯ, ಸಾಮಗ್ರಿಗಳು, ಮಾನವ ಸಂಪನ್ಮೂಲವನ್ನು ಸಿದ್ದವಿಟ್ಟುಕೊಳ್ಳಲಾಗಿದೆ ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಮಾತನಾಡಿ, ಐಸೋಲೇಷನ್ ಕ್ವಾರಂಟೈನ್ ಹಾಗೂ ಹೊಮ್ ಕ್ವಾರಂಟೈನ್ ಅವಧಿ ಮುಗಿದಿರುವವರಿಗೆ ಕೇಂದ್ರ ಸರ್ಕಾರದ ನಿರ್ದೇಶನದಂತೆ ಅವರು ಪೂರೈಸಿರುವ ಬಗ್ಗೆ ದೃಡೀಕರಣ ಪತ್ರವನ್ನು ನೀಡಲಾಗುವುದು. ಹಾಗೂ ಕೋವಿಡ್-19 ಕಾರ್ಯದಲ್ಲಿ ಭಾಗವಹಿಸುವ ಆರೋಗ್ಯ ಸಿಬ್ಬಂದಿಗಳಿಗೆ ಐಇಸಿ ತರಬೇತಿ ನೀಡಲಾಗಿದೆ ಹಾಗು ಅಗತ್ಯವಿರುವ ಔಷದಿ ಮಾತ್ರಗಳು ಲಭ್ಯವಿವೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಸಿಇಓ ಪದ್ಮ ಬಸವಂತಪ್ಪ, ಎಡಿಸಿ ಪೂಜಾರ್ ವೀರಮಲ್ಲಪ್ಪ, ಎಸಿ ಮಮತಾ ಹೊಸಗೌಡರ್, ಐಆರ್‍ಎಸ್ ನೋಡಲ್ ಅಧಿಕಾರಿ ಪ್ರಮೋದ ನಾಯಕ್, ಪಾಲಿಕೆ ಆಯುಕ್ತರಾದ ವಿಶ್ವನಾಥ ಮುದಜ್ಜಿ, ಸ್ಮಾರ್ಟ್‍ಸಿಟಿ ಎಂಡಿ ರವಿಂದ್ರ ಮಲ್ಲಾಪುರ, ವಿಶೇಷ ಭೂಸ್ವಾಧಿನಾಧಿಕಾರಿ ರೇಶ್ಮಾ ಹಾನಗಲ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷೀಕಾಂತ ಬೊಮ್ಮಣ್ಣರ ಸೇರಿದಂತೆ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.



