ಡಿವಿಜಿ ಸುದ್ದಿ, ದಾವಣಗೆರೆ: ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಹಿನ್ನೆಲೆ ಜಿಲ್ಲೆಯಲ್ಲಿ ಅಗತ್ಯ ವಸ್ತು, ಸೇವೆ ನೀಡುವುದಕ್ಕೆ ಯಾವುದೇ ತೊಂದರೆ ಇಲ್ಲ. ಸೇವೆ ನೀಡುವ ಸಂದರ್ಭದಲ್ಲಿ ಏನಾದ್ರೂ ತೊಂದರೆ ಇದ್ದಲ್ಲಿ ತಕ್ಷಣ ನಮ್ಮ ಗಮನ ತರಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ವರ್ತಕರಿಗೆ ತಿಳಿಸಿದರು.
ಇಂದು ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಜಿಲ್ಲೆಯ ವರ್ತಕರೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಗತ್ಯ ಸೇವೆ ನೀಡುವ ಸಿಬ್ಬಂದಿಗಳು ಮತ್ತು ಹಮಾಲರಿಗೆ ಮಹಾನಗರಪಾಲಿಕೆ, ಡಿವೈಎಸ್‍ಪಿ, ತಹಶೀಲ್ದಾರ್ ಕಚೇರಿಗಳಲ್ಲಿ ಪಾಸ್‍ಗಳನ್ನು ವಿತರಿಸಲಾಗುವುದು. ತನ್ನ ಸಿಬ್ಬಂದಿಗಳ ಆಧಾರ್ ಕಾರ್ಡ್ ಹಾಗೂ ವಿವರಗಳೊಂದಿಗೆ ಮನವಿ ಸಲ್ಲಿಸಿ ಪಡೆಯಬಹುದು ಎಂದರು.
ವರ್ತಕರ ಸಂಘದ ಕಾರ್ಯದರ್ಶಿ ಶಂಭುಲಿಂಗಪ್ಪ ಮಾತನಾಡಿ, ಈಗ ನಮ್ಮಲ್ಲಿ ಲಭ್ಯವಿರುವ ದಾಸ್ತಾನು ಎರಡರಿಂದ ಮೂರು ದಿನಗಳಿಗೆ ಸಾಕಾಗಲಿದ್ದು, ಬೇಳೆ, ಎಣ್ಣೆ ಮತ್ತು ಮಸಾಲೆ ಪದಾರ್ಥಗಳು ಹೊರಗಿನಿಂದ ಬರಬೇಕಿದೆ. ಅಲ್ಲಿಯೂ ಕಾರ್ಮಿಕರ ಕೊರತೆಯಿಂದ ಲಾರಿಗಳು ಓಡಾಡುತ್ತಿಲ್ಲ. ಹಾಗೂ ಇಲ್ಲಿ ಬರುವ ಲಾರಿ ಚಾಲಕರು ಹಾಗೂ ಕ್ಲೀನರ್ ಇತರೆ ಸಿಬ್ಬಂದಿಗಳಿಗೆ ಊಟದ ಸಮಸ್ಯೆ ಇದೆ. ಹಾಗಾಗಿ ಅವರು ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದರು.
ಮೇಯರ್ ಬಿ.ಜೆ.ಅಜಯಕುಮಾರ್ ಪ್ರತಿಕ್ರಿಯಿಸಿ, ಇಂದು ಹೋಟೆಲ್ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದು,
ಅಲ್ಲಲ್ಲಿ ಕನಿಷ್ಟ 25 ಹೋಟೆಲ್‍ಗಳನ್ನು ತೆರೆಯಲು ಒಪ್ಪಿಕೊಂಡಿದ್ದು, ಈ ಹೋಟೆಲ್‍ಗಳ ವಿವರವನ್ನು ತಮಗೆ ತಿಳಿಸಲಾಗುವುದು ಎಂದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಅವಲಕ್ಕಿ ಹಾಗೂ ಮಂಡಕ್ಕಿ ಮಿಲ್‍ಗಳನ್ನು ನಾಳೆಯಿಂದಲೇ ಆರಂಭಿಸಲು ಆದೇಶಿಸಿದ್ದು, ಎಲ್ಲ ಅವಶ್ಯಕ ಸೇವೆಗಳು ನಿರಾಂತಕವಾಗಿ ಸಾರ್ವಜನಿಕರಿಗೆ ಲಭಿಸಲಿದ್ದು, ಯಾವುದೇ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದರು.
ಕೇಂದ್ರ ಸರ್ಕಾರವು ಎಲ್ಲ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿ ಅಗತ್ಯ ಸೇವೆಗಳನ್ನು ನಿರಾಂತಕವಾಗಿ ನಿರ್ವಹಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡುತ್ತಿದ್ದೇವೆ ಎಂದರು.
ಗಂಗಾವತಿ, ರಾಯಚೂರು, ಕೊಪ್ಪಳ ಭಾಗದಿಂದ ಅಕ್ಕಿ ಸರಬರಾಜಾಗಲಿದ್ದು, ಆ ಭಾಗದ ಡಿಸಿಯವರೊಂದಿಗೆ, ಗೋಧಿ ರಾಜಸ್ಥಾನದಿಂದ ಬರಲಿದ್ದು ಅಲ್ಲಿಯ ಡಿಸಿಯವರೊಂದಿಗೆ ಮಾತನಾಡಿ ಸಹಕರಿಸಬೇಕೆಂದು ಮನವಿ ಮಾಡುತ್ತೇವೆ ಎಂದರು.
ವರ್ತಕರ ಸಂಘದ ಪದಾಧಿಕಾರಿಗಳು, ತಮ್ಮ ಕಾರ್ಮಿಕರಿಗೆ ಒಂದು ಸಾವಿರ ಮಾಸ್ಕ್ ಮತ್ತು ಸ್ಯಾನಿಟೈಸರ್‍ಗಳನ್ನು ಒದಗಿಸುವಂತೆ ಮನವಿ ಮಾಡಿದರು. ಸಭೆಯಲ್ಲಿ ಜಿ.ಪಂ. ಸಿಇಓ ಪದ್ಮಾ ಬಸವಂತಪ್ಪ, ಎಡಿಸಿ ಪೂಜಾರ ವೀರಮಲ್ಲಪ್ಪ, ಎಸಿ ಮಮತಾ ಹೊಸಗೌಡರ್, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಡಿಎಸ್ ಡಾ.ನಾಗರಾಜ್, ಇತರೆ ಅಧಿಕಾರಿಗಳು ಹಾಜರಿದ್ದರು.



