ಡಿವಿಜಿ ಸುದ್ದಿ, ದಾವಣಗೆರೆ: ಕಳಪೆ ಬಿತ್ತನೆ ಬೀಜ ಮಾರಾಟದ ಮೇಲೆ ತೀವ್ರ ನಿಗಾ ವಹಿಸಬೇಕು. ಇಂತಹ ಪ್ರಕರಣಗಳು ಕಂಡುಬಂದರೆ ಕಠಿಣ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೃಷಿ ಇಲಾಖೆ ಜಿಲ್ಲಾ ಮಟ್ಟದ ಟಾಸ್ಕ್‍ಪೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳಪೆ ಬಿತ್ತನೆ ಬೀಜದ ಬಗ್ಗೆ ರೈತರಿಂದ ಎಲ್ಲಿಯೂ ಕೂಡ ದೂರು ಬರಬಾರದು. ಒಂದು ವೇಳೆ ದೂರು ಬಂದಲ್ಲಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಯಾವುದೇ ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಬಾರದಂತೆ ನೋಡಿಕೊಳ್ಳಬೇಕು. ಎಲ್ಲ ಕಡೆಗಳಲ್ಲಿಯೂ ಸರಿಯಾಗಿ ವಿತರಣೆ ಮಾಡಬೇಕು. ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆಯಾಗಬಾರದು. ಆಗಸ್ಟ್ ತಿಂಗಳವರೆಗೂ ದಾಸ್ತಾನು ಇರುವಂತೆ ನೋಡಿಕೊಂಡು ಸಮಸ್ಯೆಯಾಗದಂತೆ ಎಚ್ಚರ ವಹಿಸಬೇಕು. ಜೊತೆಗೆ ಖಾಸಗಿ ಅಂಗಡಿಗಳಲ್ಲಿ ಬಿತ್ತನೆ ಬೀಜಗಳು, ರಸಗೊಬ್ಬರಗಳು ಹೆಚ್ಚಿನ ಬೆಲೆಗೆ ಮಾರಾಟ ಆಗದಂತೆ ಕ್ರಮ ವಹಿಸಬೇಕು. ಯಾವುದೇ ಕಾರಣಕ್ಕೂ ರೈತರು ಅನ್ಯಾಯಕ್ಕೆ ಒಳಗಾಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಗಳೂರಿನಲ್ಲಿ ಕಳಪೆ ಮಟ್ಟದ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ ಎಂಬುದರ ಬಗ್ಗೆ ರೈತರಿಂದ ದೂರುಗಳಿರುವ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ಮಳೆ ಬಂದು ಬೀಜ ಕಪ್ಪಾಗಿದ್ದವು. ಅವು ಕಳಪೆ ಆಗಿರಲಿಲ್ಲ ಎಂದರು.
ರೈತರಿಗೆ ವಿತರಣೆ ಮಾಡಲಾದ ಬೀಜಗಳನ್ನು ಹಿಂಪಡೆದು ಬೇರೆ ಬಿತ್ತನೆ ಬೀಜಗಳನ್ನು ವಿತರಿಸಲಾಗಿದೆ. ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಎಲ್ಲ ಸಹಾಯಕ ಕೃಷಿ ಅಧಿಕಾರಿಗಳಿಗೆ ಕಳಪೆ ಗುಣಮಟ್ಟದ ಬಿತ್ತನೆ ಬೀಜದ ಬಗ್ಗೆ ನಿಗಾವಹಿಸಲು ನಿರ್ದೇಶನ ನೀಡಲಾಗಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಒಟ್ಟು ಬಿತ್ತನೆ ಬೀಜ ಮುಂಗಾರು ಬೇಡಿಕೆ 40,381 ಕ್ವಿಂಟಾಲ್ ಅವಶ್ಯಕವಿತ್ತು. ದಾಸ್ತಾನು 41,647 ಕ್ವಿಂಟಾಲ್ ಇದ್ದು, 37,500 ಕ್ವಿಂಟಾಲ್ ವಿತರಣೆ ಮಾಡಲಾಗಿದೆ. 4,147 ಕ್ವಿಂಟಾಲ್ ಉಳಿಕೆ ಇದೆ. ಜೊತೆಗೆ ಜುಲೈ ಮಾಹೆಯಲ್ಲಿ 65,286 ಟನ್ ರಸಗೊಬ್ಬರ ದಾಸ್ತಾನು ಇದೆ. 1,800 ಟನ್ ರಸಗೊಬ್ಬರ ಸರಬರಾಜಾಗಿದ್ದು, ಕಾಪು ರಸಗೊಬ್ಬರ ಸೇರಿದಂತೆ ಒಟ್ಟು 81,432 ಟನ್ ರಸಗೊಬ್ಬರ ಲಭ್ಯವಿದೆ. ಈವರೆಗೆ 52,335 ಟನ್ ರಸಗೊಬ್ಬರ ಮಾರಾಟವಾಗಿದ್ದು, 29,096 ಟನ್ ರಸಗೊಬ್ಬರ ದಾಸ್ತಾನು ಇದೆ. ಇಲ್ಲಿಯವರೆಗೆ ಯಾವುದೇ ರಸಗೊಬ್ಬರದ ಕೊರತೆ ಇರುವುದಿಲ್ಲ ಎಂದು ಸಭೆಗೆ ವಿವರಣೆ ನೀಡಿದರು.



