Connect with us

Dvg Suddi-Kannada News

 ಸಾರ್ವಜನಿಕ ಸ್ಥಳದಲ್ಲಿ ಜಾಹೀರಾತು ಅಂಟಿಸಿದರೆ  ದಂಡ : ಜಿಲ್ಲಾಧಿಕಾರಿ

ದಾವಣಗೆರೆ

 ಸಾರ್ವಜನಿಕ ಸ್ಥಳದಲ್ಲಿ ಜಾಹೀರಾತು ಅಂಟಿಸಿದರೆ  ದಂಡ : ಜಿಲ್ಲಾಧಿಕಾರಿ

ಡಿವಿಜಿ ಸುದ್ದಿ, ದಾವಣಗೆರೆ : ಸ್ಮಾರ್ಟ್‍ಸಿಟಿ ಕಾಮಗಾರಿ ನಡೆಯುತ್ತಿರುವ ಸಾಮಗ್ರಿಗಳ ಮೇಲೆ ಮತ್ತು ಸಾರ್ವಜನಿಕ ಸ್ಥಳದಲ್ಲಿ ಖಾಸಗಿ ಜಾಹಿರಾತು ಅಂಟಿಸಿದರೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಕೆ ನೀಡಿದರು.

ಸೋಮವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರ ಅವಹಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಅಭಿವೃದ್ಧಿಗಾಗಿ ನಗರದಲ್ಲಿ ಸ್ಥಳೀಯ ಬಸ್ ನಿಲ್ದಾಣ, ರಸ್ತೆ ಕಾಮಗಾರಿಗಳು ಸೇರಿದಂತೆ ಹಲವು ಅಭಿವೃದ್ದಿ ಕಾಮಗಾರಿಗಳೂ ನಡೆಯುತ್ತಿದ್ದು, ಖಾಸಗಿ ಬಸ್ ನಿಲ್ದಾಣದ ಕಾಮಗಾರಿ ಅನುಕೂಲಕ್ಕಾಗಿ ಹಾಕಿರುವ ತಗಡಿನ ಶೀಟ್‍ಗಳಲ್ಲಿ ಜಾಹಿರಾತು ಫಲಕಗಳಿಂದ ತುಂಬಿಹೋಗಿವೆ.

ಹೀಗೆ ಅನಧಿಕೃತವಾಗಿ ಅನುಮತಿಯಿಲ್ಲದೇ ಜಾಹಿರಾತು ಮತ್ತು ಪ್ರಚಾರ ಮಾಡಿಕೊಳ್ಳುತ್ತಿರುವುದು ಕಾನೂನು ಬಾಹಿರ ಕೆಲಸ. ಇಂತಹ ಜಾಹಿರಾತುಗಳನ್ನು ತೆರವುಗೊಳಿಸಿ ಸಂಬಂಧಿಸಿದವರಿಗೆ ದಂಡ ವಿಧಿಸಲಾಗುವುದು ಎಂದು ಸೂಚನೆ ನೀಡಿದರು.

ಸ್ಮಾರ್ಟ್ ಸಿಟಿ ಅನುದಾನದಲ್ಲಿ ಕಟ್ಟಿರುವ ಇ-ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ಅವುಗಳ ಬಳಕೆಯಾಗುತ್ತಿಲ್ಲ. ಮತ್ತು ಸ್ಮಾರ್ಟ್‍ಸಿಟಿ ಕಾಮಗಾರಿಯಲ್ಲಿ ಉತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಬಳಸುತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಶ್ರೇಯಸ್ ದೂರು ನೀಡಿದರು.

ಮಹಾನಗರಪಾಲಿಕೆ ವತಿಯಿಂದ ವಾರಕ್ಕೊಮ್ಮೆ ನೀರು ಬಿಡುತ್ತಾರೆ. ಆದ್ದರಿಂದ ಈ ರೀತಿ ಸಮಸ್ಯೆಯಾಗಿದೆ. ಇನ್ನು 2 ದಿನಗಳಲ್ಲಿ ಎಲ್ಲಾ ಇ-ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಸ್ಮಾರ್ಟ್‍ಸಿಟಿ ಯೋಜನೆಯ ಅಧಿಕಾರಿ ಉತ್ತರಿಸಿದರು.

ಕಕ್ಕರಗೊಳ್ಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 84 ಜನ ವಿಕಲಚೇತನರಿದ್ದು ಕೇವಲ 20 ಜನರಿಗೆ ಮಾತ್ರ ವಿಕಲಚೇತನ ವೇತನ ಬರುತ್ತಿದೆ. ಉಳಿದ 60 ಜನರಿಗೆ ಇದುವರೆಗು ಮಾಸಿಕ ವೇತನ ಬರುತ್ತಿಲ್ಲ. ತಮ್ಮ ಗ್ರಾಮದ ಎಲ್ಲಾ ವಿಕಲಚೇತನರಿಗೆ ವೇತನ ಮಾಡಿಸಿಕೊಡಿ ಎಂದು ವಿಕಲಚೇತನರು  ಮನವಿ ಸಲ್ಲಿಸಿದರು. ಕಕ್ಕರಗೊಳ್ಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ದಿನದ ಅಭಿಯಾನ ನಡೆಸಿ, ಎಲ್ಲ ವಿಕಲಚೇತನರಿಗೆ ಪಿಂಚಣಿ ಮಾಡಿಸುವಂತೆ ತಹಶೀಲ್ದಾರರಿಗೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಚನ್ನಗಿರಿ ತಾಲ್ಲೂಕು ಚಿರಡೋಣಿ  ಗ್ರಾಮದಲ್ಲಿ ಸಕಾಲ ಯೋಜನೆಯನ್ನು ಜಾರಿಗೆ ತರಬೇಕು. ಗ್ರಾಮಗಳಲ್ಲಿ ಆಸ್ಪತ್ರಗೆ ವೈದ್ಯರನ್ನು, 108 ಆಂಬುಲೆನ್ಸ್ ವಾಹನ ನಿಯೋಜಿಸಬೇಕು ಮತ್ತು ಚಿರಡೋಣಿ ಹಾಗೂ ದೊಡ್ಡಘಟ್ಟ ಮಾರ್ಗವಾಗಿ ಕೆ.ಎಸ್.ಆರ್.ಟಿ.ಸಿ ಬಸ್ ವ್ಯವಸ್ಥೆ ಮಾಡಿಕೊಡಬೇಕು. ಜೊತೆಗೆ ಚಿರಡೋಣಿ ಮತ್ತು ದೊಡ್ಡಘಟ್ಟ ಮಧ್ಯೆ ಹಳ್ಳದ ಮೇಲ್ಸೇತುವೆ ಹಾಳಾಗಿದ್ದು ಪುನರ್‍ನಿರ್ಮಿಸಿಕೊಡಬೇಕೆಂದು ರಾಯಪ್ಪ  ಮನವಿ ಸಲ್ಲಿಸಿದರು. ಎಸಿ ಅವರು ತಹಶೀಲ್ದಾರರೊಂದಿಗೆ ಹೋಗಿ ಹಳ್ಳದ ಮೇಲುಸೇತುವೆ ಪರಿಶೀಲನೆ ನಡೆಸುವಂತೆ ತಿಳಿಸಿದರು.

ನರದ ಇಂಡಸ್ಟ್ರಿಯಲ್ ಏರಿಯಾದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹತ್ತಿರ ಉದ್ಯಾನವನಕ್ಕಾಗಿ ಮೀಸಲಿಟ್ಟಿರುವ ಜಾಗದಲ್ಲಿ ಕಾನೂನು ಬಾಹಿರವಾಗಿ ನಿವೇಶನಗಳನ್ನು ನಿರ್ಮಿಸಿ ಮಾರಾಟ ಮಾಡಲಾಗುತ್ತಿದೆ. ಇದರ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಮಲ್ಲಿಕಾರ್ಜುನ್ ಇಂಗಳೇಶ್ವರ್ ದೂರು ನೀಡಿದರು. ಈ ದೂರಿಗೆ ಸಂಬಂಧಿಸಿದಂತೆ ಅಗತ್ಯ ದಾಖಲೆ ನೀಡಿ  ಅವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಪಿ ಮುದಜ್ಜಿ, ದೂಡಾ ಆಯುಕ್ತ ಬಿ.ಟಿ ಕುಮಾರಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಘವೇಂದ್ರಸ್ವಾಮಿ, ಡಿಡಿಪಿಈ ಪರಮೇಶ್ವರಪ್ಪ, ಆಹಾರ ಮತ್ತು ನಾಗರೀಕರ ಸರಬರಾಜು ಇಲಾಖೆಯ ಜಂಡಿ ನಿರ್ದೇಶಕ ಮಂಟೆಸ್ವಾಮಿ, ದಾವಣಗೆರೆ ತಾಲ್ಲೂಕು ತಹಶೀಲ್ದಾರ್ ಸಂತೋಷ್‍ಕುಮಾರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top