ಡಿವಿಜಿ ಸುದ್ದಿ, ದಾವಣಗೆರೆ : ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆ ಇನ್ನುಷ್ಟು ಕಟ್ಟುನಿಟ್ಟಾದ ಕ್ರಮ ಪಾಲಿಸಲು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅವರಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದರು.
ಎಲ್ಲ ಚೆಕ್‍ಪೋಸ್ಟ್‍ಗಳಲ್ಲಿ ಹೆಚ್ಚು ತಪಾಸಣೆ ನಡೆಸಬೇಕು. ಜೊತೆಗೆ ನಗರದ ಒಳಗಡೆ ಬರುವ ಹಾಗೂ ಹೊರಗಡೆ ಹೋಗುವವರ ಬಗ್ಗೆ ನಿಗಾ ವಹಿಸಬೇಕು. ಕಂಟೈನ್‍ಮೆಂಟ್ ಜೋನ್ ಅಲ್ಲಿರುವವರ ಎಲ್ಲ ಜನರ ತಪಾಸಣೆ ಮಾಡಲು ಈಗಾಗಲೇ ನಿರ್ದೇಶನ ಹೊರಡಿಸಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಅಧಿಕಾರಿಗಳು ಸರ್ಕಾರದ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಅಧಿಕಾರಿಗಳು ಯುದ್ದೋಪಾದಿಯಲ್ಲಿ ಕೆಲಸ ಮಾಡಬೇಕು. ಕೊರೊನಾ ನಿಯಂತ್ರಣಕ್ಕೆ ಎಲ್ಲರೂ ಹೋರಾಡಬೇಕಿದೆ. ಕೊರೊನಾ ಸೋಂಕಿನ ಮೂಲ ಪತ್ತೆ ಬಗ್ಗೆ ಎಸ್‍ಪಿ ಅವರು ಈಗಾಗಲೇ ಕ್ರಮ ಕೈಗೊಂಡಿದ್ದಾರೆ. ಈರುಳ್ಳಿ ಮಾರುವ ವ್ಯಕ್ತಿಯಿಂದ ಸೋಂಕು ಕಂಡು ಬಂದಿದೆ ಎಂದರು.
ಚಿಗಟೇರಿ ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆ ಎಂದು ಗುರುತಿಸಲಾಗಿದ್ದು ಕೋವಿಡ್ ಚಿಕಿತ್ಸೆಗಾಗಿ ಮಾತ್ರ ಸೀಮಿತಗೊಳಿಸಲಾಗುವುದು. ಕೋವಿಡ್ ಬಿಟ್ಟು ಉಳಿದ ಕಾಯಿಲೆಗಳಿಗೆ ಬಾಪೂಜಿ, ಎಸ್‍ಎಸ್ ಆಸ್ಪತ್ರೆ ಸೇರಿದಂತೆ ಬೇರೆ ಆಸ್ಪತ್ರೆಗಳಲ್ಲಿ ಮಾಡಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಬೇರೆ ಕಾಯಿಲೆಗಳಿಗೆ ತೋರಿಸಿಕೊಳ್ಳಲು ಆಸ್ಪತ್ರೆಗೆ ಬರಲು ಜಿಲ್ಲೆಯ ಜನರು ಭಯಬೀತರಾಗಿದ್ದರು. ಈ ನಿಟ್ಟಿನಿಲ್ಲಿ ಪ್ರತ್ಯೇಕವಾಗಿ ನಾನ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸೂಚನೆ ನೀಡಲಾಗಿದೆ ಎಂದರು.
ಕಳೆದ ಬಾರಿ ಸಭೆ ಮಾಡಿ ನಿರ್ಗಮಿಸಿದ ಸಂದರ್ಭದಲ್ಲಿ ದಾವಣಗೆರೆ ಗ್ರೀನ್ ಜೋನ್ ಇತ್ತು. ಕೆಲವೇ ದಿನಗಳಲ್ಲಿ ರೆಡ್ ಜೋನ್ ಆಗಿ ಮಾರ್ಪಟ್ಟಿದೆ. ಇದು ನನಗೂ ಕೂಡ ಆತಂಕಪಡುವಂತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಮನವಿ ಮಾಡುತ್ತಿದ್ದೇನೆ. ಕೊರೊನಾ ಎಂಬ ಮಾರಕ ರೋಗ ನಿಯಂತ್ರಣಕ್ಕೆ ಜಿಲ್ಲೆಯ ಜನತೆ ಸಹಕರಿಸಬೇಕು ಎಂದರು.
ಜಿಲ್ಲಾಧಿಕಾರಿಗಳೂ, ಪೊಲೀಸ್ ವರಿಷ್ಟಾಧಿಕಾರಿಗಳು ಹಾಗೂ ಎಲ್ಲ ಅಧಿಕಾರಿಗಳ ತಂಡ ಸೇರಿ ಒಗ್ಗಟ್ಟಾಗಿ ಸೇರಿಕೊಂಡು ಕೊರೊನಾ ಎದುರಿಸುವ ಕೆಲಸ ಮಾಡಬೇಕಾಗಿದೆ. ಪ್ರತಿನಿತ್ಯ ಜಿಲ್ಲಾಧಿಕಾರಿ ಹಾಗೂ ಎಸ್‍ಪಿ ಅವರ ಜೊತೆ ಸಂಪರ್ಕದಲ್ಲಿ ಇದ್ದು, ಮಾಹಿತಿ ಪಡೆಯುತ್ತಿದ್ದೇನೆ. ಸಿಎಂ ಅವರು ಸಹ ನಮ್ಮ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಕೋವಿಡ್ ನಿರ್ಮೂಲನೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ಲ್ಯಾಬ್ ಮಾಡುವ ಬಗ್ಗೆ ಮಾಹಿತಿ ನೀಡಿದ್ದೇವು. ಅದರಂತೆ ಇನ್ನೆರಡು ದಿನದಲ್ಲಿ ಆರಂಭಿಸಲು ಸಚಿವರು ಅನುಮತಿ ನೀಡಿದ್ದಾರೆ. ಆ ನಿಟ್ಟಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ಲ್ಯಾಬ್ ಸಹಕಾರಿಯಾಗಲಿದೆ ಎಂದರು.
.
ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ ಮಾತನಾಡಿ, ಕೋವಿಡ್‍ಗಾಗಿ ಸಿಮೀತವಾಗಿವಾಗಿರುವ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯವರು ನಾನ್ ಕೋವಿಡ್ ಆಸ್ಪತ್ರೆಗಳಲ್ಲಿ ಕೆಲಸ ಮಾಡಬಾರದು. ಇದು ಸ್ಪಷ್ಟವಾದ ಮಾರ್ಗಸೂಚಿಯಾಗಿದೆ ಎಂದು ಹೇಳಿದರು.
ಕೋವಿಡ್ ಆಸ್ಪತ್ರೆಯಲ್ಲಿ ಕೆಲಸ ಮಾಡುವಂತಹ ಯಾವುದೇ ಆರೋಗ್ಯ ಸಿಬ್ಬಂದಿಗಳು, ವೈದ್ಯರು ನಾನ್ ಕೋವಿಡ್ ಆಸ್ಪತ್ರೆಗಳಲ್ಲಿ ಅದೇ ಸಮಯದಲ್ಲಿ ಕೆಲಸ ಮಾಡುವಂತಿಲ್ಲ. ಜೊತೆಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರು ಹಾಗೂ ರೋಗದ ಲಕ್ಷಣ ಇರುವವರನ್ನು ಆಸ್ಪತ್ರೆಯಲ್ಲಿಯೇ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕರಾದ ಶಾಮನೂರು ಶಿವಶಂಕರಪ್ಪ, ಮಾಡಾಳ್ ವಿರೂಪಾಕ್ಷಪ್ಪ, ಪ್ರೊ.ಲಿಂಗಣ್ಣ, ಎಸ್.ವಿ.ರಾಮಚಂದ್ರ, ಎಸ್.ಎ.ರವೀಂದ್ರನಾಥ್, ಮೇಯರ್ ಅಜಯ್ ಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್‍ಪಿ ಹನುಮಂತರಾಯ, ಸಿಇಒ ಪದ್ಮಾ ಬಸವಂತಪ್ಪ ಇದ್ದರು.