ನವದೆಹಲಿ: ಕೊರೊನಾ ರೋಗದಿಂದ ರಕ್ಷಿಸಿಕೊಳ್ಳುವ ಪಿಪಿಇ ಕಿಟ್ ಉತ್ಪಾದಿಸುತ್ತಿರುವ ವಿಶ್ವದ ಎರಡನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ಅದರಲ್ಲೂ ಬೆಂಗಳೂರು ಪಿಪಿಇ ಉತ್ಪಾದನಾ ಹಬ್ ಮಾರ್ಪಟ್ಟಿದೆ ಎಂದು ಇನ್ವೆಸ್ ಇಂಡಿಯಾ ತಿಳಿಸಿದೆ.
ಮಾರ್ಚ್ 1ರಂದು ಕೊರೊನಾ ವೈರಸ್ ದೇಶಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಭಾರತದಲ್ಲಿ ಪರ್ಸನಲ್ ಪ್ರೊಟೆಕ್ಟಿವ್ ಇಕ್ವಿಪ್‍ಮೆಂಟ್(ಪಿಪಿಇ) ಉತ್ಪಾದಿಸುವ ಒಂದೂ ಕಾರ್ಖಾನೆ ಇರಲಿಲ್ಲ. ಆದರೆ ಮೇ 18ರ ಹೊತ್ತಿಗೆ ಭಾರತ ಪ್ರತಿ ದಿನ 4.5 ಲಕ್ಷ ಪಿಪಿಇ ಕಿಟ್‍ಗಳನ್ನು ಉತ್ಪಾದಿಸಲು ಪ್ರಾರಂಭಿಸಿತು ಎಂಬ ಅಂಶ ಇನ್ವೆಸ್ಟ್ ಇಂಡಿಯಾ ದಾಖಲೆಗಳ ಮೂಲಕ ತಿಳಿದಿದೆ.
ಮಾರ್ಚ್ 30ರಿಂದ ಗಣನೆಗೆ ತೆಗೆದುಕೊಂಡರೆ, ಭಾರತ ಪ್ರತಿ ದಿನ 8 ಸಾವಿರಕ್ಕೂ ಅಧಿಕ ಪಿಪಿಇ ಕಿಟ್‍ಗಳನ್ನು ಉತ್ಪಾದಿಸುತ್ತಿದೆ. ಸುಮಾರು 7 ಸಾವಿರ ಕೋಟಿ ರೂ. ಮೌಲ್ಯದ ಪಿಪಿಇಗಳನ್ನು ಭಾರತದ ಕೈಗಾರಿಕೆಗಳು ಉತ್ಪಾದಿಸಿವೆ. ಈ ಮೂಲಕ ಕೇವಲ 60 ದಿನಗಳಲ್ಲಿ 56 ಪಟ್ಟು ಬೆಳವಣಿಗೆ ಸಾಧಿಸಲಾಗಿದೆ.
ಒಂದು ಪಿಪಿಇ ಕಿಟ್ ಮಾಸ್ಕ್(ಸರ್ಜಿಕಲ್ ಹಾಗೂ ಎನ್-95), ಗ್ಲೌಸ್(ಸರ್ಜಿಕಲ್ ಹಾಗೂ ಎಕ್ಸಾಮಿನೇಶನ್), ಕವರ್, ಗೌನ್‍ಗಳು, ಹೆಡ್ ಕವರ್, ಗಾಗಲ್ಸ್, ಫೇಸ್ ಶೀಲ್ಡ್ಸ್ ಹಾಗೂ ಶೂಗಳನ್ನು ಒಳಗೊಂಡಿದೆ.
ದೇಶದಲ್ಲಿ ಒಟ್ಟು 600ಕ್ಕೂ ಹೆಚ್ಚು ಸರ್ಟಿಫೈಡ್ ಕಂಪನಿಗಳು ಪಿಪಿಇ ಕಿಟ್ ತಯಾರಿಸುತ್ತಿದ್ದು, 2025ರ ವೇಳೆ ಪಿಪಿಇ ಕಿಟ್‍ಗಳ ಮಾರ್ಕೆಟಿಂಗ್ ಪ್ರಮಾಣ 7 ಲಕ್ಷ ಕೋಟಿ ರೂ.(92.5 ಬಿಲಿಯನ್ ಡಾಲರ್)ಗಳಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಪಿಪಿಇ ಕಿಟ್‍ಗಳ ಉತ್ಪಾದನೆ ಹಾಗೂ ಮಾರಾಟದಲ್ಲಿ ಪ್ರಸ್ತುತ ಚೀನಾ ನಂಬರ್ 1 ಸ್ಥಾನದಲ್ಲಿದ್ದು, ಇದೀಗ ಭಾರತದ ಎರಡನೇ ಸ್ಥಾನದಲ್ಲಿದೆ.
ಭಾರತದಲ್ಲಿ 15.96 ಲಕ್ಷ ಪಿಪಿಇ ಕಿಟ್‍ಗಳ ದಾಸ್ತಾನು ಹೊಂದಿದ್ದು, ಇನ್ನೂ 2.22 ಕೋಟಿ ಕಿಟ್‍ಗಳನ್ನು ತಯಾರಿಸಲಾಗುತ್ತಿದೆ. ಬೆಂಗಳೂರು ಪಿಪಿಇ ಉತ್ಪಾದನೆಯ ಹಬ್ ಆಗಿದ್ದು, ದೇಶದ ಉತ್ಪಾದನೆಯಲ್ಲಿ ಶೇ.50ರಷ್ಟು ಕಿಟ್‍ಗಳು ಬೆಂಗಳೂರಿನಲ್ಲಿ ತಯಾರಾಗುತ್ತವೆ.