Connect with us

Dvgsuddi Kannada | online news portal | Kannada news online

ದಾವಣಗೆರೆ ಸಂಪೂರ್ಣ ಸೀಲ್ ಡೌನ್ ಗೆ ಜನರು ಸಹಕಾರ ನೀಡಬೇಕು: ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್

ಪ್ರಮುಖ ಸುದ್ದಿ

ದಾವಣಗೆರೆ ಸಂಪೂರ್ಣ ಸೀಲ್ ಡೌನ್ ಗೆ ಜನರು ಸಹಕಾರ ನೀಡಬೇಕು: ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್

ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಅಗತ್ಯ ವಸ್ತು ಮತ್ತು ಸೇವೆ ಹೊರತುಪಡಿಸಿ ಎಲ್ಲ ರೀತಿಯ ಚಟುವಟಿಕೆ ಸ್ಥಗಿತಗೊಳಿಸಿ ಪಾಸಿಟಿವ್ ಇರುವ ಪ್ರದೇಶಗಳನ್ನು ಸಂಪೂರ್ಣವಾಗಿ ಸೀಲ್‍ಡೌನ್ ಮಾಡುವಂತೆ ಸೂಚಿಸಿದ್ದೇನೆ. ಇದಕ್ಕೆ ಜನರು ಸಹ ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್  ಮನವಿ ಮಾಡಿದರು.

ಕೊರೊನಾ ರೋಗ ನಿಯಂತ್ರಣದಲ್ಲಿ ದಾವಣಗೆರೆ ಗ್ರೀನ್ ಝೋನ್‍ನಲ್ಲಿದೆ ಎಂದು ಘೋಷಣೆಯಾಗುತ್ತಿದ್ದ ಬೆನ್ನಲ್ಲೇ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿ, ಇದೀಗ ರೆಡ್ ಝೋನ್‍ನತ್ತ ಜಿಲ್ಲೆ ಸಾಗಿದೆ.  ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಗಳು ಕೊರೊನಾ ನಿಯಂತ್ರಣ ಮತ್ತು ಲಾಕ್‍ಡೌನ್ ಕಟ್ಟುನಿಟ್ಟಿನ ಜಾರಿಗೆ ಶ್ರಮ ವಹಿಸುತ್ತಿದ್ದು ಜಿಲ್ಲೆಯ ಎಲ್ಲ ಜನತೆ ಸಹಕರಿಸಬೇಕೆಂದು ಎಂದರು

ಇಂದು ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ರಾಜ್ಯ ಸರ್ಕಾರ, ಜಿಲ್ಲಾಡಳಿತ ನೀಡುವ ಸೂಚನೆಗಳನ್ನು ಸಾರ್ವಜನಿಕರು ಪಾಲಿಸಬೇಕು. ಅನಗತ್ಯವಾಗಿ ಮನೆಯಿಂದ ಹೊರ ಬರಬಾರದು. ಅನಾವಶ್ಯಕವಾಗಿ ಓಡಾಡಬಾರದು. ಹಾಗೂ ಸುಳ್ಳು ಸುದ್ದಿಗೆ ಕಿವಿಗೊಡಬಾರದು ಎಂದರು.

ಗ್ರಾಮಾಂತರ ಪ್ರದೇಶಗಳಿಂದ ನಗರಕ್ಕೆ ಜನರು ಯಾವುದೇ ಕಾರಣಕ್ಕೂ ಆಗಮಿಸಬಾರದು. ಈ ಕೊರೊನಾ ಮಹಾಮಾರಿಯ ಹರಡುವಿಕೆಯನ್ನು ನಿಯಂತ್ರಿಸಲು ಎಲ್ಲರೂ ಸಹಕರಿಸಬೇಕೆಂದು ಅವರು ಮನವಿ ಮಾಡಿದರು.

ರೂ.74 ಲಕ್ಷದಲ್ಲಿ ಲ್ಯಾಬ್

ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ವೈರಸ್ ಪರೀಕ್ಷಾ ಲ್ಯಾಬ್ ಸ್ವಲ್ಪ ತಡವಾಗುತ್ತಿದೆ. ಕಾರಣ ಕೇಂದ್ರ ಸರ್ಕಾರ ಕೂಡ ದಾವಣಗೆರೆ, ಹಾವೇರಿ, ಬಳ್ಳಾರಿ ಹೀಗೆ ಎರಡು ಮೂರು ಜಿಲ್ಲೆ ಸೇರಿಸಿ ಒಂದು ಲ್ಯಾಬ್ ಮಾಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ಎಸ್‍ಡಿಆರ್‍ಎಫ್ ಅನುದಾನದಲ್ಲೇ ಜಿಲ್ಲೆಗೆ ಪ್ರತ್ಯೇಕವಾಗಿ ಒಂದು ಲ್ಯಾಬ್‍ನ್ನು ಜಿಲ್ಲಾಸ್ಪತ್ರೆಯಲ್ಲಿ ತೆರೆಯಲಾಗುವುದು ಎಂದು ಕೇಂದ್ರಕ್ಕೆ ಮನವರಿಕೆ ಮಾಡಿ, ಲ್ಯಾಬ್‍ನ ಕೆಲಸ ಆರಂಭಿಸಲಾಗಿದೆ. ರೂ.74 ಲಕ್ಷದಲ್ಲಿ ಲ್ಯಾಬ್ ಯೋಜನೆ ತಯಾರಿಸಿದ್ದು ಅನುಮೋದನೆಗಾಗಿ ಆಯುಕ್ತರಿಗೆ ಕಡತವನ್ನು ಕಳುಹಿಸಿಕೊಡಲಾಗಿದೆ. ಶೀಘ್ರದಲ್ಲಿ ಲ್ಯಾಬ್ ಕಾರ್ಯಾರಂಭವಾಗಲಿದೆ ಎಂದರು.

ಈಗಾಗಲೇ ಸಿದ್ಧವಾಗಿರುವ ನಗರದ ಎಸ್ ಎಸ್ ಹೈಟೆಕ್ ಆಸ್ಪತ್ರೆಯ ಲ್ಯಾಬ್‍ನಲ್ಲಿ ಕೋವಿಡ್ ಪರೀಕ್ಷೆಗಳನ್ನು ಆರಂಭಿಸಲಾಗುವುದು. ಬುಧವಾರದಂದು ಎನ್‍ಎಬಿಎಲ್ ಅನುಮೋದನೆ ದೊರೆಯಲಿದೆ. ನಂತರದಲ್ಲಿ ಪರೀಕ್ಷೆಗಳನ್ನು ಆರಂಭಿಸಿ ಅನುಕೂಲ ಮಾಡಲಾಗುವುದು.

ಪಾಲಿಕೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಹಾಗೂ ನಗರದಿಂದ ಯಾರೂ ಹೊರ ಹೋಗಬಾರದು ಹಾಗೂ ನಗರದ ಒಳಕ್ಕೆ ಯಾರೂ ಹೊರಗಿನಿಂದ ಬರದಂತೆ ಪ್ರವೇಶವನ್ನು ನಿರ್ಬಂಧಿಸಲಾಗುವುದು ಎಂದರು.

ಪ್ರಸ್ತುತ ನಗರದಲ್ಲಿ 63 ಸಾವಿರ ಜನರನ್ನು ಕೋವಿಡ್ ಹಿನ್ನೆಲೆ ಸಮೀಕ್ಷೆ ನಡೆಸಲಾಗಿದೆ. ಈ ಯಾರಲ್ಲೂ ಕೋವಿಡ್ ಲಕ್ಷಣಗಳು ಕಂಡುಬಂದಿಲ್ಲ. ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಸ್ತುತ 110 ಬೆಡ್‍ಗಳು ಕೋವಿಡ್ ಚಿಕಿತ್ಸೆ ನೀಡಲು ಸಿದ್ದವಿದ್ದು, ಹೆಚ್ಚಿನ ಪ್ರಕರಣಗಳು ಕಂಡುಬಂದಲ್ಲಿ ಬಾಪೂಜಿ ಮತ್ತು ಹೈಟೆಕ್ ಆಸ್ಪತ್ರೆಗಳಲ್ಲಿ ಸಹ ಬೆಡ್‍ಗಳನ್ನು ಕಾಯ್ದಿರಿಸಲಾಗಿದೆ ಎಂದರು. ಪ್ರಸ್ತುತ 800 ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು ಶೀಘ್ರದಲ್ಲೇ ಸೋಂಕಿನ ಮೂಲ ಪತ್ತೆ ಹಚ್ಚಲಾಗುವುದು ಎಂದರು.

ಇಂದು ಸಂಜೆಯ ಮಾಹಿತಿ ಪ್ರಕಾರ  ಜಿಲ್ಲೆಯಲ್ಲಿ ಇಂದು ಹೊಸದಾಗಿ 12 ಪ್ರಕರಣ ಪತ್ತೆಯಾಗುವ ಮೂಲಕ ದಾವಣಗೆರೆ ನಗರದಲ್ಲಿ ಸೋಂಕಿತರ ಸಂಖ್ಯೆ 44 ಕ್ಕೆ ಏರಿಕೆಯಾಗಿದೆ. ಇದರಲ್ಲಿ 3 ಸೋಂಕಿತರ ಸಾವನ್ನಪ್ಪಿದ್ದಾರೆ. ಇನ್ನುಳಿದಂತೆ 2 ಗುಣಮುಖರಾಗಿದ್ದಾರೆ. ಈ 5 ಜನರನ್ನು ಹೊರತುಪಡಿಸಿದರೆ, ಜಿಲ್ಲೆಯಲ್ಲಿ ಇನ್ನು 39 ಪ್ರಕರಣಗಳು ಆಕ್ಟಿವ್ ಆಗಿವೆ.

ಪತ್ರಿಕಾಗೋಷ್ಟಿಯಲ್ಲಿ ಸಂಸದರಾದ ಜಿ.ಎಂ.ಸಿದ್ದೇಶ್ವರ, ಶಾಸಕರಾದ ಎಸ್.ಎ.ರವೀಂದ್ರನಾಥ, ಪ್ರೊ.ಲಿಂಗಣ್ಣ, ಎಸ್.ವಿ.ರಾಮಚಂದ್ರ, ಜಿ.ಪಂ.ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಪಾಲಿಕೆ ಮೇಯರ್ ಬಿ.ಜಿ.ಅಜಯಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ಇತರೆ ಅಧಿಕಾರಿಗಳು ಇದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top