ಡಿವಿಜಿ ಸುದ್ದಿ, ದಾವಣಗೆರೆ: ನಿನ್ನೆ 12 ಪಾಸಿಟಿವ್ ಕೇಸ್ ಬಂದಿದೆ. ಅದರಲ್ಲಿ ಹೆಚ್ಚಿನವು ಜಾಲಿನಗರಕ್ಕೆ ಸಂಬಂಧಪಟ್ಟಿವೆ. ಹೀಗಾಗಿ ಕೆಂಟೆನ್ ಮೆಂಟ್ ಜೋನ್ ನಲ್ಲಿ ಪ್ರತಿ ಮನೆಯ ಎಲ್ಲಾ ಸದದ್ಯರನ್ನು ತಪಾಸಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸೀಲ್ ಡೌನ್ ಪ್ರದೇಶ ಜಾಲಿನಗರ ವೀಕ್ಷಣೆ ನಂತರ ಮಾತನಾಡಿದ ಮಾತನಾಡಿದ ಅವರು, ಕೆಟಿಜೆ ನಗರದಲ್ಲಿ ಪ್ರಕರಣ ಪತ್ತೆಯಾದ ಹಿನ್ನೆಲೆ ಹೊಸ ಕಂಟೈನ್‍ಮೆಂಟ್ ಜೋನ್ ಮಾಡಲಾಗಿದೆ. ಜಾಲಿನಗರದ ಎಲ್ಲಾ ಪ್ರಕರಣಗಳು ಪಿ-556 ಅವರಿಗೆ ಸಂಬಂಧಿಸಿದೆ. ಈ ಹಿನ್ನೆಲೆಯಲ್ಲಿ ತಪಾಸಣೆಯಲ್ಲಿ ಆಶಾ ಕಾರ್ಯಕರ್ತೆಯರ ಜೊತೆ ಆರೋಗ್ಯಾಧಿಕಾರಿಗಳನ್ನು ನೇಮಿಸಲಾಗಿದ್ದು ಇವರು ಪಿಪಿಇ ಕಿಟ್ ಧರಿಸಿ ಎಲ್ಲ ಮನೆಗಳ ಪ್ರತಿ ಸದಸ್ಯರ ಆರೋಗ್ಯ ತಪಾಸಣೆ ಮಾಡುತ್ತಾರೆ ಎಂದರು.
ಆರೋಗ್ಯಾಧಿಕಾರಿಗೆ ಅವರ ಆರೋಗ್ಯದ ಕುರಿತು ಖಚಿತ ಮಾಹಿತಿ ತಿಳಿಯುತ್ತದೆ. ಈ ಸಮಯದಲ್ಲಿ ಕೂಡಲೇ ಅಂತಹವರನ್ನು ಕರೆದುಕೊಂಡು ಬರಲು ಹಾಗೂ ಸಾಗಿಸಲು ಆಂಬ್ಯುಲೆನ್ಸ್, ಬಸ್ ಜೊತೆಗೆ ಅಗತ್ಯವಾದ ಎಲ್ಲ ವ್ಯವಸ್ಥೆ ಮಾಡಲಾಗಿದ್ದು ಹೀಗೆ ಒಂದು ಸಲ ಎಲ್ಲರನ್ನೂ ಆರೋಗ್ಯ ತಪಾಸಣೆಗೆ ಒಳಪಡಿಸುವುದು ಜಿಲ್ಲಾಡಳಿತ ಉದ್ದೇಶವಾಗಿದೆ ಎಂದರು.
ಆರೋಗ್ಯ ತಪಾಸಣೆಗಾಗಿ ಇಷ್ಟು ದಿನ ನಾವು ಮನೆ ಮನೆಗೆ ಸರ್ವೇಕ್ಷಣಾ ತಂಡ ಕಳುಹಿಸಿದಾಗ ಅವರು ಮನೆಯ ಎದುರಿಗೆ ಹೋಗಿ ಕೇಳಿಕೊಂಡು ಬರುತ್ತಿದ್ದರು. ಈ ಸಂದರ್ಭದಲ್ಲಿ ಬಹಳಷ್ಟು ಜನರು ತಮಗೆ ಇದ್ದಂತಹ ಜ್ವರ, ಕೆಮ್ಮು, ನೆಗಡಿ ವಿಷಯ ಹೇಳದೆ ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದರು. ಅಕಸ್ಮಾತಾಗಿ ಹೇಳಿದಲ್ಲಿ ನಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ ಜೊತೆಗೆ ಕ್ವಾರಂಟೈನ್‍ಲ್ಲಿ ಇಡುತ್ತಾರೆ ಎನ್ನುವ ದೃಷ್ಟಿಯಿಂದ ಮರೆ ಮಾಚುತ್ತಿದ್ದರು. ಆದರೆ ಈಗ ಹಾಗೆ ಮುಚ್ಚಿಡಲು ಬರುವುದಿಲ್ಲ ಎಂದು ತಿಳಿಸಿದರು.
ಜಾಲಿನಗರ ಸಂಪೂರ್ಣ ಸ್ವಚ್ಛ ಕಾರ್ಯ: ಅತಿ ಹೆಚ್ಚು ಪ್ರಕರಣಗಳಿರುವ ಜಾಲಿನಗರವನ್ನು ಸಂಪೂರ್ಣ ಸ್ವಚ್ಛ ಮಾಡಬೇಕಾಗಿದೆ. ಇಲ್ಲಿ ಇರುವಂತಹ ಎಲ್ಲರ ಆರೋಗ್ಯ ತಪಾಸಣೆ ಮಾಡಬೇಕೆಂಬ ಉದ್ದೇಶದಿಂದ ಎಸ್‍ಪಿ, ಜಿಲ್ಲಾ ಶಸ್ತ್ರ ಚಿಕಿತ್ಸಕರು, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಡಿಎಚ್‍ಒ, ಎಡಿಸಿ ಎಲ್ಲರೂ ಸೇರಿ ಒಂದು ಯೋಜನೆ ತಯಾರಿಸಿದ್ದು, ಅದರಂತೆ ಇಂದು ಕಾರ್ಯಗತಗೊಳಿಸಲಾಗಿದೆ. ಆರೋಗ್ಯ ತಪಾಸಣೆಗಾಗಿ 20 ತಂಡ ಮಾಡಲಾಗಿದೆ. ಆ ಪ್ರತಿ ತಂಡಕ್ಕೆ ವಿಶೇಷ ಆರೋಗ್ಯಾಧಿಕಾರಿಯನ್ನು ನೇಮಿಸಲಾಗಿದೆ. ಇವರು ಪ್ರತಿ ಮನೆಗೆ ಹೋಗುತ್ತಾರೆ. ಎಲ್ಲ ರಸ್ತೆಯ ಪ್ರತಿ ಮನೆ ಒಳಗೊಂಡು, ಈ ಏರಿಯಾದೊಳಗೆ ಇರುವಂತಹ ಸುಮಾರು 2000 ಮನೆಗಳ ಸದಸ್ಯರನ್ನು ತಪಾಸಣೆ ನಡೆಯಲಿದೆ. ಇವತ್ತು ಎಷ್ಟು ಸಾಧ್ಯವೋ ಅಷ್ಟು ನಡೆಯಲಿದ್ದು, ಉಳಿದಿದ್ದನ್ನು ನಾಳೆಗೆ ಮುಗಿಸುವ ಯೋಜನೆ ಇದೆ ಎಂದು ಮಾಹಿತಿ ನೀಡಿದರು.
ಎಸ್.ಎಂ.ಕೃಷ್ಣ ನಗರದ ಅರ್ಬನ್ ಹೆಲ್ತ್ ಸೆಂಟರ್‍ನಲ್ಲಿ ಗಂಟಲು ದ್ರವ ಮಾದರಿ ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾಗಿದೆ. ಗಂಟಲು ದ್ರವ ಮಾದರಿ ಸಂಗ್ರಹಕ್ಕೆ ಬಹಳಷ್ಟು ದೂರ ಹೋಗುವ ಅವಶ್ಯಕತೆ ಇಲ್ಲ. ಈ ಹಿನ್ನೆಲೆಯಲ್ಲಿ ಗರಿಷ್ಟ ಮಟ್ಟದಲ್ಲಿ ಸ್ಯಾಂಪಲ್ ಸಂಗ್ರಹಿಸಿ ನಾವು ಪರೀಕ್ಷೆಗೆ ಕಳುಹಿಸುವ ಮೂಲಕ ಹೆಚ್ಚಿನ ರೀತಿಯಲ್ಲಿ ಸೋಂಕು ಹರಡದಂತೆ ತಡೆಗಟ್ಟುವ ದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗಿದೆ ಎಂದರು.