ಡಿವಿಜಿ ಸುದ್ದಿ, ದಾವಣಗೆರೆ: ಯುಗಾದಿ ಹಬ್ಬದ ಹಿನ್ನೆಲೆ ಬಟ್ಟೆ ಶಾಪ್ ಗಳನ್ನು ತರೆಯಲು ಅನುಮತಿ ನೀಡಬೇಕು ಎಂದು ನಗರದ ಬಟ್ಟೆ ವ್ಯಾಪಾರಿಗಳು ಕೇಳಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು, ಕೆಲವು ನಿಯಮ ವಿಧಿಸಿ ಶಾಪ್ ತೆರೆಯಲು ಅನುಮತಿ ನೀಡಿದರು.
ಕೊರೊನಾ ವೈರಸ್ ಭೀತಿ ಹಿನ್ನೆಲೆ ರಾಜ್ಯದಾದ್ಯಂತ ಮಾ. 31 ವರೆಗೆ ಬಂದ್ ಘೋಷಿಸಲಾಗಿದೆ. ನಗರದ ಬಟ್ಟೆ ಅಂಗಡಿಗಳಲ್ಲಿ ಜನದಟ್ಟಣಿ ಉಂಟಾಗಿದ್ದರಿಂದ ಶಾಪ್ ಗಳನ್ನು ಮುಚ್ಚುವಂತೆ ಸೂಚಿಸಲಾಗಿತ್ತು. ಆದರೆ, ಬೆಂಗಳೂರು, ಹುಬ್ಬಳ್ಳಿಯಲ್ಲಿ ಬಟ್ಟೆ ಶಾಪ್ ಗಳು ಎಂದಿನಂತೆ ತೆರೆದಿವೆ. ಹೀಗಾಗಿ ದಾವಣಗೆರೆಯಲ್ಲಿಯೂ ಬಟ್ಟೆ ಶಾಪ್ ತೆರೆಯಲು ಅನುಮತಿ ನೀಡಬೇಕು ಎಂದು ಬಟ್ಟೆ ಅಂಗಡಿ ಮಾಲೀಕರು ಆಗ್ರಹಿಸಿದರು.
ಕೊರೊನಾ ವೈರಸ್ ಸೋಂಕು ತಡೆಗಟ್ಟುವ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಜನಸಂದಣಿ ಹೆಚ್ಚಿರುವಲ್ಲಿ ಮಾತ್ರ ಅಂಗಡಿ, ಮುಗ್ಗಟ್ಟು ಮುಚ್ಚಲು ಕ್ರಮ ತೆಗೆದುಕೊಂಡಿದ್ದೇವೆಯೇ ಹೊರತು ಬಟ್ಟೆ ಅಂಗಡಿ ಮಾಲೀಕರಿಗೆ ತೊಂದರೆ ಕೊಡುವ ಹಾಗೂ ನಷ್ಟ ಮಾಡುವ ದುರುದ್ದೇಶ ಜಿಲ್ಲಾಡಳಿತಕ್ಕಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸ್ಪಷ್ಟಪಡಿಸಿದರು.
ಇಂದು ಜಿಲ್ಲಾಡಳಿತದ ಕಚೇರಿ ಸಭಾಂಗಣದಲ್ಲಿ ಕೊರೊನಾ ವೈರಸ್ ಸೋಂಕಿನ ಅರಿವು ಮತ್ತು ನಿಯಂತ್ರಣ ಕುರಿತು ಬಟ್ಟೆ ಅಂಗಡಿಗಳ ಮಾಲೀಕರೊಂದಿಗೆ ಚರ್ಚಿಸಲು ಕರೆದಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಟ್ಟೆ ಅಂಗಡಿ ಮಾಲೀಕರಿಗೆ ಕೆಲವು ನಿಯಮ ಪಾಲಿಸುವಂತೆ ಸೂಚನೆ ನೀಡಿ, ಶಾಪ್ ತೆರೆಯಲು ಅನುಮತಿ ನೀಡಲಾಯಿತು. ಅಂಗಡಿ ಮಾಲೀಕರು ಅವಘಡ ಸಂಭವಿಸದಂತೆ ಮುಂಜಾಗ್ರತಾ ಕ್ರಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಏನು ನಿಯಮ ಪಾಲಿಸಬೇಕು ..?
- ಪ್ರತಿ ಅಂಗಡಿ ಮುಖ್ಯ ದ್ವಾರದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳಿಗೆ ವ್ಯವಸ್ಥೆ
- ದಟ್ಟಣಿ ನಿಯಂತ್ರಣಕ್ಕೆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ನೇಮಿಸಿಕೊಳ್ಳುವುದು
- ಸಿಬ್ಬಂದಿಗೆ ಶೀತ , ಕೆಮ್ಮಿನ ಲಕ್ಷಣಗಳು ಕಂಡುಬಂದಲ್ಲಿ ರಜೆ ಮೇಲೆ ಕಳುಹಿಸಬೇಕು
- ಗ್ರಾಹಕರಿಗೆ ಫ್ಲೂ ಕಂಡುಬಂದಲ್ಲಿ ನೇರವಾಗಿ ಆಸ್ಪತ್ರೆಗೆ ಕಳುಹಿಸಬೇಕು.
- ಕೌಂಟರ್‍ಗಳಲ್ಲಿ ಸ್ಯಾನಿಟೈಸರ್‍ಗಳನ್ನು ಇಡುವುದು
- ಲಿಫ್ಟ್ ಮತ್ತು ಎಸಿ ಯ ಬಳಕೆ ಸಂಪೂರ್ಣವಾಗಿ ನಿಷೇಧ ಮಾಡಬೇಕು.
- ಪ್ರತಿ ಗಂಟೆಗೆ ಒಂದು ಸಲ ಅಂಗಡಿಯನ್ನು ಸ್ವಚ್ಚಗೊಳಿಸಬೇಕು.
- ಗ್ರಾಹಕರ ನಡುವೆ ಅಂತರವನ್ನು ಕಾಪಾಡಿಕೊಳ್ಳುವಂತೆ ನೋಡಿಕೊಳ್ಳವುದು.
- ಪ್ರತಿ ಅಂಗಡಿಗೆ ಒಂದೇ ಮುಖ್ಯದ್ವಾರ ಇರುವಂತೆ ನೋಡಿಕೊಳ್ಳಬೇಕು.
- ಅಂಗಡಿಗಳು ಬೆಳಿಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ತಗೆಯಬೇಕು.