ಡಿವಿಜಿ ಸುದ್ದಿ, ದಾವಣಗೆರೆ: ಕೆನರಾ ಬ್ಯಾಂಕ್ 114ನೇ ಸಂಸ್ಥಾಪಕ ದಿನಾಚರಣೆ ಹಾಗೂ 64 ನೇ ಕನ್ನಡ ರಾಜ್ಯೋತ್ಸವನ್ನು ನ. 19 ರಂದು ವಿದ್ಯಾನಗರದ ಕುವೆಂಪು ಕನ್ನಡ ಭವನದಲ್ಲಿ ಸಂಜೆ 6.00 ಗಂಟೆಗೆ ಆಯೋಜಿಸಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆನರಾ ಬ್ಯಾಂಕ್‌ನ ದಾವಣಗೆರೆ ಕ್ಷೇತ್ರೀಯ ಕಾರ್ಯಾಲಯದ ಸಹಾಯಕ ಮಹಾಪ್ರಬಂಧಕರಾದ ಶ್ರೀ ಹೆಚ್. ರಘುರಾಜ್‌ರವರು ವಹಿಸಿಕೊಳ್ಳಲಿದ್ದಾರೆ. ಹಿರಿಯ ಸಾಹಿತಿಗಳು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೆಚ್.ಬಿ. ಮಂಜುನಾಥ್ ಉದ್ಘಾಟಸಿ, ಕನ್ನಡ ಭಾಷಾ ಪ್ರೇಮದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ೧೧೪ನೇ ಕೆನರಾಬ್ಯಾಂಕ್ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಸಂಸ್ಥಾಪಕರಾದ ಕೀರ್ತಿಶೇಷ ಅಮ್ಮೆಂಬಳ ಸುಬ್ಬಾರಾವ್ ಪೈ ಅವರ ಸಂಸ್ಮರಣೆ ನಡೆಯಲಿದೆ. ವಿಶ್ರಾಂತ ವಿಭಾಗೀಯ ಪ್ರಬಂಧಕರಾದ ಎನ್. ಟಿ. ಯರ‍್ರಿಸ್ವಾಮಿ ಸಂಸ್ಮರಣಾ ದಿನಾಚಾರಣೆ ಬಗ್ಗೆ ಮಾತನಾಡಲಿದ್ದಾರೆ ಎಂದು ಶ್ರೀಮತಿ ಜಿ.ಆರ್. ನಾಗರತ್ನ ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಈ ವರ್ಷ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಸ್.ಟಿ. ಶಾಂತಗಂಗಾಧರ್, ಕೊಡಗನೂರು ಜಯಕುಮಾರ್ ಮತ್ತು ಸಾಲುಮರದ ವೀರಾಚಾರ್ ಅವರನ್ನು ಅಭಿನಂದಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆನರಾಬ್ಯಾಂಕ್‌ನ ಕ್ಷೇತ್ರೀಯ ಕಾರ್ಯಾಲಯದ ವಿಭಾಗೀಯ ಪ್ರಬಂಧಕರಾದ ಶ್ರೀ ಬಿ.ಜಿ. ದೊಡ್ಡಮನಿಯವರು ತಿಳಿಸಿದರು.

ಸಭಾ ಕಾರ್ಯಕ್ರಮದ ನಂತರ ಕೆನರಾಬ್ಯಾಂಕ್ ಉದ್ಯೋಗಿ ಕೆ. ರಾಘವೇಂದ್ರ ನಾಯರಿ ಮತ್ತು ಇತರ ಹವ್ಯಾಸಿ ಕಲಾವಿದರ ಕೂಡುವಿಕೆಯಲ್ಲಿ “ಜಾಂಬವತಿ ಕಲ್ಯಾಣ” ಎನ್ನುವ ಕಥಾನಕದ ಯಕ್ಷಗಾನ ಪ್ರದರ್ಶನ, ಬೆಳಕು ಜಾನಪದ ಕಲಾ ತಂಡದ ಶ್ರೀಮತಿ ಸಿ.ಕೆ. ರುದ್ರಾಕ್ಷಿಬಾಯಿ ಮತ್ತು ಅವರ ಶಿಷ್ಯವೃಂದದಿಂದ ಸಂಗೀತ ಮತ್ತು ನೃತ್ಯ ಪ್ರದರ್ಶನ ಹಾಗೂ ಕೆನರಾಬ್ಯಾಂಕ್ ಉದ್ಯೋಗಿಗಳಿಂದ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೆನರಾ ಬ್ಯಾಂಕ್ ಉದ್ಯೋಗಿಗಳಿಗೆ ಏರ್ಪಡಿಸಿದ್ದ ಭಾಷಣ ಮತ್ತು ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕೂಡಾ ನಡೆಯಲಿವೆ ಎಂದು ಕೆನರಾಬ್ಯಾಂಕ್ ಕ್ಷೇತ್ರೀಯ ಕಾರ್ಯಾಲಯದ ವ್ಯವಸ್ಥಾಪಕರಾದ ಎಸ್. ಮಹೇಶ್ವರನ್ ತಿಳಿಸಿದರು.



