ಡಿವಿಜಿಸುದ್ದಿ.ಕಾಂ, ದಾವಣಗೆರೆ : ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಸೈನಿಕರ ಬದುಕು-ಬವಣೆಯ ಪುಸ್ತಕಗಳನ್ನು ವಿಮರ್ಶೆ ಮಾಡವುದು ಸರಿಯಲ್ಲ ಎಂದು ಲೇಖಕ ಹಾಗೂ ವಾಗ್ಮಿ ಆದರ್ಶ ಗೋಖಲೆ ಹೇಳಿದರು.
ನಗರದ ರಾಷ್ಟ್ರೋತ್ತನ ವಿದ್ಯಾ ಕೇಂದ್ರದಲ್ಲಿ ಲೇಖಕ ಹಾಗೂ ಪತ್ರಕರ್ತ ಸಂತೋಷ್ ತಮ್ಮಯ್ಯ ಬರೆದಿರುವ ಸೈನಿಕರ ಕುರಿತ ಸಮರ ಭೈರವಿ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು,ಕನ್ನಡ ಭಾಷೆಯಲ್ಲಿ ಸೈನಿಕರ ಕುರಿತ ಪುಸ್ತಕಗಳು ಸಿಗುವುದು ಅಪರೂಪ. ಸಂತೋಷ್ ತಮ್ಮಯ್ಯ ಅವರು ಸೈನಿಕರ ಕುರಿತು ಪಸ್ತಕ ಬರೆದಿರುವುದು ಸಂತೋಷದ ವಿಚಾರ. ದೇಶಕ್ಕಾಗಿ ಪ್ರಾಣ ಮುಡಿಪಾಗಿಟ್ಟ ಸೈನಿಕರ ಪುಸ್ತಕ ವಿಮರ್ಶಿಸುವುದು ಸರಿಯಲ್ಲ ಎಂದರು.
ಸೈನಿಕ ಮಗನನ್ನು ದೇಶಕ್ಕೆ ಅರ್ಪಿಸಿದ ತಾಯಿ ರೋನಾ, ಬಾರದ ಲೋಕಕ್ಕೆ ಹೋಗಿರುವ ತಂದೆಯನ್ನು ನೆನೆಯುವ ಪುಟ್ಟ ಬಾಲಕಿ, ವೀರ ಸೇನಾನಿ ಪತಿ ಕಣ್ಣೀರು ಹಾಕಿ ಬೀಳ್ಕೊಡುವ ಪತ್ನಿ ಸೇರಿದಂತೆ ಹತ್ತು ಹಲವು ಕರುಣಾಜನಕ ಕಥನಗಳನ್ನು ಈ ಪುಸ್ತಕ ಒಳಗೊಂಡಿದೆ.
ಸ್ವಾಮಿ ವಿವೇಕಾನಂದ ಅವರ ಚಿಕಾಗೋ ಭಾಷಣದ 151 ವರ್ಷಾಚರಣೆ, ಗಾಂಧಿಜಿ ಅವರ 151ನೇ ಜಯಂತಿ, ಜಲಿಯಾನ್ ವಾಲಬಾಗ್ ಹತ್ಯಾಕಾಂಡ 100 ನೇ ವರ್ಷದ ಕರಾಳ ನೆನಪು, ಕನ್ಯಕುಮಾರಿಯಲ್ಲಿ ವಿವೇಕಾನಂದ ಸ್ಮಾರಕ ನಿರ್ಮಾಣದ 50 ನೇ ವರ್ಷಾಚರಣೆ, ಕಾರ್ಗಿಲ್ ದಿಗ್ವಿಜಯದ 20 ನೇ ವರ್ಷಾರಣೆ ಮಾಡಲಾಗುತ್ತಿದೆ. ಈ ವಿಶೇಷ ವರ್ಷದಲ್ಲಿ ಸೈನಿಕರಿಗೆ ಸಂಬಂಸಿದ ಸಮರ ಭೈರವಿ ಪುಸ್ತಕ ಬಿಡುಗಡೆಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ತಲುಪಲಿ ಎಂದರು.
ಲೇಖಕ ಸಂತೋಷ್ ತಮ್ಮಯ್ಯ ಮಾತನಾಡಿ, ಕೊಡಗು ಯೋಗ್ಯ ಸಂಸ್ಕೃತಿ ಇರುವ ಜಿಲ್ಲೆ. ದೇಶಕ್ಕೆ ಇಬ್ಬರು ಜನರಲ್ ಹಾಗೂ 36 ಲೆಫ್ಟಿನೆಂಟ್ ಜನರಲ್‌ಗಳನ್ನು ನೀಡಿದೆ. ಸೈನಿಕರ ತ್ಯಾಗ ಬಲಿದಾನದ ವಾತಾವರಣದಲ್ಲಿ ಬೆಳೆದಿರುವುದರಿಂದ ಸೈನಿಕರ ಕುರಿತಾಗಿ ಪುಸ್ತಕ ಬರೆಯಲು ಪ್ರೇರಣೆಯಾಯಿತು ಎಂದರು.
ನಿವೃತ್ತ ಏರ್ ಮಾರ್ಷಲ್ ಹಾಗೂ ನಿವೃತ್ತ ಸೈನಿಕ ಸಂಘದ ಅಧ್ಯಕ್ಷ ಸತ್ಯಪ್ರಕಾಶ್, ಸಪ್ತಗಿರಿ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.