ಡಿವಿಜಿ ಸುದ್ದಿ, ದಾವಣಗೆರೆ: ಇಂದಿನ ಯುವ ಸಮೂಹ ಟಿಕ್ ಟಾಕ್, ಸೋಷಿಯಲ್ ಮೀಡಿಯಾ, ಗೇಮ್ ಆಡುವುದರಲ್ಲಿ ಸಮಯ ಕಳೆಯೋದು ಹೆಚ್ಚು. ಇನ್ನು ಈ ವಯಸ್ಸಿನಲ್ಲಿ ಸಾಮಾಜಿಕ ಜವಾಬ್ದಾರಿಯಂತೂ ಅವರ ತಲೆಯೊಳಗೆ ಹೋಗದ ವಿಷಯ. ಇಂತಹ ವಯಸ್ಸಿನ ದಾವಣಗೆರೆಯ ಯುವಕನೊಬ್ಬ ಲಂಡನ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೂ, ಪಾರ್ಟ್ ಟೈಮ್ ಕೆಲಸದಲ್ಲಿ ಗಳಿಸಿದ ಹಣದಲ್ಲಿ ಕೊರೊನಾ ವಾರಿಯರ್ಸ್, ರೈತರು, ಬಡವರಿಗೆ ಸಹಾಯ ಮಾಡುವ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆದಿದ್ದಾನೆ.

ದಾವಣಗೆರೆಯ ಉದ್ಯಮಿ ಗಣೇಶ್ ಮಾಗಾನಹಳ್ಳಿ-ಪರಿಮಳಾ ದಂಪತಿಯ ಮಗನಾದ 20 ವರ್ಷದ ಅನಿರುದ್ಧ್, ಚಿಕ್ಕ ವಯಸ್ಸಿನಲ್ಲಿಯೇ ಸಾಮಾಜಿಕ ಕಳಕಳಿ ಮೈಗೂಡಿಸಿಕೊಂಡಿದ್ದಾನೆ. ಲಂಡನ್ ನಲ್ಲಿ ಪದವಿ ವಿದ್ಯಾಭಾಸ ಮಾಡುತ್ತಿರುವ ಅನಿರುದ್ಧ್ ರಜೆಯ ಹಿನ್ನೆಲೆ ದಾವಣಗೆರೆಗೆ ಬಂದಿದ್ದಾನೆ. ಇದೇ ಸಮಯಕ್ಕೆ ಇಡೀ ಜಗತ್ತಿನಾದ್ಯಂತ ಕೊರೊನಾ ಮಹಾಮಾರಿ ಆವರಿಸಿಕೊಂಡಿತು. ಇದರಿಂದ ಇಡೀ ಜಗತ್ತಿನಲ್ಲಿಯೇ ಲಾಕ್ ಡೌನ್ ಆಯ್ತು. ಇದಕ್ಕೆ ಭಾರತವೂ ಹೊರತಾಗಲಿಲ್ಲ.

ಈ ಸ್ಥಿತಿಯಲ್ಲಿ ಬಡವರು, ರೈತರು, ಕೂಲಿ ಕಾರ್ಮಿಕರ ಕಷ್ಟವನ್ನು ಟಿವಿ, ಸೋಷಿಯಲ್ ಮೀಡಿಯಾಗಳಲ್ಲಿ ನೋಡುತ್ತಿದ್ದ ಅನಿರುದ್ಧ್, ಕೇವಲ ಕಮೆಂಟ್ ಮಾಡುವುದರಿಂದ ಏನು ಪ್ರಯೋಜನ ಆಗಲ್ಲ. ಹೀಗಾಗಿ ನಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡೋಣ ಎಂದು ನಿರ್ಧರಿಸಿದ. ಆದರೆ, ಈ ವಿಚಾರಕ್ಕೆ ಮನೆಯಲ್ಲಿ ಹಣ ಕೇಳಿದ್ರೆ ಏನು ಅಂದುಕೊಳ್ಳುತ್ತಾರೋ ಅನ್ನೋ ಭಯ ಕೂಡ ಇತ್ತು. ಆಗ ಅವನಿಗೆ ಹೊಳೆದ ಐಡಿಯಾವೇ ಲಂಡನ್ ನಲ್ಲಿ ಪಾರ್ಟ್ ಟೈಮ್ ನಲ್ಲಿ ಗಳಿಸಿದ ಹಣವನ್ನು ಇಂತಹ ಒಳ್ಳೆಯ ಕಾರ್ಯಕ್ಕೆ ಯಾಕೆ ಬಳಸಿಕೊಳ್ಳಬಾರದು ಅಂತಾ..!

ತನ್ನಲ್ಲಿರುವ ಆಸೆಯನ್ನು ಬೆಂಗಳೂರಿನ ತನ್ನ ಸ್ನೇಹಿತರಲ್ಲಿ ಹಂಚಿಕೊಳ್ಳುತ್ತಾನೆ. ಸ್ನೇಹಿತರು ಕೂಡ ಅನಿರುದ್ಧ್ ಕಾರ್ಯಕ್ಕೆ ಸಹಾಯ ಮಾಡುತ್ತಾರೆ. ವಾರಿರ್ಸ್ ಅಂತಾ ವಾಟ್ಸಾಪ್ ಗ್ರೂಪ್ ಕ್ರಿಯೆಟ್ ಮಾಡಿಕೊಳ್ಳುತ್ತಾನೆ. ಬೆಂಗಳೂರಿನಲ್ಲಿ ಅಗತ್ಯವಿರುವ ಕಡೆ ಕೊರೊನಾ ವಾರಿಯರ್ಸ್, ಕೂಲಿ ಕಾರ್ಮಿಕರಿಗೆ ಮಾಸ್ಕ್, ಹ್ಯಾಂಡ್ ಗ್ಲೌಸ್ ವಿತರಿಸುತ್ತಾನೆ.

ನಂತರ ದಾವಣಗೆರೆಗೆ ಬಂದಾಗ ಜಾಲಿನಗರದಲ್ಲಿ ಸತತ ಎರಡು ತಿಂಗಳ ಸೀಲ್ ಡೌನ್ ಆಗಿದ್ದರಿಂದ ಅಲ್ಲಿನ ಜನರು ಅಗತ್ಯ ವಸ್ತುಗಳಿಲ್ಲದೆ ಪರದಾಡುತ್ತಿದ್ದಾರೆ ಎಂಬ ಸುದ್ದಿ ತಿಳಿದ ತಕ್ಷಣ. ತನ್ನ ಕೈಲಾದಷ್ಟು ಸಹಾಯ ಮಾಡುವ ಉದ್ದೇಶದಿಂದ ಸಾಮಾಜಿಕ ಕಾರ್ಯಕರ್ತರಾದ ಎಂ. ಜಿ. ಶ್ರೀಕಾಂತ್ , ರಾಜು, ಇನಾಯತ್ ಅವರನ್ನು ಸಂಪರ್ಕ ಮಾಡುತ್ತಾನೆ. ಅವರ ಸಲಹೆಯಂತೆ ಜಾಲಿನಗರ ಕಂಟೈನ್ ಮೆಂಟ್ ಝೋನ್ ನಲ್ಲಿ 200 ಕಿಟ್ ತರಕಾರಿ ನೀಡುತ್ತಾನೆ. ನಂತರ ಹರಿಹರ ತಾಲ್ಲೂಕಿನ ರಾಮತೀರ್ಥ ಗ್ರಾಮದಲ್ಲಿ ಬಡವರಿಗಾಗಿ 25 ಕಿಟ್ ಆಹಾರ ಸಾಮಾಗ್ರಿಗಳನ್ನು ವಿತರಿಸಿದ್ದಾನೆ.

ನಾನು ಚಿಕ್ಕವನಿದ್ದಾಗ ಸಮಾಜಕ್ಕೆ ಏನಾದ್ರೂ ಮಾಡಬೇಕು ಅಂತಾ ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದೇ.. ಈಗ ಒಂದು ಅವಕಾಶ ಸಿಕ್ಕಿದೆ. ಈ ಸಮಯದಲ್ಲಿ ನನ್ನ ಕೈಲಾದಷ್ಟು ಸಹಾಯ ಮಾಡಿದ್ಧೇನೆ. ಎಲ್ಲರೂ ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡೋದ್ರಲ್ಲಿ ತಲ್ಲಿನ ಆಗಿರುತ್ತಾರೆ. ಆದರೆ, ನಿಜವಾಗಿ ಕೆಲಸ ಮಾಡಿದರೆ ಮಾತ್ರ ಸಮಸ್ಯೆ ಬಗೆಹರಿಯಲು ಸಾಧ್ಯ.
-ಅನಿರುದ್ಧ್ ,ಮಾಗಾನಹಳ್ಳಿ

ತರಕಾರಿ ಕಿಟ್ ನಲ್ಲಿ ಹಿರೇಕಾಯಿ, ಮೂಲಂಗಿ, ಕ್ಯಾರೇಟ್ , ಮೆಣಸಿನಕಾಯಿ, ಬದನೆಕಾಯಿ, ಜವಳಿಕಾಯಿ, ಸೌತೆಕಾಯಿ, ಈರುಳ್ಳಿ ಪ್ಯಾಕ್ ಮಾಡಲಾಗಿತ್ತು. ಸಾಮಾಜಿಕ ಕಾರ್ಯಕರ್ತರೊಂದಿಗೆ ಸೇರಿಕೊಂಡು ತಾನೇ ಪ್ಯಾಕ್ ಮಾಡಿ, ಜಾಲಿನಗರದ 200 ಮನೆಗೆ ತರಕಾರಿ ಹಂಚಿದ್ದಾನೆ. ಅನಿರುದ್ಧ್ ಸಾಮಾಜಿಕ ಕಳಕಳಿ ನೋಡಿದ ಎಪಿಎಂಸಿ ವರ್ತಕರು ಸಹ ಕಲವೊಂದಿಷ್ಟು ತರಕಾರಿಗಳನ್ನು ಉಚಿತವಾಗಿ ನೀಡಿದ್ದಾರೆ. ಹೊನ್ನೂರ್ ಆಲಿ.ರಂಗಪ್ಪ. ಮಣಿಕಂಠ ಸಹಕರಿಸಿದ್ದಾರೆ.
-ಮುನಿಕೊಂಡಜ್ಜಿ