ಡಿವಿಜಿ ಸುದ್ದಿ, ಬೆಂಗಳೂರು: ಜ್ಯುವೆಲರಿ ಶಾಪ್ ಗಳಲ್ಲಿ 1.16 ಕೆಜಿ ಚಿನ್ನಾಭರಣ ಕದ್ದು ಮಾರಲು ಯತ್ನಿಸಿದ್ದ ಕಳ್ಳನೊಬ್ಬ ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಉತ್ತಮ್ ದೋಲಾಯಿ ಬಂಧಿತ ಆರೋಪಿಯಾಗಿದ್ದು, ನಂದಿನಿ ಲೇಔಟ್ ಪೊಲೀಸರ ಕಾರ್ಯಾಚರಣೆಯಲ್ಲಿ ಬಂಧಿತನಾಗಿದ್ದಾನೆ. ಬಂಧಿತನಿಂದ 45 ಲಕ್ಷ ಮೌಲ್ಯದ 1 ಕೆಜಿ 16 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿ ಉತ್ತಮ್ ದೋಲಾಯಿ ನಂದಿನಿ ಲೇಔಟ್‍ನಲ್ಲಿ ಇದೇ ಜೂನ್ 8ರಂದು ರಾತ್ರಿ ಅನುಮಾನಸ್ಪದವಾಗಿ ಜ್ಯುವೆಲರಿ ಶಾಪ್ ಬಳಿ ಓಡಾಡುತ್ತಿದ್ದ. ಈ ವೇಳೆ ಪೊಲೀಸರು ವಿಚಾರಿಸಿದಾಗ ಆರೋಪಿಯ ಜೇಬಿನಲ್ಲಿ ಚಿನ್ನಾಭರಣಗಳು ಪತ್ತೆಯಾಗಿದ್ದವು. ಚಿನ್ನ ಸಿಕ್ಕ ಕೂಡಲೇ ಪೊಲೀಸರು ಪ್ರಶ್ನಿಸಿದಾಗ ಉತ್ತಮ್ ತಡವರಿಸಿದ. ತಕ್ಷಣವೇ ಆರೋಪಿಯನ್ನ ಠಾಣೆಗೆ ಕರೆತಂದು ವಿಚಾರಿಸಿದಾಗ ಪ್ರಕರಣ ಪತ್ತೆಯಾಗಿದೆ.
ಈ ಸಂಬಂಧ ನಂದಿನಿ ಲೇಔಟ್ ಠಾಣೆಯ ಪೊಲೀಸರು ಆರೋಪಿಯನ್ನ ಸದ್ಯ ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಉತ್ತಮ್ ಬೆಂಗಳೂರಿನ ವಿವಿಧ ಕಡೆ ಕಳ್ಳತನ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.



